Last Updated:
ಗುಜರಾತ್ ಟೈಟಾನ್ಸ್ 2025 ಐಪಿಎಲ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 217 ರನ್ ಗಳಿಸಿ 58 ರನ್ ಜಯ ಸಾಧಿಸಿದೆ. ಸಾಯಿ ಸುದರ್ಶನ್ 82 ರನ್ ಗಳಿಸಿ ಬ್ಯಾಟಿಂಗ್ನಲ್ಲಿ ಮಿಂಚಿದರೆ, ಕನ್ನಡಿಗ ಪ್ರಸಿಧ್ ಕೃಷ್ಣ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 23 ನೇ ಪಂದ್ಯದಲ್ಲಿ ಇಂದು ಗುಜರಾತ್ ಟೈಟಾನ್ಸ್ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ರನ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಗುಜರಾತ್ನ ತವರು ಮೈದಾನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತ್ತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ 82 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 159 ರನ್ಗಳಿಸಿತು.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಭಿಸಿದ ಟೈಟನ್ಸ್ 3ನೇ ಓವರ್ನ್ಲೇ ನಾಯಕ ಗಿಲ್(2) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್ಗೆ ಸುದರ್ಶನ್ ಜೊತೆಯಾದ ಬಟ್ಲರ್ 80ರನ್ಗಳ ಜೊತೆಯಾಟ ನಡೆಸಿದರು. ಬಟ್ಲರ್ 25 ಎಸೆತಗಳಲ್ಲಿ 5 ಬೌಂಡರಿ ಸಹಿತ 36 ರನ್ಗಳಿಸಿ ತೀಕ್ಷಣ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರ ಬಂದ ಶಾರುಖ್ ಖಾನ್ 20 ಎಸೆತಗಳಲ್ಲಿ 36 ರನ್ ಸಿಡಿಸಿದರು. ಇವರು ಸುದರ್ಶನ್ ಜೊತೆಗೂಡಿ 3ನೇ ವಿಕೆಟ್ಗೆ 62 ರನ್ ಸೇರಿಸಿದರು.
ಆರಂಭಿಕನಾಗಿ ಬಂದು 19ನೇ ಓವರ್ನಲ್ಲಿ ಔಟ್ ಆದ ಸುದರ್ಶನ್ 53 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ಗಳ ಸಹಿತ 82 ರನ್ಗಳಿಸಿ ಮತ್ತೊಮ್ಮೆ ದೊಡ್ಡ ಮೊತ್ತ ಪೇರಿಸಲು ಟೈಟನ್ಸ್ಗೆ ನೆರವಾದರು. ಕೊನೆಯಲ್ಲಿ ಅಬ್ಬರಿಸಿದ ರಾಹುಲ್ ತೆವಾಟಿಯಾ 12 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ ಅಜೇಯ 24 ರನ್ಗಳಿಸಿದರು. ರುದರ್ಫೋರ್ಡ್ 7, ರಶೀದ್ ಖಾನ್ 12 ರನ್ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ತುಷಾರ್ ದೇಶಪಾಂಡೆ 53ಕ್ಕೆ2 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ಮತೀಶಾ ತೀಕ್ಷಣ ಹಾಗೂ ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
April 09, 2025 11:30 PM IST