IPL 2025: ರಾಜಸ್ಥಾನ್ ವಿರುದ್ಧ ಡಕ್​ಔಟ್ ಆದ್ರೂ ವಿಶೇಷ ಸಾಧನೆ ಮಾಡಿದ ಕರುಣ್​ ನಾಯರ್! ಐಪಿಎಲ್​​ನಲ್ಲಿ ವಿಶೇಷ ಮೈಲುಗಲ್ಲು | Karun Nair Makes History First Cricketer to Play in Five Tied IPL Matches

IPL 2025: ರಾಜಸ್ಥಾನ್ ವಿರುದ್ಧ ಡಕ್​ಔಟ್ ಆದ್ರೂ ವಿಶೇಷ ಸಾಧನೆ ಮಾಡಿದ ಕರುಣ್​ ನಾಯರ್! ಐಪಿಎಲ್​​ನಲ್ಲಿ ವಿಶೇಷ ಮೈಲುಗಲ್ಲು | Karun Nair Makes History First Cricketer to Play in Five Tied IPL Matches

188 ರನ್​ಗಳಿಸಿದ್ದ ಡೆಲ್ಲಿ

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 188 ರನ್ ಗಳಿಸಿತು. ಅಭಿಷೇಕ್ ಪೊರೆಲ್ (49), ಕೆಎಲ್ ರಾಹುಲ್ (38), ಟ್ರಿಸ್ಟಾನ್ ಸ್ಟಬ್ಸ್ (ಔಟಾಗದೆ 34) ಮತ್ತು ಅಕ್ಷರ್ ಪಟೇಲ್ (34) ರನ್ ಕಲೆಹಾಕಿದರು. ಆದರೆ, ಕರುಣ್ ನಾಯರ್ ರನೌಟ್ ಆಗಿ ಶೂನ್ಯಕ್ಕೆ ವಾಪಸಾದರು. ರಾಯಲ್ಸ್ ಪರ ಜೋಫ್ರಾ ಆರ್ಚರ್ (2/32), ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು. ಕೊನೆಯ ಓವರ್‌ನಲ್ಲಿ ಸಂದೀಪ್ ಶರ್ಮಾ 4 ವೈಡ್ ಮತ್ತು 1 ನೋ-ಬಾಲ್ ಸೇರಿ 19 ರನ್ ಬಿಟ್ಟುಕೊಟ್ಟದ್ದು ಮ್ಯಾಚ್​ ಟರ್ನಿಂಗ್ ಪಾಯಿಂಟ್ ಆಯಿತು.

ಇದನ್ನೂ ಓದಿ: ಬರೋಬ್ಬರಿ 24 ಸಿಕ್ಸರ್, 26 ಎಸೆತಗಳಲ್ಲಿ ಸ್ಫೋಟಕ ಶತಕ! ಚರಿತ್ರೆ ಸೃಷ್ಟಿಸಿದ ಜೈನ್ ನಖ್ವಿ

ಕೊನೆಯ ಓವರ್ ಎಡವಿದ ರಾಜಸ್ಥಾನ್

189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್, ಯಶಸ್ವಿ ಜೈಸ್ವಾಲ್ (51) ಮತ್ತು ನಿತೀಶ್ ರಾಣಾ (51) ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 188 ರನ್ ಗಳಿಸಿ ಟೈ ಸಾಧಿಸಿತು. ಸಂಜು ಸ್ಯಾಮ್ಸನ್ (31) ಗಾಯದಿಂದಾಗಿ ರಿಟೈರ್ಡ್ ಹರ್ಟ್ ಆದರು. ಕೊನೆಯ ಓವರ್‌ನಲ್ಲಿ 9 ರನ್ ಬೇಕಾಗಿದ್ದಾಗ, ಮಿಚೆಲ್ ಸ್ಟಾರ್ಕ್ ಅದ್ಭುತ ಬೌಲಿಂಗ್‌ನಿಂದ 8 ರನ್ ಮಾತ್ರ ಬಿಟ್ಟುಕೊಟ್ಟರು. ಜುರೆಲ್ ಕೊನೆಯ ಎಸೆತದಲ್ಲಿ ಗೆಲ್ಲಲು 2 ರನ್‌ ತೆಗೆಯುವಾಗ ರನೌಟ್ ಆಗಿದ್ದರಿಂದ ಪಂದ್ಯ ಟೈ ಆಯಿತು.

ಸ್ಟಾರ್ಕ್ ಅದ್ಭುತ ಬೌಲಿಂಗ್

ಸೂಪರ್ ಓವರ್‌ನಲ್ಲಿ ರಾಯಲ್ಸ್‌ಗೆ ಸ್ಟಾರ್ಕ್ ಬೌಲಿಂಗ್ ಮಾಡಿದರು. ರಿಯಾನ್ ಪರಾಗ್ ಮತ್ತು ಯಶಸ್ವಿ ಜೈಸ್ವಾಲ್ ರನೌಟ್‌ ಆಗಿ 5 ಎಸೆತಗಳಲ್ಲಿ 11 ರನ್‌ ಗಳಿಸಿ ಡೆಲ್ಲಿಗೆ 12 ರನ್​ ಗುರಿ ನೀಡಿತು. ಡೆಲ್ಲಿ ಪರ ಕೆಎಲ್ ರಾಹುಲ್ (7) ಮತ್ತು ಟ್ರಿಸ್ಟಾನ್ ಸ್ಟಬ್ಸ್ (6) ಬ್ಯಾಟಿಂಗ್‌ಗೆ ಇಳಿದು ಸಂದೀಪ್ ಶರ್ಮಾ ಬೌಲಿಂಗ್‌ನಲ್ಲಿ 4 ಎಸೆತಗಳಲ್ಲಿ 13 ರನ್ ಸಿಡಿಸಿ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: IPL 2025: ಒಂದೇ ಓವರ್​​ನಲ್ಲಿ ಹೆಚ್ಚು ಎಸೆತ ಬೌಲ್! ಐಪಿಎಲ್​​ನಲ್ಲಿ ಸಂದೀಪ್ ಶರ್ಮಾ ಕೆಟ್ಟ ದಾಖಲೆ

ಹೆಚ್ಚು ಸೂಪರ್ ಓವರ್​ ಆಡಿದ ಆಟಗಾರ

ಡೆಲ್ಲಿ ತಂಡದಲ್ಲಿ ಆಡಿದ ಕರುಣ್ ನಾಯರ್ ಈ ಟೈ ಪಂದ್ಯದೊಂದಿಗೆ 2013, 2014 (ಎರಡು), 2015 ಮತ್ತು 2025ರಲ್ಲಿ ಒಟ್ಟು ಐದು ಟೈ ಪಂದ್ಯಗಳಲ್ಲಿ ಆಡಿದ ದಾಖಲೆ ಬರೆದರು. ಜಸ್ಪ್ರೀತ್ ಬುಮ್ರಾ, ಕ್ರಿಸ್ ಗೇಲ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ,ಅಕ್ಷರ್, ಪೊಲಾರ್ಡ್, ರಾಹುಲ್, ನಿತೀಶ್ ರಾಣಾ,ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ತಲಾ 4 ಬಾರಿ ಸೂಪರ್ ಓವರ್ ಆಡಿದ್ದಾರೆ.ಇವರೆಲ್ಲರಿಗಿಂತ ಐಪಿಎಲ್​ನಲ್ಲಿ ಕಡಿಮೆ ಪಂದ್ಯಗಳನ್ನಾಡಿದ್ದರೂ ಕರುಣ್ ನಾಯರ್ ಹೆಚ್ಚು ಸೂಪರ್ ಓವರ್​​ ಪಂದ್ಯಗಳನ್ನಾಡಿದ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಇದು ಐಪಿಎಲ್‌ನ 15ನೇ ಟೈ ಪಂದ್ಯವಾಗಿದ್ದು, 2022ರ ನಂತರ ಮೊದಲ ಸೂಪರ್ ಓವರ್ ಪಂದ್ಯವಾಯಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಐದನೇ ಗೆಲುವು ದಾಖಲಿಸಿ ಅಗ್ರಸ್ಥಾನಕ್ಕೇರಿತು, ಆದರೆ ರಾಜಸ್ಥಾನ್ ರಾಯಲ್ಸ್ ತಮ್ಮ ಐದನೇ ಸೋಲನ್ನು ಅನುಭವಿಸಿತು.