Last Updated:
ಟಿಮ್ ಡೇವಿಡ್ ಗಾಯದಿಂದ ಆರ್ಸಿಬಿಗೆ ಹಿನ್ನಡೆ, ಲಖನೌ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ. ಪ್ಲೇಆಫ್ ಹಂತದಲ್ಲಿ ಡೇವಿಡ್ ಅನುಪಸ್ಥಿತಿ ಆರ್ಸಿಬಿಗೆ ತೀವ್ರ ಹಿನ್ನಡೆಯಾಗಲಿದೆ.
ಐಪಿಎಲ್ 2025 ರಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಟಿಮ್ ಡೇವಿಡ್ (Tim David), ಸನ್ರೈಸರ್ಸ್ ಹೈದರಾಬಾದ್ (Sunrisers hyderabad) ವಿರುದ್ಧ 42 ರನ್ಗಳ ಸೋಲಿನ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುವಾಗ ಸ್ನಾಯು ಸೆಳೆತದ ಗಾಯಗೊಡಿದ್ದು ಆರ್ಸಿಬಿ ದೊಡ್ಡ ಹಿನ್ನಡೆಯಾಯಿತು. ಎಸ್ಆರ್ಹೆಚ್ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಡೇವಿಡ್ ಬೌಂಡರಿ ಉಳಿಸಲು ವೇಗವಾಗಿ ಓಡಿದಾಗ ಗಾಯಗೊಂಡಿದ್ದರು. ಸದ್ಯ ಅವರು ಮುಂಬರುವ ಲಖನೌ (LSG) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.
ಐಪಿಎಲ್ 2025 ರ ಪ್ಲೇಆಫ್ ಪಂದ್ಯಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ, ಟಿಮೆ ಡೇವಿಡ್ ಅವರ ಅನುಪಸ್ಥಿತಿಯು ಆರ್ಸಿಬಿಗೆ ಹಿನ್ನಡೆ ಉಂಟಾಗಲಿದೆ. ಸದ್ಯ ಆರ್ಸಿಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಮೇ 27ರಂದು ನಡೆಯುವ ಪಂದ್ಯ ಗೆಲ್ಲುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ ತಂಡ ಮಾತ್ರ ಅನೇಕ ಆಟಗಾರರ ಇಂಜುರಿಯಿಂದ ಪರಾಡುತ್ತಿದೆ.
ಎಸ್ಆರ್ಹೆಚ್ ವಿರುದ್ಧದ ಪಂದ್ಯದ ಬಳಿಕ ಆರ್ಸಿಬಿ ತಂಡದ ತಾತ್ಕಾಲಿಕ ನಾಯಕ ಜಿತೇಶ್ ಶರ್ಮಾ ಟಿಮ್ ಡೇವಿಡ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ, ಟೂರ್ನಿಯ ಉಳಿದ ಪಂದ್ಯಗಳಿಗೆ ಅವರ ಲಭ್ಯತೆಯ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಆರ್ಸಿಬಿ ಕೂಡ ವಿದೇಶಿ ಆಟಗಾರರ ಲಭ್ಯತೆಯ ಸವಾಲುಗಳನ್ನು ಎದುರಿಸುತ್ತಿದೆ. ಜಾಕೋಬ್ ಬೆಥೆಲ್ ಶೀಘ್ರದಲ್ಲೇ ಇಂಗ್ಲೆಂಡ್ನ ಏಕದಿನ ತಂಡವನ್ನು ಸೇರಲಿದ್ದಾರೆ ಮತ್ತು ಟಿಮ್ ಸೀಫರ್ಟ್ ಬದಲಿ ಆಟಗಾರನಾಗಿ ಆಗಮಿಸುವ ನಿರೀಕ್ಷೆಯಿದ್ದರೂ, ತಂಡದ ಬಲಿಷ್ಠ ಆಟಗಾರ ಹೊರಹೋಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಪಟಿದಾರ್, ಸಾಲ್ಟ್ ಸೇರಿ ಹಲವರು ಇಂಜುರಿ
ಟಿಮ್ ಡೇವಿಡ್ ಗಾಯವು ಆರ್ಸಿಬಿಗೆ ಗಾಯದ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ಹೆಚ್ಚಿಸಿದೆ. ರಜತ್ ಪಾಟಿದಾರ್ ಕೈ ಗಾಯದಿಂದ ಬಳಲುತ್ತಿದ್ದಾರೆ, ಫಿಲ್ ಸಾಲ್ಟ್ ಇತ್ತೀಚೆಗೆ ಫಿಟ್ನೆಸ್ ಸಮಸ್ಯೆಯಿಂದ ಮರಳಿದ್ದಾರೆ ಮತ್ತು ದೇವದತ್ ಪಡಿಕ್ಕಲ್ ಈಗಾಗಲೇ ಈ ಋತುವಿನಿಂದ ಹೊರಗುಳಿದಿದ್ದಾರೆ.
ಈ ಬದಲಿ ಆಟಗಾರನಿಗೆ ಮಣೆ ಸಾಧ್ಯತೆ
ಸದ್ಯ, ಆರ್ಸಿಬಿ ಟಿಮ್ ಡೇವಿಡ್ ಗಾಯದಿಂದ ಹೊರಗುಳಿದರೆ, ಆಲ್ರೌಂಡರ್ ಮೈಕೆಲ್ ಬ್ರೇಸ್ವೆಲ್ ಅವರ ಮೇಲೆ ಕಣ್ಣಿಟ್ಟಿದೆ. ಕಿವೀಸ್ ಆಲ್ರೌಂಡರ್ ತಮ್ಮ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಪರಿಣಾಮಕಾರಿ ಆಫ್-ಸ್ಪಿನ್ಗೆ ಹೆಸರುವಾಸಿಯಾಗಿದ್ದಾರೆ. ಇದು ಟಿಮ್ ಡೇವಿಡ್ ಬದಲಿಗೆ ಸಮಾನ ಬದಲಿ ಆಟಗಾರನಾಗುವ ಸಾಧ್ಯತೆ ಇದೆ. ಹಾಗೂ ಈ ಹಿಂದೆ ಕೂಡ ಇವರು ಆರ್ಸಿಬಿ ತಂಡದ ಪರ ಆಡಿರುವ ಅನುಭವ ಹೊಂದಿದ್ದಾರೆ. ಇವರ ಜೊತೆಗೆ ನ್ಯೂಜಿಲ್ಯಾಂಡ್ನ ಮಾರ್ಕ್ ಚಾಪ್ಮನ್, ಜಿಂಬಾಂಬ್ವೆಯ ಸಿಖಂದರ್ ರಾಜಾ, ಇಂಗ್ಲೆಂಡ್ನ ಸ್ಯಾಮ್ ಬಿಲ್ಲಿಂಗ್ಸ್ ಅವರ ಮೇಲೆ ಕೂಡ ಕಣ್ಣಿಟ್ಟಿದೆ.