Last Updated:
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2026 ಟೂರ್ನಿಗೆ ಹೊಸ ಹೆಡ್ಕೋಚ್ ಅನ್ನು ಆಯ್ಕೆ ಮಾಡಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಟೂರ್ನಿಗಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಎಲ್ಲಾ ತಂಡಗಳು ತಮ್ಮ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ನಿರತವಾಗಿವೆ. ತೆರೆಮರೆಯಲ್ಲಿ ಆಟಗಾರರನ್ನು ಟ್ರೇಡ್ ಮಾಡಲು ಕೂಡ ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್ ಮಾಡುತ್ತಿವೆ. ಇದರ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಫ್ರಾಂಚೈಸಿಯಿಂದ ಪ್ರಮುಖ ಸುದ್ದಿ ಬಂದಿದೆ. ಕಳೆದ ಟೂರ್ನಿಯಲ್ಲಿ ಪ್ಲೇಆಫ್‌ಗೆ ತಲುಪಲು ಕೆಕೆಆರ್ (KKR) ವಿಫಲವಾಗತ್ತು. ಈಗ ಐಪಿಎಲ್ (IPL) 2026ರ ಟೂರ್ನಿಗೆ ಹಲವಾರು ಬದಲಾವಣೆಗಳೊಂದಿಗೆ ಪ್ರವೇಶಿಸಲಿದೆ.
ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2026 ರ ಟೂರ್ನಿಗೆ ಹೊಸ ಹೆಡ್ಕೋಚ್ ಅನ್ನು ಆಯ್ಕೆ ಮಾಡಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಅವರ ಆಪ್ತ ಸ್ನೇಹಿತನಿಗೆ ಕೆಕೆಆರ್ ಹೆಡ್ಕೋಚ್ ಜವಾಬ್ದಾರಿ ನೀಡಲು ಫ್ರಾಂಚೈಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ವರದಿಗಳ ಪ್ರಕಾರ, ಅಭಿಷೇಕ್ ನಾಯರ್ ಅವರನ್ನು ಕೆಕೆಆರ್ ತನ್ನ ಹೊಸ ಹೆಡ್ಕೋಚ್ ಆಗಿ ನೇಮಿಸಲಿದೆ. ಕಳೆದ ವಾರ ನಾಯರ್‌ಗೆ ಈ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಈ ಬಗ್ಗೆ ಕೆಕೆಆರ್ ಶೀಘ್ರದಲ್ಲೇ ಘೋಷಣೆ ಮಾಡಲಿದೆ. 42 ವರ್ಷದ ಅಭಿಷೇಕ್ ನಾಯರ್ ಅವರು 2026 ರ ಐಪಿಎಲ್‌ನಲ್ಲಿ ಚಂದ್ರಕಾಂತ್ ಪಂಡಿತ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಚಂದ್ರಕಾಂತ್ ಪಂಡಿತ್ ಮೂರು ಸೀಸನ್ಗಳಲ್ಲಿ ಕೆಕೆಆರ್ ತಂಡದ ಹೆಡ್ಕೋಚ್ ಆಗಿದ್ದರು. ಚಂದ್ರಕಾಂತ್ ಪಂಡಿತ್ ನೇತೃತ್ವದಲ್ಲಿ ಕೆಕೆಆರ್ 2024 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ 2022 ರಲ್ಲಿ ಚಂದ್ರಕಾಂತ್ ಪಂಡಿತ್ ಅವರು ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಬದಲಿಗೆ ಕೆಕೆಆರ್ ಹೆಡ್ಕೋಚ್ ಆಗಿದ್ದರು. ಆದಾಗ್ಯೂ, ಐಪಿಎಲ್ 2025 ರಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಚಂದ್ರಕಾಂತ್ ಕೆಕೆಆರ್ನಿಂದ ಹೊರಬಂದಿದ್ದಾರೆ.
ಅಭಿಷೇಕ್ ನಾಯರ್ 2018 ರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚಿಂಗ್ ಭಾಗವಾಗಿದ್ದಾರೆ. ನಾಯರ್ 2018 ರಿಂದ 2024 ರವರೆಗೆ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಿದರು. ಕೆಕೆಅರ್ ತಂಡ 2024 ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಾಗ ಅವರು ಕೆಕೆಆರ್ ಕೋಚಿಂಗ್ ಭಾಗವಾಗಿದ್ದರು. 2024 ರಲ್ಲಿ ಸಹಾಯಕ ಕೋಚ್ ಆಗಿ ಟೀಮ್ ಇಂಡಿಯಾದ ಕೋಚಿಂಗ್ ಸೇರಿದರು. ಈ ಸಂದರ್ಭದಲ್ಲಿ ಕೆಕೆಆರ್ ತಂಡವನ್ನು ತೊರೆಯಬೇಕಾಯಿತು. ಇದಾದ 10 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕೆಕೆಆರ್‌ಗೆ ಮರಳಿದ್ದಾರೆ. ಈ ಬಾರಿ ಅವರು ಹೆಡ್ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಭಿಷೇಕ್ ನಾಯರ್ ಕೆಕೆಆರ್ ಜೊತೆ ಉತ್ತಮ ಸಂಬಂಧ ಹೊಂದಿದೆ. ನಾಯರ್ ತಂಡದ ಅಕಾಡೆಮಿಯಲ್ಲಿ ಯುವ ಆಟಗಾರರನ್ನು ಸಜ್ಜುಗೊಳಿಸುವ ಮತ್ತು ಕೌಶಲ್ಯಗಳನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ವರುಣ್ ಚಕ್ರವರ್ತಿ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರೊಂದಿಗೆ ಹೆಚ್ಚು ಸಮಯ ಕಳೆದಿದ್ದಾರೆ.
ಗಂಭೀರ್ ಟೀಮ್ ಇಂಡಿಯಾದ ಕೋಚ್ ಆದಾಗ, ನಾಯರ್ ತಂಡದ ಸಹಾಯಕ ಕೋಚ್ ಆದರು. ಅಲ್ಲಿಂದ ಅವರನ್ನು ಗೌತಮ್ ಗಂಭೀರ್ ಅವರ ಆಪ್ತ ಸ್ನೇಹಿತ ಎಂದು ಹೇಳಲಾಗುತ್ತಿದೆ. ಐಪಿಎಲ್ 2024 ರಲ್ಲಿ ಕೆಕೆಆರ್ ಗೆಲುವಿನಲ್ಲಿ ಅವರು ಒಟ್ಟಾಗಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ನಾಯರ್ ರೋಹಿತ್ ಶರ್ಮಾ ಅವರ ಆಪ್ತ ಸ್ನೇಹಿತ. ರೋಹಿತ್ ಅವರ ಫಿಟ್ನೆಸ್ ಮತ್ತು ಆಟವನ್ನು ಸುಧಾರಿಸಲು ಕಾರಣರಾಗಿದ್ದಾರೆ.
ಕೆಕೆಆರ್ ತಂಡದ ಪಾಲಿಗೆ ಕಳೆದ ಸೀಸನ್ ಕಳಪೆಯಾಗಿತ್ತು. ಈಗ ಕೆಕೆಆರ್ ರಾಹುಲ್ ನಾಯಕತ್ವದಲ್ಲಿ ಮೈದಾನಕ್ಕಿಳಿಯಬಹುದು. ಕೆಕೆಆರ್ ಐಪಿಎಲ್ 2025 ರಲ್ಲಿ 14 ಪಂದ್ಯಗಳಲ್ಲಿ ಕೇವಲ ಐದು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಐಪಿಎಲ್ 2024 ರಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್ ಮೆಗಾ ಹರಾಜಿಗೆ ಬಂದಿದ್ದರು. ಹೀಗಾಗಿ ಕೆಕೆಆರ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದರು. ಆದರೆ ನಿರೀಕ್ಷೆಯಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಈಗ, ಕೆಕೆಆರ್ ಹಲವಾರು ಬದಲಾವಣೆಗಳೊಂದಿಗೆ ಐಪಿಎಲ್ 2026 ರ ಟೂರ್ನಿಗೆ ತಯಾರಿ ನಡೆಸುತ್ತಿದೆ. ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಕೆಕೆಆರ್ ಮಾಡಬಹುದು ಎಂದು ವರದಿಗಳಾಗಿವೆ.
October 26, 2025 8:08 PM IST