Last Updated:
ಆದಿಯೋಗಿ ರಥಯಾತ್ರೆ ಉಡುಪಿಯಿಂದ ಆರಂಭವಾಗಿ 70 ದಿನಗಳಲ್ಲಿ 1000 ಕಿಲೋಮೀಟರ್ ಪ್ರಯಾಣಿಸಿ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಪೂರ್ಣಗೊಳ್ಳಲಿದೆ.
ಮಂಗಳೂರು: ಮಹಾಶಿವರಾತ್ರಿಯ ಅಂಗವಾಗಿ ಆದಿ ಯೋಗ ಕೇಂದ್ರದ ವತಿಯಿಂದ ಉಡುಪಿಯಿಂದ ಹೊರಟ ಶಿವರಥ ಮಂಗಳೂರನ್ನು (Mangaluru) ಪ್ರವೇಶ ಮಾಡಿದೆ. ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶಿವರಥ ಯಾತ್ರೆ ಮುಂದುವರಿಸಿದ್ದು, ಬಂಟ್ವಾಳದ (Bantwal) ಬಿ.ಸಿ ರೋಡ್ ನಲ್ಲಿ ಭಕ್ತರು ಈ ರಥವನ್ನು ಸ್ವಾಗತಿಸಿದ್ದಾರೆ.
ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ 70 ದಿನಗಳಲ್ಲಿ 1000 ಕಿ.ಮೀ. ಗೂ ಅಧಿಕ ಉದ್ದದ ತೀರ್ಥಯಾತ್ರೆ ನಡೆಸಲಿರುವ ಆದಿಯೋಗಿ ರಥಯಾತ್ರೆ ಮಹಾಶಿವರಾತ್ರಿ ಹಬ್ಬಕ್ಕೂ ಮುನ್ನ, ಫೆ. 14 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಭವ್ಯ ಆದಿಯೋಗಿ ಮೂರ್ತಿಯ ಬಳಿ ಪೂರ್ಣಗೊಳ್ಳಲಿದೆ.
ಈ ರಥ ಜಿಲ್ಲೆಯಾದ್ಯಂತ ಸಂಚಾರ ನಡೆಸಿ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ಬೆಟ್ಟದಪುರ, ಕೆ.ಆರ್. ನಗರ, ಮೈಸೂರು, ಸದ್ಗುರು ಸನ್ನಿಧಿ (ಚಿಕ್ಕಬಳ್ಳಾಪುರ), ಹೊಸಕೋಟೆ, ಮಾಲೂರು, ರಾಯಕೋಟೆ ಮತ್ತು ಅವಿನಾಶಿ ಸೇರಿದಂತೆ ಪ್ರಮುಖ ಪಟ್ಟಣಗಳ ಮೂಲಕ ಪ್ರಯಾಣಿಸಿ, ಈಶ ಯೋಗ ಕೇಂದ್ರವು ನೆಲೆಸಿರುವ ಕೊಯಮತ್ತೂರಿನ ವೆಳ್ಳಿಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ. ಅರ್ಪಣೆಯ ಮನೋಭಾವಕ್ಕೆ ಅನುಗುಣವಾಗಿ, ಶಿವಾಂಗ ಸಾಧಕರು ಮತ್ತು ಭಕ್ತರು ಆದಿಯೋಗಿ ರಥವನ್ನು ಎಳೆಯುತ್ತಾ ಮುಂದೊಯ್ಯುತ್ತಾರೆ.
ಸ್ವತಃ ಸದ್ಗುರುಗಳು ವಿನ್ಯಾಸಗೊಳಿಸಿರುವ ಈ ಶಕ್ತಿಯುತ ಆಧ್ಯಾತ್ಮಿಕ ಯಾತ್ರೆಯನ್ನು ಅತ್ಯಂತ ಶಿಸ್ತುಬದ್ಧ, ಭಕ್ತಿಪೂರ್ವಕ ಭಾಗವಹಿಸುವಿಕೆಯೊಂದಿಗೆ ನಡೆಯಲು ವ್ಯವಸ್ಥೆ ಮಾಡಲಾಗಿದೆ. ಆದಿಯೋಗಿಯ ಸಾನ್ನಿಧ್ಯವನ್ನು ಹೊತ್ತ ರಥವು ಪ್ರತಿ ಜಿಲ್ಲೆಯಲ್ಲಿ ಮೆರವಣಿಗೆಗಳು, ಅರ್ಪಣೆಗಳು, ಸ್ತೋತ್ರಪಠಣ ಮತ್ತು ಸಮುದಾಯ ಸಭೆಗಳೊಂದಿಗೆ ನಡೆಯಲಿದೆ. ಭಕ್ತರು ಮತ್ತು ಸಾಧಕರು ಯಾತ್ರೆಯ ಭಾಗವಾಗಿ ಸರಳ ಯೋಗಾಭ್ಯಾಸ ಅಥವಾ ಸೇವಾ ಚಟುವಟಿಕೆಗಳ ಮೂಲಕವೂ ಭಾಗವಹಿಸಲು ಅವಕಾಶವಿದೆ.
ಈ ರಥಯಾತ್ರೆಯಲ್ಲಿ ಭಾಗವಹಿಸಿರುವ ಅಕ್ಷಯ್ ಕುಮಾರ್ ಮಾತನಾಡಿ, ಸದ್ಯ ಇಪ್ಪತ್ತಕ್ಕೂ ಅಧಿಕ ಶಿವಭಕ್ತರು ರಥವನ್ನು ಎಳೆಯುತ್ತಾ ಮುಂದೆ ಹೋಗುತ್ತಿದ್ದಾರೆ. ಪ್ರತೀ ದಿನ 18 ರಿಂದ 25 ಕಿಲೋ ಮೀಟರ್ ದೂರ ಸಾಗುತ್ತೇವೆ. ರಾತ್ರಿ ದೇವಸ್ಥಾನಗಳಲ್ಲಿ ತಂಗಿ ಶಿವ ಸಾಧನ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ನಿಸ್ವಾರ್ಥವಾಗಿ ಸಾಗುವ ರಥಯಾತ್ರೆ ಪ್ರತಿಬಾರಿ ಮೈಸೂರಿನಿಂದ ಸಾಗುತ್ತಿತ್ತು. ಈ ಬಾರಿ ಉಡುಪಿಯಲ್ಲಿ ಚಾಲನೆ ದೊರಕಿದೆ. ತಮಿಳುನಾಡಿನ ವಿವಿಧ ಭಾಗಗಳಿಂದ ಇಂತಹ ರಥಗಳು ಬರುತ್ತದೆ.
ಕೃಷ್ಣನೂರಿಂದ ಶುರುವಾಯ್ತು ಶಿವನ ತೇರು
Dakshina Kannada,Karnataka
December 16, 2025 4:05 PM IST