Last Updated:
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರೋತ್ಸವ ಆರಂಭವಾಗಿದೆ. ನವೆಂಬರ್ 24, 25, 26 ರಂದು ಷಷ್ಠಿ ಉತ್ಸವಗಳು ನಡೆಯಲಿದ್ದು, ರಥೋತ್ಸವವೂ ನಡೆಯಲಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ (Kukke) ಸುಬ್ರಹ್ಮಣ್ಯದ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರೋತ್ಸವದ (Jatra) ಸಂಭ್ರಮ ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಇರುತ್ತದೆ. ಈ ನಡುವೆ ಮೂರು ದಿನಗಳ ಷಷ್ಠಿ ಉತ್ಸವಗಳೂ ನಡೆಯುತ್ತದೆ. ನವಂಬರ್ 24, 25 ಮತ್ತು 26 ರಂದು ಷಷ್ಠಿ ಉತ್ಸವಗಳು ನಡೆಯಲಿದ್ದು, ಈ ಮೂರು ದಿನಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವ (Rathotsava) ನೆರವೇರುತ್ತದೆ.
ಹೂವಿನ ರಥೋತ್ಸವ, ಪಂಚಮಿ ರಥೋತ್ಸವ ಮತ್ತು ಬ್ರಹ್ಮರಥೋತ್ಸವ ಕ್ರಮವಾಗಿ ನವಂಬರ್ 24, 25 ಮತ್ತು 26 ರಂದು ನೆರವೇರಲಿದೆ. ಕ್ಷೇತ್ರದ ಜಾತ್ರೋತ್ಸವದ ವಿಧಿ-ವಿಧಾನಗಳು ಆರಂಭಗೊಳ್ಳೋದು ದೇವರ ರಥಕ್ಕೆ ಗೂಟ ಹೊಡೆದು ಪೂಜೆ ಸಲ್ಲಿಸುವುದರಿಂದಾಗಿದೆ. ನವಂಬರ್ 5 ರಂದು ರಥಕ್ಕೆ ಗೂಟ ಹೊಡೆಯುವ ಧಾರ್ಮಿಕ ವಿಧಿ-ವಿಧಾನ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ನಡೆದಿದೆ. ರಥಕ್ಕೆ ಗೂಟ ಹೊಡೆಯೋ ಕಾರ್ಯಕ್ರಮದ ಹಿಂದಿರುವ ಉದ್ಧೇಶವೇನಂದರೆ, ಇಂದಿನಿಂದ ರಥ ಕಟ್ಟುವ ಕೆಲಸಕ್ಕೆ ಚಾಲನೆ ದೊರೆತಿದೆ ಅನ್ನೋದಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗವೇ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ರಥವನ್ನು ಕಟ್ಟಿ ಸಿದ್ಧಪಡಿಸಬೇಕು ಎನ್ನುವ ನಿಯಮವಿದೆ. ಈ ಕಾರಣಕ್ಕಾಗಿ ರಥಕ್ಕೆ ಗೂಟ ಹೊಡೆಯುವ ದಿನ ಮಲೆಕುಡಿಯ ಜನಾಂಗದ ಹಿರಿಯರಿಗೆ ದೇವಸ್ಥಾನದ ವತಿಯಿಂದ ಬೂಳ್ಯ ( ಎಲೆ,ಅಡಿಕೆ ನೀಡಿ ಆಮಂತ್ರಿಸೋದು) ಸಮರ್ಪಿಸಲಾಗುತ್ತದೆ. ಈ ಬೂಳ್ಯ ದೊರೆತ ಬಳಿಕ ಮಲೆಕುಡಿಯ ಜನಾಂಗದ ರಥ ಕಟ್ಟುವ ಜನರು ಕ್ಷೇತ್ರದ ಪಕ್ಕದಲ್ಲೇ ಇರುವ ಕುಮಾರಪರ್ವತಕ್ಕೆ ಬಿದಿರಿನ ಹಗ್ಗದ ಹುಡುಕಾಡಕ್ಕಾಗೆ ತೆರಳುತ್ತಾರೆ.
ಕುಕ್ಕೆ ಸುಬ್ರಹ್ಮಣ್ಯದ ರಥವನ್ನು ಯಾವುದೇ ಹಗ್ಗ ಅಥವಾ ಇತರ ವಸ್ತುಗಳನ್ನು ಬಳಸಿ ಕಟ್ಟದೆ, ಕೇವಲ ಕಾಡಿನಲ್ಲಿ ಸಿಗೋ ಬಿದಿರಿನ ಬಳ್ಳಿಗಳನ್ನ ಉಪಯೋಗಿಸಿಯೋ ಕಟ್ಟುತ್ತಾರೆ. ಶತಮಾನಗಳಿಂದ ಇಲ್ಲಿ ಇದೇ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ಕುಮಾರ ಪರ್ವತದ ದಟ್ಟ ಕಾಡುಗಳ ಮದ್ಯೆ ಸಿಗುವ ಈ ಬಳ್ಳಿ ರೂಪದ ಬಿದಿರುಗಳನ್ನು ಸಂಗ್ರಹಿಸಿ ಮತ್ತೆ ನಾಡಿನೆಡೆಗೆ ಬರುತ್ತಾರೆ. ಹೀಗೆ ಕಾಡಿನಿಂದ ತಂದು ಬಿದಿರಿನ ಬಳ್ಳಿಗಳನ್ನೆಲ್ಲಾ ಸಂಗ್ರಹಿಸಿ ರಥ ಕಟ್ಡುವ ಕಾರ್ಯಕ್ಕೆ ತೊಡಗಿಕೊಳ್ಳುತ್ತಾರೆ. ಸುಮಾರು ನವಂಬರ್ 24 ರ ಚೌತಿಯಂದು ರಥದ ಬಹುತೇಕ ಎಲ್ಲಾ ಕೆಲಸಗಳು ಮುಕ್ತಾಯಗೊಳ್ಳುತ್ತದೆ. ಕುಕ್ಕೆ ಸುಬ್ರಹ್ಮಣ್ಯ ರಥಕ್ಕೆ ಗೂಟ ಹೊಡೆಯಿತೆಂದರೆ ಊರ- ಪರವೂರಿನ ಜನಕ್ಕೆಲ್ಲಾ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವದ ಸಮಯ ಬಂದಿದೆ ಅನ್ನೋದು ಮನವರಿಕಗೆ ಬರುತ್ತದೆ.
Dakshina Kannada,Karnataka
November 06, 2025 1:59 PM IST