Last Updated:
ಭಾರತ ತಂಡದ ವಿರುದ್ಧ ಒಂದೇ ದೇಶದಲ್ಲಿ ಹೆಚ್ಚು ರನ್ಗಳಿಸಿದ ಆಟಗಾರರಲ್ಲಿ ರೂಟ್ ಅಗ್ರಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್ ಭಾರತದ ವಿರುದ್ಧ ಆಸ್ಟ್ರೇಲಿಯಾದಲ್ಲಿ 1893 ರನ್ಗಳಿಸಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಸರಣಿಯನ್ನು ಆನಂದಿಸುತ್ತಿರುವ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ (Joe Root) ಅಪರೂಪದ ಸಾಧನೆ ಮಾಡಿದ್ದಾರೆ. ಒಂದೇ ದೇಶದಲ್ಲಿ ಭಾರತ ತಂಡದ (India vs England) ವಿರುದ್ಧ ಟೆಸ್ಟ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ತವರು ನೆಲವಾದ ಇಂಗ್ಲೆಂಡ್‌ನಲ್ಲಿ ಈ ಮೈಲಿಗಲ್ಲನ್ನು ತಲುಪುವ ಮೂಲಕ, ವಿಶ್ವದ ಯಾವುದೇ ಆಟಗಾರ ಇದುವರೆಗೆ ಸಾಧಿಸಲು ಸಾಧ್ಯವಾಗದ ಸಾಧನೆಯನ್ನು ಅವರು ಮಾಡಿದ್ದಾರೆ. ಶುಕ್ರವಾರ ಓವಲ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಐದನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ರೂಟ್ ಈ ಸಾಧನೆಯನ್ನು ದಾಖಲಿಸಿದ್ದಾರೆ.
ಭಾರತ ತಂಡದ ವಿರುದ್ಧ ಒಂದೇ ದೇಶದಲ್ಲಿ ಹೆಚ್ಚು ರನ್ಗಳಿಸಿದ ಆಟಗಾರರಲ್ಲಿ ರೂಟ್ ಅಗ್ರಸ್ಥಾನದಲ್ಲಿದ್ದರೆ, ರಿಕಿ ಪಾಂಟಿಂಗ್ ಭಾರತದ ವಿರುದ್ಧ ಆಸ್ಟ್ರೇಲಿಯಾದಲ್ಲಿ 1893 ರನ್ಗಳಿಸಿದ್ದಾರೆ. ವಿಂಡೀಸ್ ತಂಡದ ಚಂದ್ರಪಾಲ್ ವೆಸ್ ಇಂಡೀಸ್ನಲ್ಲಿ 1547 ರನ್, ಪಾಕಿಸ್ತಾನದ ಜಹೀರ್ ಅಬ್ಬಾಸ್ ಪಾಕಿಸ್ತಾನದಲ್ಲಿ1427 ರನ್, ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದಲ್ಲಿ 1396 ರನ್ಗಲಿಸಿದ್ದಾರೆ.
ಇದಲ್ಲದೆ ತವರಿನಿಲ್ಲಿ ಗೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ದಾಖಲೆಯ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಿದ್ದಾರೆ. 29 ರನ್ಗಳಿಸಿ ಔಟ್ ಆದ ರೂಟ್ ಇಂಗ್ಲೆಂಡ್ ನೆಲದಲ್ಲಿ 7220 ರನ್ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ತವರಿನಲ್ಲಿ 7216 ರನ್ಗಳಿಸಿದ್ದರು. ಜೋ ರೂಟ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ರಿಕಿ ಪಾಂಟಿಂಗ್ ಇದ್ದು, ಅವರು ಆಸ್ಟ್ರೇಲಿಯಾದಲ್ಲಿ 7578 ರನ್ಗಳಿಸಿದ್ದಾರೆ. ಶೀಘ್ರದಲ್ಲಿ ರೂಠ್ ಆ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ. ಮುಂಬರುವ ಆ್ಯಶಸ್ ಸರಣಿಯಲ್ಲಿ ಈ ದಾಖಲೆ ರೂಟ್ ಪಾಲಾಗಲಿದೆ.
ಮೊದಲ ದಿನ 204/6 ರನ್ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಭಾರತ ಮೊದಲ ಓವರ್ನಲ್ಲೇ 2 ಬೌಂಡರಿ ಸಹಿತ 9 ರನ್ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ ದಿನದಾಟದ 3ನೇ ಓವರ್ನಲ್ಲಿ 109 ಎಸೆತಗಳಲ್ಲಿ 8 ಬೌಂಡರಿ ಸಹಿತ 57 ರನ್ಗಳಿಸಿದ್ದ ಕರುಣ್ ನಾಯರ್ ಜೋಶ್ ಟಂಗ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಂತರದ ಓವರ್ನಲ್ಲೇ ಕರುಣ್ ಜೊತೆಗಾರ ವಾಷಿಂಗ್ಟನ್ ಸುಂದರ್ (26) ಕೂಡ ಔಟ್ ಆದರು. ಗಸ್ ಅಟ್ಕಿನ್ಸನ್ ಬೌಲಿಂಗ್ನಲ್ಲಿ ಜೇಮಿ ಓವರ್ಟನ್ಗೆ ಕ್ಯಾಚ್ ನೀಡಿ ಔಟ್ ಆದರು. ಅಟ್ಕಿನ್ಸನ್ ತಮ್ಮ ಮುಂದಿನ ಓವರ್ನಲ್ಲಿ ಬಾಲಂಗೋಚಿಗಳಾದ ಮೊಹಮ್ಮದ್ ಸಿರಾಜ್(0) ಹಾಗೂ ಪ್ರಸಿಧ್ ಕೃಷ್ಣ(0)ರನ್ನ ಶೂನ್ಯಕ್ಕೆ ಔಟ್ ಮಾಡಿ ಭಾರತದ ಇನ್ನಿಂಗ್ಸ್ಗೆ ಇತಿಶ್ರೀ ಆಡಿದರು.
ಗಸ್ ಅಟ್ಕಿನ್ಸನ್ 33ಕ್ಕೆ 5 ವಿಕೆಟ್ ಪಡೆದರೆ, ಜೋಶ್ ಟಂಗ್ 57ಕ್ಕೆ3 ವಿಕೆಟ್ ಪಡೆದು ಮಿಂಚಿದರು. ಕ್ರಿಸ್ ವೋಕ್ಸ್ 46ಕ್ಕೆ1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ ಜಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ 92 ರನ್ಗಳ ಜೊತೆಯಾಟ ನೀಡಿದರು. ಇಬ್ಬರು ಟಿ20 ಮಾದರಿಯಲ್ಲಿ ಬೌಂಡರಿಗಳ ಸುರಿಮಳೆಗೈದರು. ಆಕಾಶ್ ದೀಪ್ ಈ ಜೋಡಿಯನ್ನ ಬ್ರೇಕ್ ಮಾಡಿದ ನಂತರ ಇಂಗ್ಲೆಂಡ್ ತಂಡ ದಿಢೀರ್ ಕುಸಿತ ಕಂಡಿತು. ಬೆನ್ ಡಕೆಟ್ 38 ಎಸೆತಗಳಲ್ಲಿ 43, ಕ್ರಾಲಿ 57 64 ರನ್ಗಳಿಸಿದರು. ಆ ನಂತರ ಬಂದ ನಾಯಕ ಪೋಪ್ 22, ಜೋ ರೂಟ್ 29, ಜಾಕೊಬ್ ಬೆಥೆಲ್ 6, ಜೇಮಿ ಸ್ಮಿತ್ 8, ಜೇಮಿ ಓವರ್ಟನ್ 0, ಗಸ್ ಅಟ್ಕಿನ್ಸನ್ 11 ರನ್ಗಳಿಸಿ ಔಟ್ ಆದರು.
ಮಳೆಗೆ ಪಂದ್ಯ ಸ್ಥಗಿತಗೊಳ್ಳುವ ಮುನ್ನ 48 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 242 ರನ್ಗಳಿಸಿದೆ. ಹ್ಯಾರಿ ಬ್ರೂಕ್ 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 48 ರನ್ ಹಾಗೂ ಟಂಗ್ ಖಾತೆ ತೆರೆಯದೇ ಕ್ರೀಸ್ನಲ್ಲಿದ್ದಾರೆ.
August 01, 2025 9:59 PM IST