Justice: ಯಾವ ಫಿಲ್ಮ್‌ ಸ್ಟೋರಿಗೂ ಕಮ್ಮಿಯಿಲ್ಲ ಈ ಸುದ್ದಿ; ತನ್ನ ಹಕ್ಕಿಗಾಗಿ 9 ವರ್ಷ ಹೋರಾಡಿ ಗೆದ್ದ ʼಶ್ರೀ ಸಾಮಾನ್ಯ!ʼ | Dakshina Kannada Rukmayya Gowda 9 year fight criminal case | ಮಂಗಳೂರು ನ್ಯೂಸ್ (Mangaluru News)

Justice: ಯಾವ ಫಿಲ್ಮ್‌ ಸ್ಟೋರಿಗೂ ಕಮ್ಮಿಯಿಲ್ಲ ಈ ಸುದ್ದಿ; ತನ್ನ ಹಕ್ಕಿಗಾಗಿ 9 ವರ್ಷ ಹೋರಾಡಿ ಗೆದ್ದ ʼಶ್ರೀ ಸಾಮಾನ್ಯ!ʼ | Dakshina Kannada Rukmayya Gowda 9 year fight criminal case | ಮಂಗಳೂರು ನ್ಯೂಸ್ (Mangaluru News)

Last Updated:

ರುಕ್ಮಯ್ಯ ಗೌಡ ದಕ್ಷಿಣ ಕನ್ನಡದ ಕಾಣಿಯೂರು ಗ್ರಾಮಪಂಚಾಯತ್ ಅವ್ಯವಹಾರ ವಿರುದ್ಧ 9 ವರ್ಷ ಕಾನೂನು ಹೋರಾಟ ನಡೆಸಿ ನ್ಯಾಯ ಗೆದ್ದರು, ಕ್ರಿಮಿನಲ್ ಪ್ರಕರಣದಿಂದ ಮುಕ್ತರಾದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಗ್ರಾಮಪಂಚಾಯತ್ (Village Panchayat) ನಲ್ಲಿ ನಡೆದ ಅವ್ಯವಹಾರವನ್ನು ಪ್ರಶ್ನಿಸಿದ್ದ ಕಾರಣಕ್ಕೆ ವ್ಯಕ್ತಿಯ ಮೇಲೆ ಇಡೀ ಪಂಚಾಯತ್ ಆಡಳಿತವೇ ಮುಗಿಬಿದ್ದಿತ್ತು. ಕುಡಿಯಲು ಬಳಸುತ್ತಿದ್ದ ಬೋರ್ ವೆಲ್ ಪಂಪನ್ನು (Pump) ಅಕ್ರಮವಾಗಿ ಜಪ್ತಿ ಮಾಡಲಾಯಿತು. ವ್ಯಕ್ತಿ ಮತ್ತು ಆತನ ಪತ್ನಿಯ ವಿರುದ್ಧ ಕ್ರಿಮಿನಲ್ ಪ್ರಕರಣ (Case) ದಾಖಲಿಸಿ ನಿರಂತರ ಕಿರುಕುಳವನ್ನು (Torcher) ನೀಡಲಾಗಿತ್ತು.

ಕಾನೂನಿನ ಮೂಲಕ ಹೋರಾಟ ಮಾಡಿ ಗೆದ್ದ ವ್ಯಕ್ತಿ

ಇಡೀ ಗ್ರಾಮಪಂಚಾಯತ್ ಆಡಳಿತವೇ ಒಬ್ಬ ಬಡಪಾಯಿ ವಿರುದ್ಧ ನಿಂತಾಗ ಎಷ್ಟೇ ಗಂಡೆದೆಯ ವ್ಯಕ್ತಿಯೂ ವಿಚಲಿತನಾಗೋದು ಸಾಮಾನ್ಯ. ಆದರೆ ಈ ವರದಿಯಲ್ಲಿ ಬರೋ ವ್ಯಕ್ತಿ ಮಾತ್ರ ಧೃತಿಗೆಡಲಿಲ್ಲ. ತನ್ನ ವಿರುದ್ಧ ನಿಂತ ಎಲ್ಲರನ್ನೂ ಕಾನೂನಿನ ಮೂಲಕವೇ ಹೋರಾಡಿ ಇಂದು ಗೆದ್ದು ಬೀಗಿದ್ದಾರೆ. ಕಳೆದ ಒಂಬತ್ತು ವರ್ಷಗಳ ಈ ವ್ಯಕ್ತಿಯ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.

ರುಕ್ಮಯ್ಯ ಗೌಡರ ಕಥೆ ಯಾವುದೇ ಫಿಲ್ಮ್‌ ಸ್ಟೋರಿಗೆ ಕಮ್ಮಿ ಇಲ್ಲ

ಮೇಲಿನ ವಿಚಾರವನ್ನು ಓದಿದಾಗ ಇದ್ಯಾವುದೋ ಸಿನಿಮಾದ ಕಥೆ ಎಂದು ಯೋಚಿಸಬೇಕಾಗಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಗ್ರಾಮಪಂಚಾಯತ್‌ನ ಮಲೆಕೆರ್ಚಿ ಎನ್ನುವ ಪ್ರದೇಶದ ನಿವಾಸಿ ರುಕ್ಮಯ್ಯ ಗೌಡರ ಜೀವನದಲ್ಲಿ ನಡೆದ ನಿಜ ಕಥೆ. ಘಟನೆ ನಡೆದಿರೋದು 2016 ರಂದು.

ಲೋಕಾಯುಕ್ತಕ್ಕೆ ಮೊರೆ ಹೋದ ರುಕ್ಮಯ್ಯ

ಅಂದು ಕಾಣಿಯೂರು ಗ್ರಾಮಪಂಚಾಯತ್‌ನಲ್ಲಿ ಆಡಳಿತ ನಡೆಸುತ್ತಿದ್ದ ಆಡಳಿತ ಮಂಡಳಿ ಅವ್ಯವಹಾರ ನಡೆಸಿದೆ ಮತ್ತು ಈ ಅವ್ಯವಹಾರದಲ್ಲಿ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗಿನಿ ಶೆಟ್ಟಿ ಮತ್ತು ಉಪಾಧ್ಯಕ್ಷೆ ಕಮಲಾಕ್ಷಿ ಹಾಗೂ ಆಡಳಿತ ಮಂಡಳಿಯ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ರುಕ್ಮಯ್ಯ ಗೌಡರು ಲೋಕಾಯುಕ್ತಕ್ಕೆ ನೀಡಿದ್ದರು.

ಕುಡಿಯುವ ನೀರು ಕಿತ್ತುಕೊಂಡ ಪಾಪಿಗಳು

ದೂರಿನಲ್ಲಿ ಸತ್ಯಾಂಶ ಇದೆ ಎಂದು ಮನವರಿಕೆ ಮಾಡಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು ಸ್ಥಳ ತನಿಖೆ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಇದರಿಂದ ಕೆರಳಿದ ಪಂಚಾಯತ್ ಆಡಳಿತ ಮಂಡಳಿ 19.12.2016 ರಂದು ರುಕ್ಮಯ್ಯ ಗೌಡರು ಕುಡಿಯಲು ಬಳಸುತ್ತಿದ್ದ ಬೋರ್ ವೆಲ್ ಪಂಪನ್ನು ಅಕ್ರಮವಾಗಿ ತೆಗೆದು ಪಂಚಾಯತ್ ಕಛೇರಿಯಲ್ಲಿ ಇಟ್ಟಿದ್ದರು.

9 ವರ್ಷಗಳ ಕಾಲ ನಿರಂತರ ಹೋರಾಟ

ಅಲ್ಲದೆ ರುಕ್ಮಯ್ಯ ಗೌಡ ಮತ್ತು ಅವರ ಪತ್ನಿ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಎರಡು ಪ್ರಕರಣವನ್ನು ದಾಖಲಿಸಿ ಜೈಲಿಗಟ್ಟುವ ಷಡ್ಯಂತ್ರ ಮಾಡಿದ್ದರು. ಅಂದಿನಿಂದ ರುಕ್ಮಯ್ಯ ಗೌಡರ ಏಕವ್ಯಕ್ತಿ ಹೋರಾಟ ಆರಂಭಗೊಂಡಿತ್ತು. ಪಂಚಾಯತ್ ಆಡಳಿತ ಮಂಡಳಿ ರುಕ್ಮಯ್ಯ ಗೌಡ ಮತ್ತು ಅವರ ಪತ್ನಿ ವಿರುದ್ಧ ನೀಡಿದ್ದ ಕ್ರಿಮಿನಲ್ ಪ್ರಕರಣಕ್ಕಾಗಿ ಸುಮಾರು 9 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿ ಕೊನೆಗೂ ನ್ಯಾಯ ಪಡೆದುಕೊಂಡಿದ್ದಾರೆ.

ರುಕ್ಮಯ್ಯ ಗೌಡ ಕಾನೂನು ಹೋರಾಟ ಎಲ್ಲರಿಗೂ ಮಾದರಿ

ಇದನ್ನೂ ಓದಿ: Dakshina Kannada: ಮೀನುಗಾರರು ಇನ್ಮುಂದೆ ಚಿಂತೆ ಬೇಡ; ನಿಮ್ಮ ರಕ್ಷಣೆಗೆ ಬಂತು ಬೋಟ್ ಆ್ಯಂಬುಲೆನ್ಸ್

ತಮ್ಮ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ದ್ವೇಷದಿಂದ ದಾಖಲಾದ ಪ್ರಕರಣ ಎಂದು ಮನಗಂಡ ನ್ಯಾಯಾಲಯ ಇಬ್ಬರನ್ನೂ ಆರೋಪ ಮುಕ್ತಗೊಳಿಸಿದೆ. ಸುಮಾರು 9 ವರ್ಷಗಳಿಂದ ಏಕವ್ಯಕ್ತಿಯಾಗಿ ಹೋರಾಟ ನಡೆಸಿದ್ದ ರುಕ್ಮಯ್ಯ ಗೌಡರಿಗೆ ಇದೀಗ ನ್ಯಾಯ ದೊರೆತಿದ್ದು, ಅವ್ಯವಹಾರದ ಪ್ರಕರಣವೂ ಇದೀಗ ಬೆಂಗಳೂರಿನಲ್ಲಿ ವಿಚಾರಣೆ ಹಂತದಲ್ಲಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ ತನಗೆ ಆದ ಅನ್ಯಾಯಗಳನ್ನು ರುಕ್ಮಯ್ಯ ಗೌಡ ಇದೀಗ ಸಾರ್ವಜನಿಕರಿಗೆ ತಿಳಿಸಲು ಮುಂದಾಗಿದ್ದಾರೆ.