Last Updated:
ಮಂಗಳೂರು ಕಂಬಳದಲ್ಲಿ ಈ ವರ್ಷ 6 ವಿಭಾಗ, ಹೊಸ ನಿಯಮಗಳು ಜಾರಿ, ಕನೆ ಹಲಗೆ ವಿಭಾಗದಲ್ಲಿ 6.5 ಮತ್ತು 7.5 ಕೋಲು ನಿಶಾನೆಗೆ ನೀರು ಹಾಯಿಸಿದರಷ್ಟೇ ಬಹುಮಾನ, ಸಮಯ ನಿಯಮಗಳು ಕಠಿಣವಾಗಿವೆ.
ಮಂಗಳೂರು: ತುಳು ನಾಡಿನ ಕಂಬಳದ ಸ್ಪರ್ಧೆ (Competition) ಆರು ವಿಭಾಗಗಳಲ್ಲಿ ನಡೆಯುತ್ತದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ, ಕನೆಹಲಗೆ ಎಂಬ ವಿಭಾಗದ ಸ್ಪರ್ಧೆಗಳಲ್ಲಿ ನಡೆಯುತ್ತದೆ. ಕಂಬಳದ ಸಮಯ ಪರಿಪಾಲನೆಗೆ (Maintain) ಈ ಬಾರಿ ಕಂಬಳ ಹೊಸ ನಿರ್ಧಾರ (Decide) ಕೈಗೊಂಡಿದೆ. ಕನೆ ಹಲಗೆ ವಿಭಾಗದಲ್ಲಿ ನೀರು ಹಾಯಿಸಿದರಷ್ಟೇ ಕೋಣಗಳಿಗೆ ಬಹುಮಾನ ಎಂಬ ನಿಯಮವನ್ನು (Rule) ಜಾರಿ ಮಾಡಿದೆ.
ಕಂಬಳದ ಕನೆ ಹಲಗೆ ವಿಭಾಗದಲ್ಲಿ ಕೋಣಗಳು ನಿಶಾನೆಗೆ ನೀರು ಹಾಯಿಸದೆ ಇದ್ದರೆ ಕೋಣ ಓಟದ ವೇಳೆಯಲ್ಲಿ ನೀರು ಹಾಯಿಸುವ ಎತ್ತರವನ್ನು ನೋಡಿ ಬಹುಮಾನವನ್ನು ನಿರ್ಧರಿಸಲಾಗುತ್ತಿತ್ತು. ಇದು ಕೆಲವೊಮ್ಮೆ ಗೊಂದಲ ಚರ್ಚೆಗೂ ಕಾರಣವಾಗುತ್ತಿತ್ತು. ಈ ವರ್ಷದಿಂದ 6.5 ಕೋಲು ನಿಶಾನೆ ಮತ್ತು 7.5 ಕೋಲು ನಿಶಾನೆಗೆ ನೀರು ಹಾಯಿಸಿದರಷ್ಟೇ ಬಹುಮಾನ ಎಂದು ನಿರ್ಧಾರ ಮಾಡಲಾಗಿದೆ.
ಈ ಹಿಂದೆ ಕನೆ ಹಲಗೆ ವಿಭಾಗದಲ್ಲಿ 4 ಸುತ್ತುಗಳ ಓಟಕ್ಕೆ ಅವಕಾಶ ಇತ್ತು. ಈ ವರ್ಷದಿಂದ ನಿಗದಿತ ಸಮಯ 3.30 ಗಂಟೆಯೊಳಗೆ 5 ಸುತ್ತು ಓಡಿಸಲು ಅವಕಾಶವಿದೆ. ಈ ಕಾಲಮಿತಿಯೊಳಗೆ 5 ಸುತ್ತು ಓಡಿಸದಿದ್ದಲ್ಲಿ ಆ ಬಳಿಕ ಅವಕಾಶ ಇಲ್ಲ ಎಂಬ ನಿರ್ಧಾರಕ್ಕೆ ಕಂಬಳ ಸಮಿತಿ ಬಂದಿದೆ. ಈ ಋತುವಿನ ಕಂಬಳವನ್ನು ನಿಯಮದಂತೆ 24 ಗಂಟೆಯೊಳಗೆ ಮುಗಿಸಬೇಕೆಂಬ ದೃಷ್ಟಿಯಿಂದ ಕಂಬಳದಲ್ಲಿ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಅಡ್ಡ ಹಲಗೆ, ನೇಗಿಲು, ಹಗ್ಗ ಕಿರಿಯ ವಿಭಾಗದಲ್ಲಿ ಒಂದು ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು ಮೂರು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಅದಕ್ಕಿಂತ ವಿಳಂಬ ಮಾಡಿದರೆ ಅವಕಾಶ ನಿರಾಕರಣೆಯ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪ್ರತೀ ವಿಭಾಗದಲ್ಲೂ ಕೋಣ ಬಿಡಲು 5 ನಿಮಿಷದ ಕಾಲಾವಕಾಶ ನೀಡಲಾಗಿದೆ.
ನಿರ್ಣಾಯಕರ ತೀರ್ಮಾನವೇ ಅಂತಿಮ ಎಂಬ ನಿಯಮ ಜಾರಿ!
ಇದೇ ಮಾದರಿಯಲ್ಲಿ ಅಡ್ಡ ಹಲಗೆ, ನೇಗಿಲು, ಹಗ್ಗ ಹಿರಿಯ ವಿಭಾಗದಲ್ಲಿ ಒಂದು ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು ಐದು ನಿಮಿಷದ ಕಾಲಾವಕಾಶ ನೀಡಲಾಗಿದೆ. ಇದೇ ರೀತಿ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಕ್ಕೂ ಕೋಣ ಬಿಡಲು 8 ನಿಮಿಷ ಮತ್ತು ಆರು ನಿಮಿಷಗಳ ಅವಕಾಶ ನೀಡಲಾಗಿದೆ. ಎಲ್ಲಾ ವಿಭಾಗದಲ್ಲೂ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಪ್ರಶ್ನಿಸುವಂತಿಲ್ಲ ಎಂಬ ಎಚ್ಚರಿಕೆಯನ್ನು ಕಂಬಳ ಸಮಿತಿಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
Dakshina Kannada,Karnataka
December 08, 2025 2:23 PM IST