Kane Williams: 15 ವರ್ಷಗಳ ಏಕದಿನ ಕ್ರಿಕೆಟ್​​ ಜೀವನದಲ್ಲಿ ಮೊದಲ ಬಾರಿಗೆ ನಾಚಿಕೆಗೇಡಿನ ದಾಖಲೆ ಬರೆದ ಕೇನ್ ವಿಲಿಯಮ್ಸ್! / v | ಕ್ರೀಡೆ

Kane Williams: 15 ವರ್ಷಗಳ ಏಕದಿನ ಕ್ರಿಕೆಟ್​​ ಜೀವನದಲ್ಲಿ ಮೊದಲ ಬಾರಿಗೆ ನಾಚಿಕೆಗೇಡಿನ ದಾಖಲೆ ಬರೆದ ಕೇನ್ ವಿಲಿಯಮ್ಸ್! / v | ಕ್ರೀಡೆ
ನಾಚಿಕೆಗೇಡಿನ ದಾಖಲೆ

ಕೇನ್ ವಿಲಿಯಮ್ಸನ್ ತಮ್ಮ 15 ವರ್ಷಗಳ ಸುದೀರ್ಘ ಏಕದಿನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಗೋಲ್ಡನ್ ಡಕ್‌ಗೆ ಔಟಾಗಿದ್ದಾರೆ. ಭಾನುವಾರ ಮೌಂಟ್ ಮೌಂಗನುಯಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಲಿಯಮ್ಸನ್ ಮೊದಲ ಎಸೆತದಲ್ಲಿಯೇ ರನ್ ಗಳಿಸದೆ ಔಟಾದರು. ಈ ಇನ್ನಿಂಗ್ಸ್‌ಗೆ ಮೊದಲು, ಅವರು ತಮ್ಮ ಹಿಂದಿನ 165 ಏಕದಿನ ಇನ್ನಿಂಗ್ಸ್‌ಗಳಲ್ಲಿ ಎಂದಿಗೂ ಗೋಲ್ಡನ್ ಡಕ್‌ಗೆ ಔಟಾಗಿರಲಿಲ್ಲ.

ವಿಲಿಯಮ್ಸನ್ 2010 ರಲ್ಲಿ ತಮ್ಮ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಈ ನಾಚಿಕೆಗೇಡಿನ ದಾಖಲೆಯ ನೋವನ್ನು ವಿಲಿಯಮ್ಸನ್ ಸಹಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಇದು ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ನಂತರ ವಿಲಿಯಮ್ಸನ್ ಆಡಿದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.

ನ್ಯೂಜಿಲೆಂಡ್ ಪರ ಅದ್ಭುತ ಸಾಧನೆ

ಕೇನ್ ವಿಲಿಯಮ್ಸನ್ ಇದುವರೆಗೆ ನ್ಯೂಜಿಲೆಂಡ್ ಪರ 176 ಏಕದಿನ ಪಂದ್ಯಗಳಲ್ಲಿ 166 ಇನ್ನಿಂಗ್ಸ್‌ಗಳಲ್ಲಿ 7235 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ವಿಲಿಯಮ್ಸನ್ 15 ಶತಕಗಳು ಮತ್ತು 47 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರು ತಮ್ಮ ಏಕದಿನ ವೃತ್ತಿಜೀವನದಲ್ಲಿ ಆರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದರೆ, ಮೊದಲ ಎಸೆತದಲ್ಲಿಯೇ ರನ್ ಗಳಿಸದೆ ಔಟಾಗಿರುವುದು ಇದೇ ಮೊದಲು.

ಕೀವಿಸ್ ಪಡೆಗೆ ಗೆಲುವು

ಬೇ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಲ್ಕು ವಿಕೆಟ್‌ಗಳಿಂದ ಜಯಗಳಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್ ತಂಡವು 56 ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲಿಂದ, ನಾಯಕ ಹ್ಯಾರಿ ಬ್ರೂಕ್ 101 ಎಸೆತಗಳಲ್ಲಿ 11 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳ ಮೂಲಕ 135 ರನ್‌ಗಳನ್ನು ಗಳಿಸಿದರು. ಈ ಇನ್ನಿಂಗ್ಸ್‌ನೊಂದಿಗೆ ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡ 200 ರನ್​ಗಳ ಗಡಿ ದಾಟಲು ನೆರವಾದರು.

ಹ್ಯಾರಿ ಬ್ರೂಕ್ ಮತ್ತುಜೇಮೀ ಓವರ್ಟನ್ ಏಳನೇ ವಿಕೆಟ್‌ಗೆ ಕೇವಲ 86 ಎಸೆತಗಳಲ್ಲಿ 87 ರನ್‌ಗಳನ್ನು ಸೇರಿಸಿದರು. ಜೇಮೀ 54 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 46 ರನ್ ಗಳಿಸಿ ಔಟಾದರು. ಬೇರೆ ಯಾವುದೇ ಬ್ಯಾಟರ್ಸ್ ಎರಡಂಕಿ ತಲುಪಲಿಲ್ಲ.

ಜಕಾರಿ ಫೌಲ್ಕ್ಸ್ 4 ವಿಕೆಟ್ 

ನ್ಯೂಜಿಲೆಂಡ್ ಪರ, ಜಕಾರಿ ಫೌಲ್ಕ್ಸ್ 41 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರೆ, ಜಾಕೋಬ್ ಡಫಿ 3 ವಿಕೆಟ್‌ಗಳನ್ನು ಪಡೆದರು. ಇವರಲ್ಲದೆ, ಮ್ಯಾಟ್ ಹೆನ್ರಿ 2 ಮತ್ತು ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಪಡೆದು ಮಿಂಚಿದರು.

ಎಡುವಿದ ಕೀವಿಸ್

ಸುಲಭ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಕೂಡ ಆರಂಭದಲ್ಲಿ ಎಡವಿತು. ಎರಡನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ವಿಲ್ ಯಂಗ್ (5) ಮತ್ತು ಕೇನ್ ವಿಲಿಯಮ್ಸನ್ (0) ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ನ್ಯೂಜಿಲೆಂಡ್ ತಂಡವು ಆರಂಭಿಕ ರಾಚಿನ್ ರವೀಂದ್ರ ಅವರಿಂದ ಹೆಚ್ಚಿನ ಭರವಸೆ ಹೊಂದಿತ್ತು. ಆದರೆ ರಾಚಿನ್ 17 ಎಸೆತಗಳಲ್ಲಿ ಕೆಲವೇ ರನ್‌ಗಳನ್ನು ಗಳಿಸಿ ಪೆವಿಲಿಯನ್‌ಗೆ ಮರಳಿದರು. ಅಲ್ಲಿಂದ, ಟಾಮ್ ಲಾಥಮ್ ಅವರೊಂದಿಗೆ ಡ್ಯಾರಿಲ್ ಮಿಚೆಲ್ ನಾಲ್ಕನೇ ವಿಕೆಟ್‌ಗೆ 42 ರನ್‌ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಿದರು. ಲಾಥಮ್ 24 ರನ್‌ಗಳನ್ನು ಗಳಿಸಿ ಔಟಾದರು.

ಮಿಚೆಲ್ ಮೈಕೆಲ್ ಮತ್ತು ಬ್ರೇಸ್‌ವೆಲ್ ಜೋಡಿ ಐದನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ಆಡುವ ಮೂಲಕ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸಿದರು. ಡ್ಯಾರಿಲ್ ಮಿಚೆಲ್ 91 ಎಸೆತಗಳಲ್ಲಿ 2 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 78 ರನ್ ಗಳಿಸಿದರೆ, ಮೈಕೆಲ್ ಬ್ರೇಸ್‌ವೆಲ್ 51 ರನ್ ಗಳಿಸಿದರು. ಇಂಗ್ಲೆಂಡ್ ಪರ, ಬ್ರೈಡನ್ ಕಾರ್ಸೆ ಮೂರು ವಿಕೆಟ್‌ಗಳನ್ನು ಪಡೆದರೆ, ಲ್ಯೂಕ್ ವುಡ್ ಮತ್ತು ಆದಿಲ್ ರಶೀದ್ ತಲಾ ಒಂದು ವಿಕೆಟ್ ಪಡೆದರು.

ಎರಡನೇ ಪಂದ್ಯ ಯಾವಾಗ?

ನ್ಯೂಜಿಲೆಂಡ್ ಟಿ20 ಸರಣಿಯನ್ನು 0-1 ಅಂತರದಿಂದ ಕಳೆದುಕೊಂಡಿತು. ಈಗ ಏಕದಿನ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ನ್ಯೂಜಿಲೆಂಡ್ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಅಕ್ಟೋಬರ್ 29 ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ನವೆಂಬರ್ 1 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.