Last Updated:
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುಟಾಣಿ ಕೃಷ್ಣ ಮತ್ತು ರಾಧೆಯರ ಮೆರವಣಿಗೆ ನಡೆಯುತ್ತಿದೆ. ಸಾವಿರಕ್ಕೂ ಮಿಕ್ಕಿದ ಮಕ್ಕಳು ಪಾಲ್ಗೊಳ್ಳುತ್ತಾರೆ.
ದಕ್ಷಿಣ ಕನ್ನಡ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami) ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯಲ್ಲಿ ತಮ್ಮ ಮಕ್ಕಳಿಗೆ (Children) ಕೃಷ್ಣ-ರಾಧೆಯರ ವೇಷ ಧರಿಸಿ ಸಂಭ್ರಮಿಸುವುದೇ ಪೋಷಕರಿಗೊಂದು (Parents) ಹಬ್ಬ. ಮಕ್ಕಳಿಗೆ ಕೃಷ್ಣ ವೇಷದ (Costume) ಸ್ಪರ್ಧೆಗಳನ್ನೂ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪುಟಾಣಿ ಕೃಷ್ಣ ಮತ್ತು ರಾಧೆಯರ ಸಂಗಮವೇ ಏರ್ಪಡುತ್ತದೆ.
ಪುತ್ತೂರಿನ ಸಾರ್ವಜನಿಕ ಶ್ರೀ ಕೃಷ್ಣಲೋಕ ಸಮಿತಿ ಮತ್ತು ವಿವೇಕಾನಂದ ಶಿಶು ಮಂದಿರದಿಂದ ಕಳೆದ 27 ವರ್ಷಗಳಿಂದ ಪುಟಾಣಿಗಳಿಗೆ ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಮೆರವಣಿಗೆ ನಡೆಸುವ ಕಾರ್ಯಕ್ರಮ ನಡೆಯುತ್ತಿದೆ. ವಿವೇಕಾನಂದ ಶಿಶುಮಂದಿರದಿಂದ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯವರೆಗೆ ಈ ಮೆರವಣಿಗೆಯನ್ನು ಪ್ರತೀ ವರ್ಷವೂ ಆಯೋಜಿಸಿಕೊಂಡು ಬರಲಾಗುತ್ತಿದೆ. ಸುಮಾರು ಸಾವಿರಕ್ಕೂ ಮಿಕ್ಕಿದ ಪುಟಾಣಿ ಕೃಷ್ಣ ಮತ್ತು ರಾಧೆಯರು ಈ ಮೆರವಣಿಗೆಯಲ್ಲಿ ಅತ್ಯಂತ ಉಲ್ಲಾಸದಿಂದ ಪಾಲ್ಗೊಳ್ಳುವ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಯ ಮೆರಗನ್ನು ದುಪ್ಪಟ್ಟುಗೊಳಿಸುತ್ತಾರೆ.
ಎಲ್ಲಿ ನೋಡಿದರಲ್ಲಿ ಕಾಣಿಸಿದ ವಾಸುದೇವ!
ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಪುಟ್ಟ ಕೃಷ್ಣ ರಾಧೆಯರ ದಂಡು ಕಂಡು ಬರುತ್ತಿದ್ದು, ಕೆಲವು ಕೃಷ್ಣರು ಕಾರಲ್ಲಿ ಕಂಡು ಬಂದರೆ, ಇನ್ನು ಕೆಲವು ಕೃಷ್ಣರು ಆಟೋ ಮತ್ತು ಬೈಕ್ ಗಳಲ್ಲಿ ತಿರುಗಾಡುತ್ತಿರುವುದು ಕಂಡು ಬರುತ್ತಿದೆ. ಶ್ರೀಕೃಷ್ಣನ ಆದರ್ಶ ಮತ್ತು ಸಂದೇಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಕೃಷ್ಣನನ್ನು ತನ್ನಲ್ಲೇ ಕಾಣಬೇಕು ಎನ್ನುವ ಉದ್ದೇಶದಿಂದ ಈ ಸಮಿತಿ ಕಳೆದ ಹಲವು ವರ್ಷಗಳಿಂದ ಈ ಕೃಷ್ಣಲೀಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಯಾವುದೇ ಜಾತಿ-ಧರ್ಮದ ಕಟ್ಟುಪಾಡುಗಳು, ವ್ಯತ್ಯಾಸಗಳಿಲ್ಲದೆ ಸಮಾಜದ ಎಲ್ಲಾ ಸ್ತರದ ಜನ ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಕರೆ ತರುವ ಮೂಲಕ ಒಗ್ಗಟ್ಟನ್ನೂ ಪ್ರದರ್ಶಿಸುವುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷವಾಗಿದೆ.
Puttur,Dakshina Kannada,Karnataka
August 17, 2025 4:45 PM IST