Last Updated:
ತುಳುನಾಡಿನ ಕೆಡ್ಡಸ ಆಚರಣೆ ಮೂರು ದಿನ ನಡೆಯುತ್ತಿದ್ದು, ಭೂಮಿಯನ್ನು ಹೆಣ್ಣು ಎಂದು ಗೌರವಿಸಿ, ಪ್ರಕೃತಿಗೆ ಹಾನಿ ಮಾಡದೆ ಸಂಭ್ರಮಿಸುವ ವಿಶಿಷ್ಟ ಸಂಪ್ರದಾಯವಾಗಿದೆ.
ದಕ್ಷಿಣ ಕನ್ನಡ: ತುಳುನಾಡಿನ ಆಚರಣೆಯೆಂದ ಕೂಡಲೇ ಅದರಲ್ಲಿನ ಕ್ರಮ, ನಿಲುವುಗಳು ಒಂದಷ್ಟು ಭಿನ್ನ ಹಾಗೂ ವಿಶೇಷತೆಯಿಂದಲೇ ಕೂಡಿರುತ್ತದೆ. ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ತುಳುನಾಡಿನ ವಾಡಿಕೆ. ತುಳುನಾಡಿನಲ್ಲಿ (Tulu Nadu) ಹೆಣ್ಣಿಗೆ ವಿಶೇಷ ಸ್ಥಾನಮಾನವಿದ್ದು, ಭೂಮಿಯನ್ನು (Earth) ಹೆಣ್ಣು ಎಂದು ಸಂಕಲ್ಪಿಸಿ ಭೂತಾಯಿಯ ಋತುಸ್ರಾವವನ್ನು (Menstruation) ಸಂಭ್ರಮಿಸುವುದು ಇಲ್ಲಿನ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ. ಮೂರು ದಿನಗಳ ಕಾಲ ಆಚರಿಸುವ ಈ ಆಚರಣೆಯ ಸಂದರ್ಭದಲ್ಲಿ ಪ್ರಕೃತಿಗೆ ಯಾವ ರೀತಿಯಲ್ಲೂ ಹಾನಿ ಮಾಡಬಾರದೆಂಬ ನಿಷೇಧವೂ (Prohibition) ಇದೆ.
ಮನೆ ಹುಡುಗಿ ದೊಡ್ಡವಳಾದಲೆಂದು ಮನೆಯವರೆಲ್ಲಾ ಸಂಭ್ರಮಿಸುವುದು, ಮದುಮಗಳಾಗಿ ಮದುವೆ ಮಾಡಿಸಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಹರ್ಷ ಪಡೋದು ತುಳುನಾಡಿನ ವಾಡಿಕೆ. ಕುಡಿಯಲು ಎಳನೀರು ಕೊಟ್ಟು ತಂಪು ಮಾಡಿ, ಪ್ರೀತಿ ಪಾತ್ರರಿಂದ ಸಿಹಿತಿಂಡಿ ನೀಡಿ, ಬಾಯಿ ಸಿಹಿ ಮಾಡಿ, ಮತ್ತೆ ಅರಶಿನ, ಕುಂಕುಮ , ತಲೆಗೆ ತೆಂಗಿನ ಎಣ್ಣೆ , ಸ್ನಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆ ಹಾಕಿ ಸ್ನಾನ ಮಾಡಿಸಿ, ಹೊಸ ಕಾಜಿ, ಹೊಸ ಬಟ್ಟೆ ಹಾಕಿಸಿ ಮದುಮಗಳಾಗಿ ಮಾಡುವುದೆಂದರೆ ಮನೆಮಂದಿಗೆಲ್ಲ ಅದೇನೋ ಖುಷಿಯೋ ಖುಷಿ.
ಮನೆ ಹುಡುಗಿ ದೊಡ್ಡವಳಾದಳು ಅಂದರೆ ಸೃಷ್ಟಿಸುವ ಕಾರ್ಯಕ್ಕೆ ಅನುವಾದಳು ಎಂಬರ್ಥ. ಅದೇ ಖುಷಿಯನ್ನು ಪ್ರಕೃತಿಯಾದ ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಕೆಡ್ಡಸ. ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎಂಬ ಪ್ರತೀತಿ ತುಳುವರದ್ದಾಗಿದ್ದು, ಜಗದಲ್ಲಾಗುವ ಹಗಲು – ರಾತ್ರಿ, ಋತು ಬಿಸಿಲು, ಮಳೆ, ಚಳಿ, ಹಾಗೆಯೇ ಹುಣ್ಣಿಮೆ – ಅಮಾವಾಸ್ಯೆಗಳು ನಮ್ಮ ಬಾಹ್ಯ ಅನುಭವಕ್ಕೆ ಬರುವಂತಹುದು ಅದರೆ ಸಂಕ್ರಮಣ, ಉತ್ತರಾಯಣಗಳು ನಮ್ಮ ಯೋಚನೆಗೆ ನಿಲುಕದ್ದು ಅದೇ ಪ್ರಕೃತಿಯ ಋತುಚಕ್ರ ಈ ವ್ಯತ್ಯಯಗಳ ಕಾಲವನ್ನೇ ತುಳುವರು ಒಂದೊಂದು ಆಚರಣೆಯ ರೂಪದಲ್ಲಿ ಆರಾಧಿಸುತ್ತಿರುವುದು. ಕೆಡ್ಡಸ ಆಚರಣೆಯ ಸಂದರ್ಭದಲ್ಲಿ ಮರಗಳಲ್ಲಿ ಹೂ ಬಿಡುವುದು ಸೇರಿದಂತೆ ಪ್ರಕೃತಿಯಲ್ಲಿ ವಿಶೇಷ ಬದಲಾವಣೆ ಕಂಡು ಬರುತ್ತದೆ.
ಕೆಡ್ಡಸ ಅಂದರೆ ಕನ್ನಡದಲ್ಲಿ ನೆಲ ಅಗೆಯುವುದು ನಿಷೇಧ ಎನ್ನುವ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ದಿವಸ ಇದರ ಆಚರಣೆ ಇರುತ್ತದೆ. ಮಕರ ಮಾಸದ ಇಪ್ಪತ್ತೇಳನೇ ದಿನ ಸಂಜೆಯಿಂದ ಕುಂಭ ಸಂಕ್ರಮಣ ದವರೆಗೆ ಅಂದರೆ ಫೆಬ್ರುವರಿ ತಿಂಗಳಲ್ಲಿ ನಡೆಯುವ ಈ ಮೂರು ದಿನದ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ. ಈ ಸಮಯಕ್ಕೆ ಮಳೆ ಸರಿದು ಫಲ ಗಾಳಿ ಬೀಸುತ್ತಿರುತ್ತದೆ ಮಾವು, ಗೇರು, ಹಲಸುಗಳೆಲ್ಲ ಎಳೆಕಾಯಿ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ. ಈ ಬೆಳವಣಿಗೆ ಭೂತಾಯಿ ಖುತುಮತಿಯಾದ ಕಾರಣಕ್ಕೆ ಎನ್ನುವ ನಂಬಿಕೆಯ ಹಿನ್ನಲೆಯಲ್ಲೇ ಕೆಡ್ಡಸ ಎನ್ನುವ ಆಚರಣೆ ತುಳುನಾಡಿನಲ್ಲಿ ನಡೆದು ಬಂದಿದೆ.
ಪ್ರತಿ ಮನೆಯ ತುಳಸಿ ಕಟ್ಟೆಯ ಎದುರು ಗೋಮಯದಿಂದ ಶುದ್ಧಿಗೊಳಿಸಿ ಕ್ರಮವಾಗಿ ಮಾವಿನ ಎಲೆ, ಹಲಸಿನ ಎಲೆ ,ಎಣ್ಣೆ, ಅರಶಿನ, ಸ್ನಾನದ ನೀರಿಗೆ ಹಾಕಲು ಸೀಗೆ, ಬಾಗೆ ಹೀಗೆ ಎಲ್ಲವನ್ನೂ ಸಾಲಾಗಿ ಜೋಡಿಸಿ ಇಟ್ಟು ಭೂ ತಾಯಿಯನ್ನು ಸ್ನಾನಕ್ಕೆ ಕಳುಹಿಸುವ ಸಂಪ್ರದಾಯವೂ ಕೆಡ್ಡಸ ಆಚರಣೆಯ ಭಾಗವಾಗಿದೆ.
ಮೂರು ದಿನಗಳ ಕಾಲ ಆಚರಿಸುವ ಈ ಕೆಡ್ಡಸ ಆಚರಣೆಯಲ್ಲಿ ಮೂರು ದಿನಗಳ ಕಾಲ ಪ್ರಕೃತಿಯನ್ನು ಯಾವುದೇ ಕಾರಣಕ್ಕೂ ನೋಯಿಸುವುದು ನಿಶಿದ್ಧವಾಗಿದೆ. ಈ ದಿನಗಳಲ್ಲಿ ವಿಶೇಷ ಊಟದ ವ್ಯವಸ್ಥೆಯನ್ನೂ ಪ್ರತೀ ಮನೆಗಳಲ್ಲಿ ಮಾಡಲಾಗುತ್ತದೆ. ಮೂರು ದಿನಗಳಲ್ಲಿ ಭೂಮಿಯನ್ನು ಉಳುವುದು, ಮರ ಕಡಿಯುವುದು ಹೀಗೆ ಪ್ರಕೃತಿಗೆ ಯಾವುದೇ ರೀತಿಯಲ್ಲೂ ಹಾನಿ ಮಾಡಬಾರದು ಎನ್ನುವ ನಂಬಿಕೆಯಿದೆ. ತುಳುನಾಡಿನ ಹಲವು ಭಾಗಗಳಲ್ಲಿ ಇಂದಿಗೂ ಈ ಅಚರಣೆಯನ್ನು ಜಾಚೂ ತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೃಷಿಕರು ಈ ಮೂರು ದಿನ ಕೃಷಿ ಚಟುವಟಿಕೆಯನ್ನು ನಿಲ್ಲಿಸುತ್ತಾರೆ. ಪ್ರಕೃತಿಯ ಮೇಲೆ ಈ ಮೂಲಕವಾದರೂ ಶೋಷಣೆ ನಿಲ್ಲಲಿ ಎನ್ನುವ ಮುಂದಾಲೋಚನೆಯೇ ಈ ಆಚರಣೆಯ ಹಿಂದಿರುವ ಸಾರವೂ ಆಗಿದೆ.
Dakshina Kannada,Karnataka
Feb 13, 2026 10:08 AM IST