Last Updated:
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ 8ನೇ ಸ್ಥಾನಕ್ಕೇರಿದ್ದಾರೆ.
ಈ ವರ್ಷ ಟೆಸ್ಟ್ ಕ್ರಿಕೆಟ್ ( Test Criket)ನಲ್ಲಿ ಟೀಮ್ ಇಂಡಿಯಾ (Tema India) ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ರಾಹುಲ್ ಒಂದರ ಮೇಲೆ ಒಂದರಂತೆ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇಂಗ್ಲೆಂಡ್ ವಿರುದ್ಧ ಭಾರತ (England vs India) 2-2 ಅಂತರದಲ್ಲಿ ಸರಣಿ ಡ್ರಾ ಮಾಡಿಕೊಳ್ಳುವಲ್ಲಿ ರಾಹುಲ್ ಗಮನಾರ್ಹ ಕೊಡುಗೆ ನೀಡಿದ್ದರು. ಈಗ, ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship)ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ವೆಸ್ಟ್ ಇಂಡೀಸ್ (West Indies) ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು ಅದ್ಭುತ ಶತಕ ಗಳಿಸಿ ಮಿಂಚಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ರಾಹುಲ್ ಎಡುವಿದರು. ಆದರೆ, ರಾಹುಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ)ನಲ್ಲಿ ದಾಖಲೆ ಮಾಡುವಲ್ಲಿ ಹಿಂದೆ ಉಳಿಯಲಿಲ್ಲ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಕ್ ಕೇವಲ 38 ರನ್ ಗಳಿಸಿದ ನಂತರ ವಿಕೆಟ್ ಕಳೆದುಕೊಂಡರು. ಇದರೊಂದಿಗೆ ಅವರು ಡಬ್ಲ್ಯೂಟಿಸಿಯಲ್ಲಿ 2000 ರನ್‌ಗಳ ಗಡಿ ದಾಟಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರಾಹುಲ್ ಈಗ 8ನೇ ಸ್ಥಾನದಲ್ಲಿದ್ದಾರೆ.
ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಒಟ್ಟು 2023 ರನ್ಗಳನ್ನು ಕಲೆ ಹಾಕಿದ್ದು, 6 ಶತಕ ಮತ್ತು 8 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸ್ಟಾರ್ ವಿಕೆಟ್ಕೀಪರ್ ಮತ್ತು ಬ್ಯಾಟರ್ ರಿಷಭ್ ಪಂತ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಪಂತ್ ಅವರು 38 ಪಂದ್ಯಗಳಲ್ಲಿ 2731 ರನ್ ಗಳಿಸಿದ್ದಾರೆ. ಪಂತ್ 6 ಶತಕಗಳು ಮತ್ತು 16 ಅರ್ಧಶತಕಗಳನ್ನು ಸಿಡಿಸಿದ್ದಾರೆ. ರೋಹಿತ್ ಶರ್ಮಾ 40 ಪಂದ್ಯಗಳಲ್ಲಿ 2716 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಹೆಸರಿನಲ್ಲಿ ಒಂದು ದ್ವಿಶತಕ ಸೇರಿದಂತೆ 9 ಶತಕಗಳು ಮತ್ತು 8 ಅರ್ಧಶತಕಗಳಿವೆ.
ಟೀಮ್ ಇಂಡಿಯಾದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆ ಆಗಿದೆ. ವಿರಾಟ್ ಕೊಹ್ಲಿಗೂ ಮೊದಲು ಶುಭಮನ್ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಗಿಲ್ 39 ಪಂದ್ಯಗಳಲ್ಲಿ 2697 ರನ್ ಗಳಿಸಿದ್ದಾರೆ. ಗಿಲ್ ಕೂಡ ರೋಹಿತ್ ಅವರಂತೆಯೇ 9 ಶತಕಗಳು ಮತ್ತು 8 ಅರ್ಧಶತಕಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 46 ಪಂದ್ಯಗಳನ್ನು ಆಡಿದ್ದು, 2617 ರನ್ ಗಳಿಸಿದ್ದಾರೆ. ಕೊಹ್ಲಿ 5 ಶತಕ ಮತ್ತು 11 ಅರ್ಧಶತಕಗಳನ್ನು ಹೊಂದಿದ್ದಾರೆ.
ಪ್ರಸ್ತುತ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಆಗಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ದಾಖಲೆಗಳನ್ನು ಯಾರು ಮುರಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
October 10, 2025 3:29 PM IST