Last Updated:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕದ ಮೇಲೆ ಪೊಲೀಸರ ದಾಳಿಗೆ ಸ್ಥಳೀಯರು ಹಾಗೂ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಇತ್ತೀಚಿನ ಎರಡು ವರ್ಷಗಳಲ್ಲಿ ಕೋಳಿ ಅಂಕಕ್ಕೆ (Koli Anka) ಪೊಲೀಸರ (Police) ದಾಳಿ ಕೋಳಿ ಅಂಕ ಪ್ರಿಯರ ನಿದ್ದೆಗೆಡಿಸಿದೆ. ಕೋಳಿಅಂಕಕ್ಕೆ ದಾಳಿ ನಡೆಸುವ ಮೂಲಕ ಪೊಲೀಸ್ ಇಲಾಖೆ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಲಾಗಿದೆ. ಪೊಲೀಸರ ಕ್ರಮಕ್ಕೆ ವಿರೋಧವಾಗಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ಆರಂಭವಾಗಿದ್ದು, ಪೊಲೀಸ್ ಕ್ರಮಗಳ ವಿರುದ್ಧ ತೊಡೆ ತಟ್ಟಲು ವೇದಿಕೆ ಸಿದ್ಧವಾಗುತ್ತಿದ್ದು, ಈ ಸಮಿತಿಯ ಮೊದಲ ಸಭೆ ಫೆಬ್ರವರಿ 1 ರಂದು ಪುತ್ತೂರಿನಲ್ಲಿ (Putturu) ನಡೆದಿದ್ದು, ಈ ವಿಚಾರವಾಗಿ ಹಲವು ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ.
ತುಳುನಾಡಿನ ವೀರಕ್ರೀಡೆಯಾಗಿರುವ ಕಂಬಳದಂತೆ ರೈತಾಪಿವರ್ಗದ ಮತ್ತೊಂದು ಮನೋರಂಜನಾ ಕ್ರೀಡೆಯಾಗಿರುವ ಕೋಳಿಅಂಕಕ್ಕೆ ಜೂಜುಮಸ್ತಿ ಎಂಬ ಹಣೆಪಟ್ಟಿ ಕಟ್ಟಿಪ್ರಸ್ತುತ ನಿರ್ಬಂಧ ಹೇರಲಾಗಿದೆ ಎಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ಆರೋಪಿಸಿದೆ. ಧಾರ್ಮಿಕ ಹಿನ್ನಲೆಯಿಂದ ನಡೆಸಲಾಗುವ ಜೂಜು ರಹಿತ ಕೋಳಿಅಂಕಕ್ಕೆ ಅವಕಾಶ ನೀಡುವಂತೆ ಶಾಸಕರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಫೆಬ್ರವರಿ 1 ರಂದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿ ರಚನೆಯ ಸಮಾಲೋಚನಾ ಸಭೆ ಪುತ್ತೂರಿನಲ್ಲಿ ನಡೆದಿದೆ.
ಪ್ರಾಚೀನ ಸಂಪ್ರದಾಯದಂತೆ ನೇಮೋತ್ಸವದ ಸಂದರ್ಭಗಳಲ್ಲಿ ಈ ಸಾಂಪ್ರದಾಯಿಕ ಕೋಳಿ ಅಂಕವನ್ನು ನಡೆಸಲಾಗುತ್ತಿತ್ತು. ನೇಮೋತ್ಸವದ ಸಂದರ್ಭ ಗೊನೆಮುಹೂರ್ತದ ನಂತರ `ಕೋಳಿಗೂಟ’ ನೆಡುವ ಆಚರಣೆ ನಡೆಯುತ್ತಿದೆ. ಕೆಲ ಕಡೆಗಳಲ್ಲಿ ನೇಮೋತ್ಸದ ಮುಂಚಿತವಾಗಿ ಕೋಳಿ ಅಂಕ ನಡೆಸಲಾಗುತ್ತಿದ್ದರೆ, ಇನ್ನು ಕೆಲ ಭಾಗಗಳಲ್ಲಿ ನೇಮೋತ್ಸವದ ಬಳಿಕ ಕೋಳಿ ಅಂಕ ನಡೆಸಲಾಗುತ್ತದೆ.
ಆದರೆ ಇದೀಗ ಜಿಲ್ಲೆಯಲ್ಲಿ ಕೋಳಿ ಅಂಕ ನಡೆಸಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಧಾರ್ಮಿಕ ತಾಣಗಳಲ್ಲಿಯೂ ಜೂಜುರಹಿತ ಕೋಳಿಅಂಕಕ್ಕೆ ನಿಬರ್ಂದ ಹೇರುವ ಕೆಲಸ ಮಾಡಲಾಗಿದೆ. ಧಾರ್ಮಿಕ ಹಿನ್ನಲೆಯಲ್ಲಿ ಕೋಳಿಅಂಕದ ಮೂಲಕ ಗಣಗಳಿಗೆ ರಕ್ತತರ್ಪಣ ನೀಡುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ , ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ದಕ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿಅಂಕ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಧಾರ್ಮಿಕ ಪರಂಪರೆಯ ಕೋಳಿಅಂಕಕ್ಕೆ ನಿಷೇಧ ಹೇರುವ ಮೂಲಕ ನಾಡಿನ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ನಡೆಸಲಾಗಿದೆ ಅನ್ನೋದು ಸಮಿತಿಯ ಆರೋಪವಾಗಿದೆ.
Dakshina Kannada,Karnataka