Last Updated:
ಪದವಿನಂಗಡಿ ಕೊರಗಜ್ಜ ಕ್ಷೇತ್ರ ಮಂಗಳೂರಿನಲ್ಲಿ ಪ್ರಸಿದ್ಧ. ಕೊರಗಜ್ಜನಿಗೆ ತುಳುನಾಡಿನ ಜನರು ಭಯಭಕ್ತಿಯಿಂದ ಆರಾಧನೆ, ಅಗೇಲು ಸೇವೆ ಸಲ್ಲಿಸಿ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಾರೆ.
ದಕ್ಷಿಣ ಕನ್ನಡ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೈವ – ದೇವರುಗಳ ನೆಲೆಬೀಡು. ಇಲ್ಲಿ ದೇವರಷ್ಟೇ ದೈವಗಳಿಗೂ ಮಾನ್ಯತೆ, ಆರಾಧನೆಯಿದೆ. ಇಲ್ಲಿನ ಜನರು (People) ದೈವಗಳನ್ನು ಭಯ-ಭಕ್ತಿಯಿಂದ ನಂಬಿ, ಆರಾಧಿಸುತ್ತಾರೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿರುವ ದೈವಗಳಲ್ಲಿ ಕೊರಗಜ್ಜ ದೈವವೂ (Demi God) ಒಂದು. ಇತ್ತೀಚೆಗೆ ಈ ದೈವದ ಕಾರ್ಣಿಕ, ಪ್ರಸಿದ್ಧಿ ಕರಾವಳಿಯ (Coastal) ಆಚೆಗೂ ಹಬ್ಬಿದೆ.
ಕೊರಗಜ್ಜನೆಂದೇ ಜನರು ಪ್ರೀತಿಯಿಂದ ಆರಾಧಿಸುತ್ತಿರುವ ಈ ದೈವದ ಮೂಲ ಹೆಸರು ಕೊರಗ ತನಿಯ. ಏಳು ಮೂಲ ಕ್ಷೇತ್ರಗಳು ಇದ್ದರೂ ತುಳುನಾಡಿನಾದ್ಯಂತ ಹಲವೆಡೆ ಕೊರಗಜ್ಜ ಕ್ಷೇತ್ರಗಳಿವೆ. ಅಂತಹ ಕ್ಷೇತ್ರಗಳ ಪೈಕಿ ಮತ್ತೊಂದು ಪ್ರಸಿದ್ಧವಾದ ಕ್ಷೇತ್ರ ಮಂಗಳೂರು ನಗರದಲ್ಲೇ ಇರುವ ಪದವಿನಂಗಡಿ ಕೊರಗಜ್ಜ ಕ್ಷೇತ್ರ. ಮಂಗಳೂರು ವಿಮಾನನಿಲ್ದಾಣದ ರಸ್ತೆಯಲ್ಲಿ ಇರುವ ಪದವಿನಂಗಡಿ ಕ್ಷೇತ್ರ ಕಾರಣಿಕ ಕ್ಷೇತ್ರವಾಗಿ ಇಂದಿಗೂ ಸಾವಿರಾರು ಜನರನ್ನು ಹರಸುತ್ತಿದೆ.
ಕಳೆದುಹೋಗಿರುವ ಅಮೂಲ್ಯ ಸೊತ್ತುಗಳನ್ನು ಮರಳಿ ಪಡೆಯಲು ತುಳುವರು ಕೊರಗಜ್ಜನ ಮೊರೆಹೋಗುತ್ತಾರೆ. “ಓ ಅಜ್ಜಾ ನಮ್ಮ ಇಂತಿಂತಹ ವಸ್ತು ಕಳೆದುಹೋಗಿದೆ. ಮರಳಿ ನಮ್ಮ ಕೈಸೇರುವಂತೆ ಮಾಡು. ನಿನಗೆ ಕಳ್ಳು, ಚಕ್ಕುಲಿ, ಎಲೆ-ಅಡಿಕೆ ಇಡುತ್ತೇವೆ” ಎಂದು ಹರಕೆ ಹೇಳುತ್ತಾರೆ.
ಪವಾಡವೆಂಬಂತೆ ಆ ವಸ್ತುಗಳು ಹರಕೆ ಹೊತ್ತವರಿಗೆ ಮರಳಿ ಸಿಕ್ಕಿರುವ ಎಷ್ಟೋ ನಿದರ್ಶನ ತುಳುನಾಡಿನಲ್ಲಿದೆ. ಈಗಲೂ ಈ ಪವಾಡ ನಡೆಯುತ್ತಲೇ ಇದೆ. ಅಲ್ಲದೆ ಈ ದೈವಕ್ಕೆ ಅಗೇಲು ಇಡುವುದು ಕೂಡಾ ಇದೆ. ಗೆರಸೆಯಲ್ಲಿ ಅನ್ನ, ಬಂಗುಡೆ ಮೀನು ಸಾರು, ಕೋಳಿ ಪದಾರ್ಥ, ಹುರುಳಿ-ಬಸಳೆ ಪದಾರ್ಥ, ಕಳ್ಳು ಅಥವಾ ಶೇಂದಿ, ಚಕ್ಕುಲಿ, ಎಲೆ-ಅಡಿಕೆ ಮನೆಯ ಹೊರಗಡೆ ಇಟ್ಟು ಸ್ವೀಕರಿಸು ಅಜ್ಜಾ ಎಂಬಂತೆ ಪ್ರಾರ್ಥಿಸುತ್ತಾರೆ. ಈ ಮೂಲಕ ತಾವು ಮನಸ್ಸಿನಲ್ಲಿ ಅಂದುಕೊಂಡ ಕಾರ್ಯವನ್ನು ಸಿದ್ಧಿಸಿರುವುದಕ್ಕೆ ದೈವಕ್ಕೆ ವಿನೀತವಾಗಿ ಹರಕೆ ಸಲ್ಲಿಸುತ್ತಾರೆ.
ಇಷ್ಟಾರ್ಥ ಈಡೇರಿಸುವ ಕಾರಣಿಕ ಕ್ಷೇತ್ರ
ಪದವಿನಂಗಡಿ ಕೊರಗಜ್ಜ ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ನೇಮೋತ್ಸವದಲ್ಲಿ ಸಹಸ್ರಾರು ಜನ ಭಾಗವಹಿಸುತ್ತಾರೆ. ಅಗೇಲು ಸೇವೆಯನ್ನೂ ಸಾವಿರಾರು ಜನ ಒಪ್ಪಿಸುತ್ತಾರೆ. ಪ್ರತಿದಿನ ಕೆಲಸ ಕಾರ್ಯ ಆರಂಭಿಸುವ ಮುನ್ನ ಜನ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಿ ಕೆಲಸ ಮುಂದುವರಿಸೋದು ವಿಶೇಷ. ಮಂಗಳೂರಿನ ಆಸ್ತಿಕರು ಈ ಕ್ಷೇತ್ರಕ್ಕೆ ಆಗಮಿಸಿ ಅಜ್ಜನಿಗೆ ಎಲೆ-ಅಡಿಕೆ, ಚಕ್ಕುಲಿ, ಕಳ್ಳು ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ನಡೆದುಕೊಳ್ಳುತ್ತಾರೆ. ತಮ್ಮ ಮನದ ಇಷ್ಟಾರ್ಥವನ್ನು ಸಿದ್ಧಿಸು ಎಂದು ಪ್ರಾರ್ಥಿಸುತ್ತಾರೆ.
Mangalore,Dakshina Kannada,Karnataka
December 03, 2025 1:17 PM IST