Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಜಾತ್ರೆಗೆ ಲಕ್ಷಾಂತರ ಭಕ್ತರು ಹಾಗೂ ಮೀನುಗಳು ಆಗಮಿಸುವುದು ವಿಶಿಷ್ಟ. ಪುರುಷರಾಯ ದೈವವು ಭೈರವನ ಅವತಾರ ಎಂದು ಪ್ರಸಿದ್ಧ.
ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ಆದಿ ನಾಗಕ್ಷೇತ್ರ. ಇಲ್ಲಿ ಹೆಜ್ಜೆಗೊಂದೊಂದು ಅದ್ಭುತವಿದೆ. ಇಲ್ಲಿನ ಸರ್ಪಶಾಂತಿ ಪೂಜೆಗಳೊಡನೆ ಶಿವಪುತ್ರ, ದೇವಸೇನಾಧಿಪತಿ ಸ್ಕಂದನ ಚಂಪಾ ಷಷ್ಠಿ ಉತ್ಸವವೂ (Festival) ಪ್ರಸಿದ್ಧ. ತಿಂಗಳುಗಟ್ಟಲೆ ನಡೆಯುವ ಈ ಪರ್ವದ ಅಂತ್ಯದ (End) ದಿನಗಳಲ್ಲಿ ಬಹು ಆಕರ್ಷಣೀಯವಾದ ನೀರ ಬಂಡಿ ಉತ್ಸವ ನಡೆಯೋದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಮತ್ತೊಂದು ವಿಶೇಷವಿದ್ದು, ಬಹುಶಃ ವಿಶ್ವದ ಬೇರೆಲ್ಲೂ ಈ ರೀತಿ ಆಚರಣೆ (Celebration) ಇರಲಿಕ್ಕಿಲ್ಲ.
ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವಿಶಿಷ್ಟತೆಯಾಗಿದೆ. ಕ್ಷೇತ್ರದಲ್ಲಿ ಪ್ರತಿವರ್ಷ ಚಂಪಾ ಷಷ್ಠಿಯಂದು ನಡೆಯುವ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸಿ ಇಲ್ಲಿನ ವೈಭವಕ್ಕೆ ಸಾಕ್ಷಿಯಾಗುತ್ತಾರೆ.
ಹಲವು ಪವಾಡಗಳ ನಾಡಾಗಿರುವ ಸುಬ್ರಹ್ಮಣ್ಯದಲ್ಲಿ ಜಾತ್ರೆಯ ಸಂದರ್ಭ ದೇವಾಲಯದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭ ಕೊಪ್ಪರಿಗೆ ಏರುವ ದ್ವಾದಶಿಯಂದು, ದೂರದ ಏನೆಕಲ್ಲು- ಸಂಕಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತದೆ.
ಜಾತ್ರೆ ಮುಗಿಯುವವರೆಗೂ ಇಲ್ಲೇ ಕಂಡು ಬರುವ ಈ ಮೀನುಗಳು ದೇವಸ್ಥಾನದ ಜಾತ್ರೋತ್ಸವದ ಕೊನೆಯಲ್ಲಿ ನಡೆಯುವ ದೈವದ ಕೋಲದ ಬಳಿಕ ತಮ್ಮ ಸ್ವಸ್ಥಾನಕ್ಕೆ ಮರಳುವುದು ಇಲ್ಲಿ ಪ್ರತಿವರ್ಷ ನಡೆಯುವ ವಾಡಿಕೆಯಾಗಿದೆ. ದೈವವು ನದಿಗೆ ನೈವೇದ್ಯ ಹಾಕಿದ ಬಳಿಕ ಅದನ್ನು ತಿಂದು ಅವುಗಳು ಮತ್ತೆ ಬಂದಲ್ಲಿಗೆ ಮರಳುತ್ತವೆ.
ದೇವಸ್ಥಾನದ ಆವರಣದಲ್ಲಿ ನಡೆಯುವ ಪುರುಷರಾಯ ದೈವದ ಕೋಲದ ಬಳಿಕ ದೈವವು ದೇವಸ್ಥಾನದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾನಘಟ್ಟದ ಬಳಿಗೆ ಬಂದು ದೇವರ ಮೀನುಗಳಿಗೆ ನೈವೇದ್ಯ ಹಾಕುವ ಮೂಲಕ ಜಾತ್ರಾಮಹೋತ್ಸವ ಸಂಪನ್ನಗೊಳ್ಳುತ್ತದೆ.
ಭೈರವನ ಅವತಾರ ಪುರುಷರಾಯ
ಪುರುಷರಾಯ ದೈವವು ಭೈರವನ ಅವತಾರ ಎಂದು ಪ್ರಸಿದ್ಧವಾಗಿದೆ. ಪುರುಷರಾಯ ದೈವವನ್ನು ತುಳುನಾಡ ಸುಳ್ಯ-ಕಡಬ-ಪುತ್ತೂರು ಸೇರಿದಂತೆ ಮಲೆನಾಡ ಹಾಗೂ ಕೇರಳ ಗಡಿಯಲ್ಲಿ ಜನರು ನಂಬುತ್ತಾರೆ. ಮುಖಕ್ಕೆ ಕೆಂಪು ರಂಗು ಹಾಗೆಯೇ ಕೈಯಲ್ಲಿ ತ್ರಿಶೂಲ ಹಿಡಿದ ದೈವವು ಉತ್ತರ ಕೇರಳದ ಥೈಯಂ ಮುಖವರ್ಣಿಕೆಯನ್ನು ನೆನಪಿಸುತ್ತದೆ. ಹಾಗೆಯೇ ಇದಕ್ಕೆ ಪ್ರಾಣಿಗಳೆಂದರೆ ಪ್ರೀತಿ!
ಮಾಹಿತಿ ಹಾಗೂ ವಿಡಿಯೋ ಕೃಪೆ: ನಮ್ಮ ಸುಬ್ರಹ್ಮಣ್ಯ
Dakshina Kannada,Karnataka
December 05, 2025 3:27 PM IST