Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೇ ವ್ಯವಸ್ಥೆಯನ್ನು ಅನಾದಿಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದ್ದು, ಈ ವ್ಯವಸ್ಥೆಗೆ ಯಾವುದೇ ಚ್ಯುತಿ ಬಾರದಂತೆ ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ದಕ್ಷಿಣ ಕನ್ನಡ: ರಾಜ್ಯದ ಎಲ್ಲಾ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ಮಧ್ಯಾಹ್ನದ ಮತ್ತು ರಾತ್ರಿ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವ್ಯವಸ್ಥೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಿಂದ ಹಿಡಿದು ಖಾಸಗಿ ಒಡೆತನವಿರುವ ದೇವಸ್ಥಾನಗಳಲ್ಲೂ(Temples) ಈ ವ್ಯವಸ್ಥೆಯಿದೆ. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆಯನ್ನು ನೀಡುವ ಕ್ಷೇತ್ರಗಳು ಕೆಲವು ವರ್ಷಗಳ ಹಿಂದೆ ಬಾಳೆ ಎಲೆ, ಅಡಿಕೆ ಹಾಳೆಯ ತಟ್ಟೆ ಅಥವಾ ಇತರ ಕೆಲವು ಗಿಡಗಳ ಎಲೆಗಳನ್ನು ಬಳಸಿ ಭಕ್ತರಿಗೆ ಪ್ರಸಾದ ಬಡಿಸುತ್ತಿತ್ತು. ಆದರೆ ಇತ್ತೀಚೆಗೆ ಈ ಎಲೆಗಳ ಸ್ಥಾನವನ್ನು ಸ್ಟೀಲ್ ಬಟ್ಟಲುಗಳು(Steel plates) ತುಂಬಿವೆ.
ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದಲ್ಲೂ ಭಕ್ತರಿಗೆ ಸ್ಟೀಲ್ ಬಟ್ಟಲಿನ ಮೂಲಕವೇ ಪ್ರಸಾದ ಬಡಿಸುತ್ತಿದೆ. ಆದರೆ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಾತ್ರ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬಾಳೆಎಲೆಯಲ್ಲೇ ಭಕ್ತರಿಗೆ ಅನ್ನಪ್ರಸಾದ ಬಡಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೇ ವ್ಯವಸ್ಥೆಯನ್ನು ಅನಾದಿಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದ್ದು, ಈ ವ್ಯವಸ್ಥೆಗೆ ಯಾವುದೇ ಚ್ಯುತಿ ಬಾರದಂತೆ ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: Cocoa Crop: ಅಡಿಕೆ ಬೆಳೆಗಾರರ ಆಸರೆಯಾದ ಉಪಬೆಳೆ ಕೊಕ್ಕೋ!
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನವೊಂದಕ್ಕೆ ಸರಾಸರಿ 25 ರಿಂದ 30 ಸಾವಿರ ಭಕ್ತಾಧಿಗಳು ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದು, ರಜಾದಿನಗಳಲ್ಲಿ ಈ ಸಂಖ್ಯೆ 40 ರಿಂದ 45 ಸಾವಿರ ದಾಟುತ್ತೆ. ಇಷ್ಟೊಂದು ಪ್ರಮಾಣದ ಊಟ ಬಡಿಸಲು ಕ್ಷೇತ್ರಕ್ಕೆ ದಿನವೊಂದಕ್ಕೆ ಸರಾಸರಿ 30 ಸಾವಿರ ಬಾಳೆಎಲೆಗಳ ಅವಶ್ಯಕತೆಯಿದೆ. ಕ್ಷೇತ್ರದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತಿನಲ್ಲಿ ಊಟದ ವ್ಯವಸ್ಥೆಯಿದೆ. ಮಧ್ಯಾಹ್ನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರೆ, ರಾತ್ರಿ ವೇಳೆಯಲ್ಲಿ ಅನ್ನಪ್ರಸಾದ ಸ್ವೀಕಾರ ಮಾಡುತ್ತಾರೆ.
ಭಕ್ತರಿಗೆ ಅನ್ನಪ್ರಸಾದ ಬಡಿಸಲು ಬೇಕಾದ ಬಾಳೆ ಎಲೆಯನ್ನು ದೇವಸ್ಥಾನ ದಕ್ಷಿಣಕನ್ನಡ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಿಂದ ಸಂಗ್ರಹಿಸಲಾಗುತ್ತದೆ. ಟೆಂಡರ್ ಮೂಲಕ ಈ ಬಾಳೆಎಲೆಗಳನ್ನು ಸಂಗ್ರಹಿಸುವ ವ್ಯವಸ್ಥೆ ಕ್ಷೇತ್ರದಲ್ಲಿದ್ದು, ಪ್ರತೀ ದಿನಕ್ಕೆ ಬೇಕಾದ ಬಾಳೆಎಲೆಗಳನ್ನು ಸಂಗ್ರಹಿಸೋದು ಕೂಡಾ ದೇವಸ್ಥಾನದ ಆಡಳಿತಕ್ಕೆ ಸವಾಲು ಕೂಡಾ ಆಗಿದೆ. ಕ್ಷೇತ್ರದಲ್ಲಿ ಸ್ಟೀಲ್ ಬಟ್ಟಲುಗಳನ್ನು ಖರೀದಿಸಲು ಬೇಕಾದ ಹಣದ ವ್ಯವಸ್ಥೆಯಿದ್ದರೂ, ಇಂದಿಗೂ ಹಳೆಯ ಸಂಪ್ರದಾಯಗಳನ್ನೇ ಮುಂದುವರಿಸಿಕೊಂಡು ಬರುತ್ತಿರುವುದು ಕ್ಷೇತ್ರದ ಘನತೆಗೂ ಕಾರಣವಾಗಿದೆ.
Dakshina Kannada,Karnataka
December 07, 2024 2:03 PM IST