Last Updated:
ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಆರಂಭವಾಗಿದೆ. ಐದು ದಿನ ಭಕ್ತರ ದಂಡು, ದೇವರ ಸವಾರಿ, ಸಿಡಿಮದ್ದು ಪ್ರದರ್ಶನ ನಡೆಯುತ್ತದೆ.
ದಕ್ಷಿಣ ಕನ್ನಡ: ಗಡಿನಾಡ ಜಿಲ್ಲೆ ಕೇರಳದ (Kerala) ಕಾಸರಗೋಡಿನ ಪ್ರಸಿದ್ಧ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಕುಂಬಳೆಯ (Kumbale) ಕಣಿಪುರ ಗೋಪಾಲಕೃಷ್ಣ ದೇವಸ್ಥಾನದಲ್ಲಿ (Temple) ವಾರ್ಷಿಕ ಜಾತ್ರೋತ್ಸವ ಆರಂಭಗೊಂಡಿದೆ. ಮಕರ ಸಂಕ್ರಾತಿಯಂದು ಈ ಜಾತ್ರೋತ್ಸವಕ್ಕೆ ಕೊಡಿ ಮುಹೂರ್ತ ನೆರವೇರಿದ್ದು, ಮುಂದಿನ ಐದು ದಿನಗಳ ಕಾಲ (5 Days) ಇಲ್ಲಿ ಜಾತ್ರೋತ್ಸವ ನಡೆಯಲಿದೆ. ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯ ಭಕ್ತಾಧಿಗಳ ದಂಡು ಸಾಮಾನ್ಯವಾಗಿದೆ.
ಕಣಿಪುರ ಗೋಪಾಲಕೃಷ್ಣ ದೇವಸ್ಥಾನ ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪನ್ವೇಲ್-ಕೊಚ್ಚಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲೇ ಈ ಕ್ಷೇತ್ರವಿದೆ. ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಈ ದೇವಸ್ಥಾನವನ್ನು ಸ್ಥಳಾಂತರಿಸುವ ಚರ್ಚೆಯೂ ನಡೆದಿತ್ತಾದರೂ, ಇಲ್ಲಿನ ದೇವರು ಸ್ಥಳಾಂತರಕ್ಕೆ ಅವಕಾಶ ಕೊಡದ ಕಾರಣಕ್ಕೆ ದೇವಸ್ಥಾನದ ಭಾಗವನ್ನು ಬಿಟ್ಡು, ಇನ್ನೊಂದು ಪಾಶ್ರ್ವದಲ್ಲಿ ಹೆದ್ದಾರಿಯ ನಿರ್ಮಾಣ ಮಾಡಲಾಗಿದೆ.
ಇಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಅತ್ಯಂತ ವಿಶೇಷವಿದ್ದು, ಇಲ್ಲಿ ದೇವರ ಸವಾರಿ ಸಂದರ್ಭದಲ್ಲಿ ಜರಗುವ ಸಿಡಿಮದ್ದು ಪ್ರದರ್ಶನ ಕೇರಳ ಮಾತ್ರವಲ್ಲದೆ ಕರ್ನಾಟಕದ ಕರಾವಳಿ ಭಾಗದಲ್ಲೂ ಭಾರೀ ಫೇಮಸ್. ಇದೇ ಕಾರಣಕ್ಕೆ ಈ ಕ್ಷೇತ್ರಕ್ಕೆ ಕೇರಳದಿಂದ ಮಾತ್ರವಲ್ಲದೇ ಕರ್ನಾಟಕದಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತಾಧಿಗಳು ಬಂದು ತಮ್ಮ ಸೇವೆ ಸಲ್ಲಿಸುತ್ತಾರೆ. ಇಲ್ಲಿನ ಪ್ರಮುಖ ಸೇವೆಗಳಲ್ಲಿ ತುಲಾಭಾರ ಸೇವೆಯೂ ಒಂದಾಗಿದ್ದು, ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ತುಲಾಭಾರ ಸೇವೆಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಮಹತ್ವವೂ ಇದೆ. ಇದೇ ಕಾರಣಕ್ಕೆ ಇಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ 100 ಅಧಿಕ ತುಲಾಭಾರ ಸೇವೆ ನಡೆಯುತ್ತದೆ.
ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿ ತುಲಾಭಾರ ಸೇವೆಯನ್ನು ಕ್ಷೇತ್ರದ ಗರ್ಭಗುಡಿಯ ಮುಂದೆಯೇ ನೆರವೇರಿಸಲಾಗುತ್ತದೆ. ಅಕ್ಕಿ, ಬೆಲ್ಲ, ಬಾಳೆಹಣ್ಣು, ಸೀಯಾಳ ಹೀಗೆ ಹಲವು ವಸ್ತುಗಳಿಂದ ಇಲ್ಲಿ ಭಕ್ತರ ತುಲಾಭಾರ ಸೇವೆ ಜರಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ಇಲ್ಲಿ ವಯೋವೃದ್ಧರ ತನಕ ತುಲಾಭಾರ ಸೇವೆಯನ್ನು ನೆರವೇರಿಸಿ ಧನ್ಯರಾಗುತ್ತಾರೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka