Last Updated:
ಪುತ್ತೂರಿನ ಬಿರುಮಲೆ ಗುಡ್ಡದಲ್ಲಿ ಎಎಂಆರ್ ಮೈನಿಂಗ್ ಕಂಪನಿ ಸಿಎಸ್‍ಆರ್ ಫಂಡ್ ಮೂಲಕ ಮೊದಲ ಮಿಂಚುಬಂಧಕ ಅಳವಡಿಕೆ ಪೂರ್ಣಗೊಂಡಿದೆ, ಜೀವಹಾನಿ ತಡೆಯಲು ಪ್ರಮುಖ ಕ್ರಮ.
ದಕ್ಷಿಣ ಕನ್ನಡ: ಮಳೆಗಾಲ ಆರಂಭದೊಂದಿಗೆ ಕರಾವಳಿ (Coastal) ಜನತೆಗೆ ಜಲಕಂಟಕದ ಜತೆಗೆ ಸಿಡಿಲಿನ ಭೀತಿಯೂ ಆವರಿಸಿಕೊಳ್ಳುತ್ತದೆ. ಸಿಡಿಲಿನ (Thunderbolt And Lightning) ಆಘಾತಕ್ಕೆ ಸಿಲುಕಿ ಅನೇಕ ಜೀವಹಾನಿಗಳೂ ಇಲ್ಲಿ ನಡೆದಿದೆ. ಹಿಂದೆ ಬ್ರಿಟಿಷರು ಈ ಭಾಗದಲ್ಲಿ `ಮಿಂಚುಬಂಧಕ’ ಅಳವಡಿಕೆ ಮೂಲಕ ಜೀವಹಾನಿ ತಪ್ಪಿಸುವ ನೆಲೆಯಲ್ಲಿ ಕ್ರಮಕೈಗೊಂಡಿದ್ದರು. ರಾಜ್ಯ ಸರ್ಕಾರ (Govt) ಮಿಂಚುಬಂಧಕ ಅಳವಡಿಕೆಯ ಯೋಜನೆ ಕಾರ್ಯ ಸಾಧುವಲ್ಲ ಎಂದು ಪ್ರಸ್ತಾವನೆಯನ್ನು ತಿರಸ್ಕರಿಸಿದರೂ ಇದೀಗ ರಾಜ್ಯದಲ್ಲಿಯೇ ಮೊತ್ತಮೊದಲ ಬಾರಿಗೆ ಪುತ್ತೂರಿನ ಬಿರುಮಲೆ ಗುಡ್ಡದ ಸಹಿತ 5 ಕಡೆಗಳಲ್ಲಿ ಸಿಎಸ್‍ಆರ್ ಫಂಡ್ ಮೂಲಕ `ಮಿಂಚುಬಂಧಕ’ ಅಳವಡಿಕೆ ಮಾಡಲಾಗುತ್ತಿದೆ.
ಕೋಲ್ಕತ್ತಾದ ಎಎಂಆರ್ ಮೈನಿಂಗ್ ಕಂಪನಿ ತನ್ನ ಸಿಎಸ್‍ಆರ್ ಫಂಡ್‍ನ್ನು ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲಿ 5 ಮಿಂಚುಬಂಧಕ ಅಳವಡಿಕೆ ಮಾಡಲು ನೀಡುತ್ತಿದೆ. ಮೊದಲ ಮಿಂಚುಬಂಧಕದ ಅಳವಡಿಕೆ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಪುತ್ತೂರಿನ ಎತ್ತರದ ಪ್ರದೇಶವಾದ ಬಿರುಮಲೆ ಬೆಟ್ಟದಲ್ಲಿ ಇದನ್ನು ಅಳವಡಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾಭಕ್ತನಾಗಿರುವ ಈ ಮೈನಿಂಗ್ ಕಂಪನಿ ಮಾಲೀಕರು ಸುಬ್ರಹ್ಮಣ್ಯ ದೇವಳದ ಭಾಗದಲ್ಲಿಯೂ ಒಂದು ಮಿಂಚುಬಂಧಕ ಅಳವಡಿಕೆ ಮಾಡಬೇಕು ಎಂದು ಇಚ್ಛಿಸಿದ್ದರು. ಆದರೆ ಅಲ್ಲಿಯ ವ್ಯವಸ್ಥೆಗಳು ಸ್ಪಂದಿಸದ ಕಾರಣ ಈ ಮಿಂಚುಬಂಧಕ ಮತ್ತೆ ಪುತ್ತೂರಿಗೆ ವರ್ಗಾಯಿಸಲ್ಪಟ್ಟಿದೆ.
ಪುತ್ತೂರು ಶಾಸಕ ಅಶೋಕ್ ರೈ ಅವರು ಹಾಗೂ ಈ ಹಿಂದಿನ ಉಪವಿಭಾಗಾಧಿಕಾರಿ ಜುಬಿನ್ ಮೊಹಾಪಾತ್ರ ಅವರ ಶ್ರಮ ಹಾಗೂ ಕಾಳಜಿ ಹಿನ್ನಲೆಯಲ್ಲಿ ಈ ಎಎಂಆರ್ ಕಂಪೆನಿ ತನ್ನ ಕೊಡುಗೆಯನ್ನು ನೀಡಿದ್ದು, ಒಂದು ಮಿಂಚುಬಂಧಕ ಅಳವಡಿಕೆಗೆ ವೆಚ್ಚವಾಗುವ ಸುಮಾರು ರೂ.7 ಲಕ್ಷ ಪಾವತಿ ಮಾಡುತ್ತಿದೆ. ಈಗಾಗಲೇ ಪುತ್ತೂರಿನ ಬಿರುಮಲೆ ಗುಡ್ಡದಲ್ಲಿ ಒಂದು ಮಿಂಚುಬಂಧಕ ನಿರ್ಮಾಣವಾಗಿದ್ದು, ಉಳಿದ 4 ಮಿಂಚುಬಂಧಕಗಳು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಡಿಲಿನ ಆಘಾತಕ್ಕೆ ಹೆಚ್ಚಾಗಿ ಒಳಪಡುವ ಸ್ಥಳಗಳಲ್ಲಿ ನಿರ್ಮಾಣವಾಗಲಿದೆ. ಸಿಡಿಲಿನ ಆಘಾತದಿಂದ ಪುತ್ತೂರು, ಸುಳ್ಯ ಹಾಗೂ ಕಡಬ ವಾಪ್ತಿಯಲ್ಲಿ 20 ಕ್ಕೂ ಹೆಚ್ಚು ಜೀವಹಾನಿಗಳಾಗಿದ್ದು, ಈ ಹಿನ್ನೆಲೆಯಲ್ಲಿ ಮಿಂಚುಬಂಧಕ ನಿರ್ಮಾಣಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿತ್ತು. ಅದರ ಜತೆಗೆ ಖಾಸಗಿ ವ್ಯವಸ್ಥೆಯ ಮೂಲಕ ಕಂಪನಿಯನ್ನು ಸಂಪರ್ಕಿಸಿದ ಅಂದಿನ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ಶಾಸಕ ಅಶೋಕ್ ರೈ ಮೂಲಕ ಪಟ್ಟಿರುವ ಶ್ರಮ ಇದೀಗ ಸಾರ್ಥಕವಾಗಿದೆ.
ಮಿಂಚುಬಂಧಕ ಅಳವಡಿಕೆ ಕಾರ್ಯ ಸಾಧುವಲ್ಲ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಜಿಲ್ಲಾಡಳಿತದ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು. 2014 ರಲ್ಲಿ ತಹಶೀಲ್ದಾರ್ ಎಂ.ಟಿ.ಕುಳ್ಳೇ ಗೌಡ ಅವರಿಂದ ಮಿಂಚುಬಂಧಕದ ಪ್ರಸ್ತಾವನೆ ಆರಂಭವಾಗಿತ್ತು. ವಿಶೇಷವಾಗಿ ಸಿಡಿಲಿನ ಆಘಾತಕ್ಕೊಳಪಡುವ ಒಳಮೊಗ್ರು, ನೆಟ್ಟಣಿಗೆ ಮುಡ್ನೂರು, ಕೆಯ್ಯೂರು, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಕಬಕ, ಗೋಳಿತೊಟ್ಟು ಮತ್ತು ಕೊಣಾಜೆ ಭಾಗಗಳಲ್ಲಿ ತೀರಾ ಅವಶ್ಯಕವಾಗಿ ಮಿಂಚುಬಂಧಕಗಳ ಅಳವಡಿಕೆಗೆ ಆಗ್ರಹ ವ್ಯಕ್ತವಾಗಿತ್ತು.
2022 ರಲ್ಲಿ ಪೂರ್ವ ಮುಂಗಾರು ಮಳೆಯ ಸಂದರ್ಭದಲ್ಲಿಯೇ ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಇಚಿಲಂಪಾಡಿಯಲ್ಲಿ ಎರಡು ಜೀವಹಾನಿ ಉಂಟಾದಾಗ ಮತ್ತೆ ಮಿಂಚುಬಂಧಕ ಅಳವಡಿಕೆ ಬಗ್ಗೆ ಜಿಲ್ಲಾಮಟ್ಟದಲ್ಲಿಯೂ ಚರ್ಚೆ ನಡೆದಿತ್ತು. ಈ ಹಂತದಲ್ಲಿ ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿರಲಿಲ್ಲ. ಈ ಹಿನ್ನಲೆಯಲ್ಲಿಯೇ ಖಾಸಗಿ ವ್ಯವಸ್ಥೆ ಮೂಲಕ ಮಿಂಚುಬಂಧಕ ಅಳವಡಿಕೆಗೆ ಶಾಸಕ ಅಶೋಕ್ ರೈ ಮತ್ತು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಅವರು ಹೆಚ್ಚಿನ ಆಸಕ್ತಿ ವಹಿಸಿದ್ದರು. ಇದರ ಪರಿಣಾಮ ಪುತ್ತೂರಿನಲ್ಲಿ ಮಿಂಚುಬಂಧಕ ಅಳವಡಿಕೆಗೆ ಮುನ್ನುಡಿ ಬರೆಯಲಾಗಿದೆ.
Dakshina Kannada,Karnataka
October 08, 2025 8:18 AM IST