Last Updated:
ಈ ಮಕ್ಕಳಿಗೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಸುತ್ತಾಟ, ವಿಜ್ಞಾನ ಕೇಂದ್ರ ಮತ್ತು ತಾರಾಲಯದಲ್ಲಿ 3D ವೀಕ್ಷಣೆ, ಮಧ್ಯಾಹ್ನ ರೆಸಾರ್ಟ್‌ಗೆ ಆಗಮಿಸಿ ಭೋಜನ, ಸಂಜೆಯವರೆಗೆ ಮನೋರಂಜನೆ, ಆಟೋಟ ಸ್ಪರ್ಧೆ, ಬಳಿಕ ಮ್ಯಾಜಿಕ್ ಶೋ ಆಯೋಜನೆ, ರಾತ್ರಿಗೆ ಸಮಾರೋಪ ಸಮಾರಂಭ, ಪ್ರಶಸ್ತಿ ವಿತರಣೆ, ಬಳಿಕ ಅಲ್ಲಿಯೇ ಊಟ ಮುಗಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುತ್ತದೆ.
ದಕ್ಷಿಣ ಕನ್ನಡ: ಹೀಗೆ ಪಿಲಿಕುಳ ನಿಸರ್ಗಧಾಮಕ್ಕೆ(Pilikula Nisargadhama) ಸಾಲಾಗಿ ಬರುತ್ತಿರುವ ಪುಟ್ಟಪುಟ್ಟ ಮಕ್ಕಳನ್ನು ಕಂಡು ಪ್ರವಾಸಕ್ಕೆ(Trip) ಬಂದವರೆಂದು ಅಂದುಕೊಂಡಿದ್ದೀರಾ? ಖಂಡಿತಾ ಅಲ್ಲ. ಇವರೆಲ್ಲರೂ ಅನಾಥ ಮಕ್ಕಳು(Orphan Children). ಇವರಿಗೆ ಮನೆಯೇ ಪ್ರಪಂಚ. ಹೊರಗಡೆ ಸುತ್ತಾಡಬೇಕೆಂದು ಅನ್ನಿಸಿದ್ದರೂ ಕರೆದೊಯ್ಯುವವರಿಲ್ಲ. ಆದ್ದರಿಂದ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(Coastal Friends Mangaluru) ಈ ಮಕ್ಕಳಿಗೆ ಒಂದು ದಿನದ ‘ಸಾಂತ್ವನ ಸಂಚಾರ’ ಕಾರ್ಯಕ್ರಮ ಆಯೋಜಿಸಿದೆ.
ಈ ಮೊದಲು ನಡೆದಿದ್ದ ಸಾಂತ್ವನ ಸಂಚಾರ
ಹೌದು… ಕಳೆದ ವರ್ಷ ಕೋಸ್ಟಲ್ ಫ್ರೆಂಡ್ಸ್ ತಂಡವು ಹೊರಜಗತ್ತಿನಿಂದ ದೂರ ಉಳಿದು, ಹಾಸಿಗೆ ಹಿಡಿದಿದ್ದ 6 ಮಂದಿಗೆ ಸಕಲ ವೈದ್ಯಕೀಯ ಸೌಲಭ್ಯದೊಂದಿಗೆ ಸಾಂತ್ವನ ಸಂಚಾರ ನಡೆಸಿತ್ತು. ಅದರ ಯಶಸ್ಸಿನಿಂದ ಪ್ರೇರಿತರಾಗಿ ಈ ಬಾರಿ ಸಾಂತ್ವನ ಸಂಚಾರ 2.0 ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳ 87 ಮಂದಿ ಅನಾಥ ಮಕ್ಕಳಿಗೆ ತಿರುಗಾಟದ ಮಜಾ ಅನುಭವಿಸುವಂತೆ ಮಾಡಿದೆ.
ಇದನ್ನೂ ಓದಿ: Divorce Case: ವಿಚ್ಛೇದನ ಬಯಸಿದ್ದ ದಂಪತಿಗೆ ನ್ಯಾಯಾಧೀಶರಿಂದ ನೀತಿ ಪಾಠ- ಸುಖಾಂತ್ಯ ಕಂಡ ಡಿವೋರ್ಸ್ ಕೇಸ್
ಇಡೀ ದಿನ ಸುತ್ತಾಟ
ಅನಾಥ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಸರ್ವೇ ನಡೆಸಿ ಆಯ್ಕೆ ಮಾಡಿ ಸಾಂತ್ವನ ಸಂಚಾರಕ್ಕೆ ಆಯ್ದುಕೊಳ್ಳಲಾಗಿದೆ. ಈ ಮಕ್ಕಳಿಗೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಸುತ್ತಾಟ, ವಿಜ್ಞಾನ ಕೇಂದ್ರ ಮತ್ತು ತಾರಾಲಯದಲ್ಲಿ 3D ವೀಕ್ಷಣೆ, ಮಧ್ಯಾಹ್ನ ರೆಸಾರ್ಟ್‌ಗೆ ಆಗಮಿಸಿ ಭೋಜನ, ಸಂಜೆಯವರೆಗೆ ಮನೋರಂಜನೆ, ಆಟೋಟ ಸ್ಪರ್ಧೆ, ಬಳಿಕ ಮ್ಯಾಜಿಕ್ ಶೋ ಆಯೋಜನೆ, ರಾತ್ರಿಗೆ ಸಮಾರೋಪ ಸಮಾರಂಭ, ಪ್ರಶಸ್ತಿ ವಿತರಣೆ, ಬಳಿಕ ಅಲ್ಲಿಯೇ ಊಟ ಮುಗಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಗುತ್ತದೆ.
ಖರ್ಚು- ವೆಚ್ಚ ಎಲ್ಲವೂ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ತಂಡದ್ದೇ
ಮಕ್ಕಳನ್ನು ಕರೆತರಲು, ವಾಪಸ್ ಕಳುಹಿಸಿಕೊಡಲು ವಾಹನ ವ್ಯವಸ್ಥೆ ಮಾಡಲಾಗಿದೆ. ಹೆಣ್ಣುಮಕ್ಕಳ ನಿಗಾವಹಿಸಲು ಮಹಿಳಾ ಸ್ವಯಂ ಸೇವಕರನ್ನೇ ನಿಯೋಜಿಸಲಾಗಿದೆ. ತುರ್ತುಸೇವೆಗೆ ಒಂದು ಆ್ಯಂಬುಲೆನ್ಸ್ ಮತ್ತು ವೈದ್ಯರನ್ನು ನಿಯೋಜಿಸಲಾಗಿದೆ. ಮಕ್ಕಳಿಗೆ ಸಮವಸ್ತ್ರ ಮಾದರಿಯ ಟಿ-ಶರ್ಟ್, ಹ್ಯಾಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೊನೆಗೆ ಎಲ್ಲಾ ಮಕ್ಕಳಿಗೂ ಅವರ ಕುಟುಂಬಸ್ಥರಿಗೂ 10ಸಾವಿರ ಮೌಲ್ಯದ ಕಿಟ್ ನೀಡಲಾಗುತ್ತದೆ. ಎಲ್ಲಾ ಖರ್ಚು-ವೆಚ್ಚವನ್ನು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ತಂಡದ 73ಮಂದಿ ಸದಸ್ಯರೇ ಭರಿಸಲಿದ್ದಾರೆ. ಒಟ್ಟಿನಲ್ಲಿ ಈ ಉತ್ಸಾಹಿ ಯುವಕರ ತಂಡದ ಕಾರ್ಯ ಮಾತ್ರ ನಿಜಕ್ಕೂ ಶ್ಲಾಘನೀಯ. ಇವರ ಈ ಸೇವೆಗೊಂದು ಸಲಾಂ ಎನ್ನಲೇಬೇಕು.
Dakshina Kannada,Karnataka
December 21, 2024 3:42 PM IST