Mangaluru: ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ ಕರ್ನಾಟಕದ ಅತಿದೊಡ್ಡ ಮಸೀದಿ; ಏಕಕಾಲದಲ್ಲಿ 10 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ | Taj Mahal style mosque construction plan in Ullal Karnataka

Mangaluru: ಉಳ್ಳಾಲದಲ್ಲಿ ನಿರ್ಮಾಣವಾಗಲಿದೆ ಕರ್ನಾಟಕದ ಅತಿದೊಡ್ಡ ಮಸೀದಿ; ಏಕಕಾಲದಲ್ಲಿ 10 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಲು ಅವಕಾಶ | Taj Mahal style mosque construction plan in Ullal Karnataka

Last Updated:

ಉಳ್ಳಾಲದ ಸಯ್ಯದ್ ಮುಹಮ್ಮದ್ ಶರೀಫುಲ್ಲಾ ಮದನಿ ದರ್ಗಾ ಬಳಿ ತಾಜ್‌ಮಹಲ್ ಶೈಲಿಯ ಕರ್ನಾಟಕದ ಅತಿದೊಡ್ಡ ಮಸೀದಿ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. 10 ಸಾವಿರ ಮಂದಿ ಪ್ರಾರ್ಥಿಸಬಹುದು.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಉಳ್ಳಾಲದ ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ (Ullal Juma Masjid) ದಕ್ಷಿಣ ಭಾರತದ (South India) ಅಜ್ಮೀರ್ ಎಂದೇ ಪ್ರಸಿದ್ಧಿ. ಇದೀಗ ಈ ದರ್ಗಾದ ಬಳಿಯಲ್ಲಿ ತಾಜ್‌ಮಹಲ್ (Tajmahal) ವಾಸ್ತುಶಿಲ್ಪ ಶೈಲಿಯ ಕರ್ನಾಟಕದ (Karnataka) ಅತಿದೊಡ್ಡ ಮಸೀದಿ (mosque) ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ.

ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿಗೆ 75 ವರ್ಷಗಳ ಇತಿಹಾಸವಿದೆ. ಇಲ್ಲಿ ನಮಾಜ್ ಮಾಡಲು ಸ್ಥಳಾವಕಾಶದ ಕೊರತೆ ಕಂಡಿದ್ದು, ಹೊಸ ಮಸೀದಿ ನಿರ್ಮಾಣಕ್ಕೆ ಆಡಳಿತ ಸಮಿತಿ ಯೋಜನೆ ಹಾಕಿಕೊಂಡಿದೆ. ಆದರೆ ಇದು ಮಾಮೂಲಿ ಮಸೀದಿಯಾಗದೆ ವಿನೂತನ ಶೈಲಿಯ ಮಸೀದಿ ಆಗಬೇಕೆಂಬುದು ಆಡಳಿತ ಸಮಿತಿಯ ನಿರ್ಧಾರ ಮಾಡಿದೆ. ಅದಕ್ಕಾಗಿ ಜಗದ್ವಿಖ್ಯಾತ ತಾಜ್‌ಮಹಲ್ ಮಾದರಿಯ ಮಸೀದಿ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಈಗಾಗಲೇ ಮಸೀದಿಯ ನೀಲನಕ್ಷೆ ಸಿದ್ಧವಾಗಿದೆ.

ಈ ಮಸೀದಿ 8 ಮಿನಾರ್, 6 ಗುಂಬಜ್, 5 ಕಡೆ ಪ್ರವೇಶ ದ್ವಾರಗಳನ್ನು ಒಳಗೊಳ್ಳಲಿದೆ. ನೆಲ ಹಾಗೂ ಮೊದಲ ಮಹಡಿ 14 ಅಡಿ ಎತ್ತರವಿರಲಿದ್ದು, ಎರಡನೇ ಅಂತಸ್ತು 13 ಅಡಿ ಸೇರಿದಂತೆ ಮಸೀದಿ ಒಟ್ಟು 40 ಅಡಿ ಎತ್ತರವಿರಲಿದೆ. ಮೂರು ಅಂತಸ್ತಿನಲ್ಲಿ ಪ್ರಾರ್ಥನೆಗೆ ಅವಕಾಶವಿರಲಿದೆ. ನೆಲ ಮಹಡಿಯಲ್ಲಿ ಧರ್ಮಗುರುಗಳ ಪ್ರವಚನಕ್ಕೂ ಅವಕಾಶ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿದೆ.

ಗೋಡೆಗಳಿಗೆ ಒಳಾಂಗಣ ಹಾಗೂ ಹೊರಾಂಗಣಕ್ಕೆ ಅಮೃತಶಿಲೆಯನ್ನೇ ಬಳಸಲಾಗುವುದು. ರಾಸಾಯನಿಕವಿಲ್ಲದೇ ನೈಸರ್ಗಿಕವಾಗಿ ಮಸೀದಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಮಸೀದಿಯ ಮುಂಭಾಗದಲ್ಲಿ 40 ಅಡಿ ಅಗಲ, 70 ಅಡಿ ಉದ್ದ ಹಾಗೂ ಒಂದೂವರೆ ಅಡಿ ಆಳದ ಸುಂದರ ಕೊಳ ನಿರ್ಮಿಸಲಾಗುತ್ತದೆ. ಈ ಮಸೀದಿ 1 ಲಕ್ಷ ಚದರ ಅಡಿ ವಿಸ್ತೀರ್ಣವಿದ್ದು, ಏಕಕಾಲದಲ್ಲಿ 10 ಸಾವಿರ ಮಂದಿ ಪ್ರಾರ್ಥಿಸುವ ಸ್ಥಳಾವಕಾಶ ಇರಲಿದೆ. ಒಟ್ಟಿನಲ್ಲಿ ತಾಜ್‌ಮಹಲ್ ಅನ್ನು ಹೋಲುವ ಮಸೀದಿ ಮುಂದಿನ ಒಂದೆರಡು ವರ್ಷಗಳಲ್ಲಿ ಉಳ್ಳಾಲದಲ್ಲಿ ತಲೆ ಎತ್ತಲಿದೆ.

ಇನ್ನು, ದೇಶದ ಅತಿದೊಡ್ಡ ಮಸೀದಿ ಎಂಬ ಖ್ಯಾತಿ ಭೋಪಾಲ್ ನಲ್ಲಿರುವ ತಾಜ್ ಉಲ್ ಮಸೀದಿಗೆ ಸಲ್ಲಬೇಕು ಎಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಹಾ ಜಹಾನ್ ಬೇಗಂ ಕಾಲಾವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ದೆಹಲಿಯ ಜಾಮಾ ಮಸೀದಿಯೇ ಅತಿದೊಡ್ಡ ಮಸೀದಿ ಎಂದು ಹಲವು ಹೇಳುತ್ತಾರೆ. ಇಲ್ಲಿ ಏಕಕಾಲದಲ್ಲಿ 25 ಸಾವಿರ ಮಂದಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ದಕ್ಷಿಣ ಭಾರತದ ಅತಿದೊಡ್ಡ ಮಸೀದಿ ಎಂಬ ಹೆಗ್ಗಳಿಕೆಯನ್ನು ಕಲಬುರಗಿಯ ಜಾಮಿಯ ಮಸೀದಿ ಪಡೆದುಕೊಂಡಿದೆ.