Last Updated:
ಮಾಮೂಲಿ ಕೆಸರೆಂದರೆ ಕಾಲಿಡಲೂ ಹೇಸುವವರು ಕೆಸರುಗದ್ದೆಯಲ್ಲಿ ಇಳಿದು ಆಟ-ಓಟ-ಕುಣಿದಾಡಿ ಗಮ್ಮತ್ತು ಮಾಡಿದರು. ಮಕ್ಕಳು, ಹಿರಿಯರು, ಯುವಕರು, ಯುವತಿಯರೆನ್ನದೆ ದಿನವಿಡೀ ಕೆಸರಾಟದಲ್ಲಿ ಮಿಂದೆದ್ದರು.
ಮಂಗಳೂರು: ಪಚ್ಚನಾಡಿ(Pacchanadi) ಎಂದಾಕ್ಷಣ ಮೊದಲು ನೆನಪಾಗುವುದೇ ಡಂಪಿಂಗ್ ಯಾರ್ಡ್(Dumping Yard). ಈ ಡಂಪಿಂಗ್ ಯಾರ್ಡ್ ಕುಸಿದು ಭಾರೀ ಅವಾಂತರ ಸೃಷ್ಟಿಯಾಗಿ ಪಚ್ಚನಾಡಿಯೆಂಬ ಹಸಿರುಸಿರಿಯ ಪುಟ್ಟಪ್ರದೇಶ ಕುಖ್ಯಾತಿಯನ್ನೇ ಗಳಿಸಿತ್ತು. ಇದನ್ನು ಅಳಿಸಿ ಹೊಸ ಖ್ಯಾತಿಯನ್ನು ಸೃಷ್ಟಿಸಲು ಸ್ಥಳೀಯರೇ ಸೇರಿ ಆಯೋಜಿಸಿದ್ದ ಹೊಸತಂತ್ರವೇ ಪಚ್ಚನಾಡಿ ಪರ್ಬ – ಕೆಸರ್ಡ್ ಒಂಜಿ ದಿನ.
ಹೌದು… ಪಚ್ಚನಾಡಿಯಲ್ಲಿ ಇಳಿಜಾರಿನಂತಿರುವ ರಸ್ತೆಯಲ್ಲಿ ಮುಂದೆ ಹೋದಲ್ಲಿ ಸಿಗುವುದೇ ‘ಬಂದಲೆ’ ಎಂಬ ಪುಟ್ಟ ಪ್ರದೇಶ. ಇಲ್ಲಿನ ಗದ್ದೆಯೊಂದರಲ್ಲಿ ಆಯೋಜನೆಗೊಂಡಿತ್ತು ಕೆಸರ್ಡ್ ಒಂಜಿ ದಿನ. ಬಂದಲೆ ಫ್ರೆಂಡ್ಸ್ ದಿನವಿಡೀ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗ್ರಾಮದ ಜನರೆಲ್ಲರೂ ಒಟ್ಟುಗೂಡಿದ್ದರು. ಸ್ಥಳೀಯ ಮಹಿಳೆಯರು, ಪುರುಷರು, ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಗದ್ದೆಯ ಬದುವಿನಲ್ಲಿ ಹಾಜರಾಗಿದ್ದರು. ಮಾಮೂಲಿ ಕೆಸರೆಂದರೆ ಕಾಲಿಡಲೂ ಹೇಸುವವರು ಕೆಸರುಗದ್ದೆಯಲ್ಲಿ ಇಳಿದು ಆಟ-ಓಟ-ಕುಣಿದಾಡಿ ಗಮ್ಮತ್ತು ಮಾಡಿದರು. ಮಕ್ಕಳು, ಹಿರಿಯರು, ಯುವಕರು, ಯುವತಿಯರೆನ್ನದೆ ದಿನವಿಡೀ ಕೆಸರಾಟದಲ್ಲಿ ಮಿಂದೆದ್ದರು.
ಇದನ್ನೂ ಓದಿ: Kannada Rajyotsava: ಗಡಿಯಲ್ಲಿ ಹೇಗಿದೆ ಗೊತ್ತಾ ಕನ್ನಡ ಹಬ್ಬದ ತಯಾರಿ?
ಮಕ್ಕಳಿಗೆ, ಯುವಕರಿಗೆ ಕೆಸರುಗದ್ದೆಯಲ್ಲಿ ಓಟ, ಲೈಮ್ ಸ್ಪೂನ್ ಓಟ, ಅಡಿಕೆ ಹಾಳೆಯಲ್ಲಿ ಕುಳಿತ ಪತಿಯನ್ನು ಪತ್ನಿ ಎಳೆಯುವುದು, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ನಿಧಿ ಶೋಧ ಹೀಗೆ ವೈವಿಧ್ಯಮಯ ಗಮ್ಮತ್ತಿನ ಆಟವಿತ್ತು. ಆಟದ ಸಂದರ್ಭ ಕೆಲವರು ಕೆಸರಲ್ಲಿ ಬಿದ್ದರು. ಬಿದ್ದವರು ಎದ್ದರು, ಮತ್ತೆ ಓಡಿದರು.
ಒಂದೆಡೆ ಷವರ್‌ಬಾತ್‌ನಂತೆ ಸುರಿಯುತ್ತಿರುವ ನೀರಿಗೆ ತಲೆಯಾನಿಸಿ ಕೆಲವರು ಕುಣಿಯುತ್ತಿದ್ದರೆ, ಮತ್ತೊಂದೆಡೆ ಹೆತ್ತವರ ಬೈಗುಳದ ಭಯವಿಲ್ಲದೆ ಮಕ್ಕಳು ಕೆಸರಿನಲ್ಲಿ ಉರುಳಿ, ಹೊರಳಿ ಆಡುತ್ತಿದ್ದರು. ಇನ್ನೊಂದೆಡೆ ಪಿರಮಿಡ್ ರಚಿಸಿ ಕೆಸರಿಗೆ ದೊಪ್ಪನೆ ಬೀಳುತ್ತಿದ್ದರು ಕೆಲವರು. ಈ ಆಟಗಳನ್ನು ಗದ್ದೆಯ ಬದುವಿನಲ್ಲಿಯೇ ಕುಳಿತು ಮಜಾ ಪಡೆಯುತ್ತಿದ್ದವರು ಇನ್ನೊಂದಿಷ್ಟು ಮಂದಿ. ಜೊತೆಗೆ ಬುದ್ಧಿಗೆ ಚುರುಕು ಮುಟ್ಟಿಸುವ ಪ್ರಶ್ನೆಗಳು. ಗೆದ್ದವರಿಗೆ ಅಲ್ಲಿಯೇ ಬಹುಮಾನ ವಿತರಣೆ. ಹೀಗೆ ಇಡೀ ದಿನವನ್ನು ಹುಮ್ಮಸ್ಸಿನಿಂದ ಕಳೆದಿದ್ದರು ಪಚ್ಚನಾಡಿ ಜನತೆ.
Mangalore,Dakshina Kannada,Karnataka
October 29, 2024 4:18 PM IST