Mangaluru Dasara 2024: ಕಡಲನಗರಿ ಹುಲಿವೇಷಧಾರಿಗಳ ಭರ್ಜರಿ ಘರ್ಜನೆ- ರೋಮಾಂಚನಗೊಂಡ ಪ್ರೇಕ್ಷಕರು! | Mangaluru Dasara 2024: Kudlas Tiger Festival is celebrated by the people of Kadalanagari

Mangaluru Dasara 2024: ಕಡಲನಗರಿ ಹುಲಿವೇಷಧಾರಿಗಳ ಭರ್ಜರಿ ಘರ್ಜನೆ- ರೋಮಾಂಚನಗೊಂಡ ಪ್ರೇಕ್ಷಕರು! | Mangaluru Dasara 2024: Kudlas Tiger Festival is celebrated by the people of Kadalanagari

ಕರಾವಳಿ ಭಾಗದಲ್ಲಿ ಹುಲಿ ವೇಷವೆಂದರೆ ಎಲ್ಲರಿಗೂ ಕ್ರೇಝ್‌‌. ಮನೆಮನೆ, ಅಂಗಡಿ, ಬೀದಿಗಳನ್ನು ಸುತ್ತಿ ಬ್ಯಾಂಡ್, ತಾಸೆಗಳ ಶಬ್ದಗಳಿಗೆ ಸ್ಟೆಪ್ ಹಾಕುತ್ತಿದ್ದ ಹುಲಿವೇಷಕ್ಕೆ ಇತ್ತೀಚೆಗೆ ಭರ್ಜರಿ ವೇದಿಕೆಗಳು ಸೃಷ್ಟಿಯಾಗಿದೆ. ಹುಲಿವೇಷ ತಂಡಗಳ ನಡುವೆ ಪಂಥ ನಡೆದು ಲಕ್ಷಾಂತರ ರೂಪಾಯಿ ಮೊತ್ತದ ಬಹುಮಾನ ಸಹ ನೀಡಲಾಗುತ್ತದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಪಿಲಿಪರ್ಬದ ಪಂಥದಲ್ಲಿ ಕುಡ್ಲದ ಹುಲಿಗಳು ಭರ್ಜರಿ ನೃತ್ಯ ಪ್ರದರ್ಶಿಸಿದ್ದಾರೆ.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜನೆಗೊಂಡ ಮೂರನೇ ವರ್ಷದ “ಕುಡ್ಲದ ಪಿಲಿ ಪರ್ಬ-2024” ರೋಮಾಂಚನಕಾರಿಯಾಗಿತ್ತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪಿಲಿಪರ್ಬ ನಡೆಯಿತು.

ಇದನ್ನೂ ಓದಿ:Sirsi Marikamba Temple: ಭಕ್ತರೇ ಗಮನಿಸಿ, ಶಿರಸಿ ಮಾರಿಕಾಂಬಾ ದೇಗುಲಕ್ಕೆ ತೆರಳುವ ಮುನ್ನ ಈ ವಿಷಯ ಗಮನದಲ್ಲಿರಲಿ!

ಕರಾವಳಿಯ ಜನಪ್ರಿಯ 10 ಹುಲಿವೇಷ ತಂಡಗಳು “ಕುಡ್ಲದ ಪಿಲಿ ಪರ್ಬ-2024” ಸ್ಪರ್ಧೆಯಲ್ಲಿ ಪಾಲ್ಗೊಂಡು ವಿವಿಧ ಕಸರತ್ತು ಪ್ರದರ್ಶಿಸಿದರು. ಇಡೀ ದಿನ ಕಡಲನಗರಿ ಹುಲಿವೇಷಧಾರಿಗಳ ಭರ್ಜರಿ ಘರ್ಜನೆಗೆ ಸಾಕ್ಷಿಯಾಯಿತು.

ಅಕ್ಕಿಮುಡಿ ಹಾರಿಸಿದ ತಂಡಗಳು

ಹುಲಿವೇಷ ತಂಡಗಳು ಮೆರವಣಿಗೆಯ ಮೂಲಕ ವೇದಿಕೆ ಪ್ರವೇಶಿಸಿ, 20 ನಿಮಿಷಗಳ ಕಾಲ ಪ್ರದರ್ಶನ ನೀಡಿದವು. ಪ್ರತಿ ತಂಡವೂ 38 ಕೆ.ಜಿ. ಭಾರದ ಅಕ್ಕಿಮುಡಿ ಹಾರಿಸಿತು. ಕರಿಹುಲಿ, ಮರಿಹುಲಿ, ತಾಯಿ ಹುಲಿ, ಪಟ್ಟೆಹುಲಿ, ಚಿಟ್ಟೆ ಹುಲಿ ಹೀಗೆ ವೈವಿಧ್ಯಮಯ ಹುಲಿವೇಷಗಳು, ಭರ್ಜರಿ ತಾಸೆ – ಬ್ಯಾಂಡಿನ ಹಿಮ್ಮೇಳಕ್ಕೆ ಸಖತ್ ಸ್ಟೆಪ್ ಹಾಕಿತು. ಈ ಬಾರಿ ಪರ್ಬದ ಹುಲಿ, ಕರಿಹುಲಿ ಎಂಬ ಎರಡು ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು.

ಗೆದ್ದ ತಂಡಕ್ಕೆ ಬಹುಮಾನ

ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ತಂಡಕ್ಕೆ 5 ಲಕ್ಷ ರೂ., ದ್ವಿತೀಯ ಬಹುಮಾನ ಗೆದ್ದ ತಂಡಕ್ಕೆ 3 ಲಕ್ಷ ರೂ. ಮತ್ತು ತೃತೀಯ ಬಹುಮಾನ ಗೆದ್ದ ತಂಡಕ್ಕೆ 2 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು. ತಲಾ 25 ಸಾವಿರ ರೂ. ಮೊತ್ತದ 10 ವೈಯಕ್ತಿಕ ಬಹುಮಾನಗಳನ್ನು ಸಹ ನೀಡಲಾಗಿದೆ. ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇತರ ತಂಡಗಳಿಗೆ ತಲಾ 50 ಸಾವಿರ ರೂಪಾಯಿಯನ್ನು ನೀಡಲಾಗಿದೆ.

ಪ್ರೇಕ್ಷಕರಿಗೆ ಆಸನ ವ್ಯವಸ್ಥೆ

ಇನ್ನು ಪಿಲಿ ಪರ್ಬ ಸ್ಪರ್ಧೆಯನ್ನು ನೋಡಲು ನೆಹರು ಮೈದಾನದಲ್ಲಿ 5 ಸಾವಿರ ಜನರಿಗೆ ಆಸನ ವ್ಯವಸ್ಥೆ, ಸುಸಜ್ಜಿತ ಪ್ರೇಕ್ಷಕ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಪ್ರೇಕ್ಷಕರಿಗೆ ಸ್ಪರ್ಧೆಯನ್ನು ನೋಡಲು ಸಮಸ್ಯೆಯಾಗದಂತೆ ಸ್ಕ್ರೀನ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮಧ್ಯರಾತ್ರಿವರೆಗೂ ನಡೆದ ಪಿಲಿಪರ್ಬವನ್ನು ಜನರು ತದೇಕಚಿತ್ತದಿಂದ ನೋಡಿದ್ದು ತುಳುನಾಡಿಗರಿಗೆ ಹುಲಿವೇಷದ ಮೇಲಿನ ಕ್ರೇಜ್‌ನ್ನು ನಿರೂಪಿಸಿತು.