Last Updated:
ದಕ್ಷಿಣ ಕನ್ನಡ ಸುಳ್ಯದ ಸ್ನೇಹ ಶಾಲೆಯಲ್ಲಿ 30 ವರ್ಷಗಳಿಂದ ಚಂದ್ರಾಕಾರದ ತರಗತಿ ವ್ಯವಸ್ಥೆ. 1996ರಲ್ಲಿ ಚಂದ್ರಶೇಖರ ದಾಮ್ಲೆ ಪ್ರಾರಂಭಿಸಿದ ಈ ಶಾಲೆಯಲ್ಲಿ ಹಿಂದಿನ ಬೆಂಚ್ ಇಲ್ಲ, 20 ಅಡಿ ವ್ಯಾಸದ ಕೊಠಡಿಯಲ್ಲಿ 30 ಮಕ್ಕಳು.
ದಕ್ಷಿಣ ಕನ್ನಡ : ಕೇರಳ ರಾಜ್ಯದಲ್ಲಿ (Kerala) ಶಾಲೆಯ ತರಗತಿಗಳಲ್ಲಿ ಕೊನೆಯ ಬೆಂಚ್ (Last Bench) ಅನ್ನೋದೇ ಇಲ್ಲ ಎನ್ನುವ ಸುದ್ದಿ ಎಲ್ಲೆಡೆ ಚರ್ಚೆಯಲ್ಲಿದೆ. ಈ ಮೂಲಕ ಕೇರಳ ರಾಜ್ಯದ ಶಿಕ್ಷಣ ಇಲಾಖೆ ತರಗತಿಯಲ್ಲಿ ವಿಶೇಷ ಪ್ರಯೋಗ ಮಾಡೋ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ (Learning) ಸಹಕಾರಿಯಾದ ವಾತಾವರಣವನ್ನು ನಿರ್ಮಿಸಿದೆ ಎನ್ನುವ ಚರ್ಚೆಗಳೂ ನಡೆಯುತ್ತಿವೆ. ಆದರೆ ಕೇರಳ ರಾಜ್ಯದ ಶಾಲೆಗಳಲ್ಲಿ ಈ ರೀತಿಯ ತರಗತಿ ಆರಂಭವಾಗುವ ಸರಿ ಸುಮಾರು 30 ವರ್ಷಗಳ ಮುಂಚೆಯೇ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ (Sulya) ಖಾಸಗಿ ಶಾಲೆಯೊಂದು ಈ ರೀತಿಯ ತರಗತಿ ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದೆ!
ಹೌದು, ಇದು ದಕ್ಷಿಣಕನ್ನಡ ಸುಳ್ಯದ ಸ್ನೇಹ ಶಾಲೆಯಲ್ಲಿ ಈ ವ್ಯವಸ್ಥೆ ಕಳೆದ ಸರಿ ಸುಮಾರು ಮೂವತ್ತು ವರ್ಷಗಳ ಹಿಂದೆ ಇದೆ. ಚಂದ್ರಶೇಖರ ದಾಮ್ಲೆ ಎನ್ನುವವರ ಮುತುವರ್ಜಿಯಲ್ಲಿ ಈ ಶಾಲೆ 1996 ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಈ ಶಾಲೆಯಲ್ಲಿನ ಯಾವುದೇ ತರಗತಿಯಲ್ಲೂ ಹಿಂದಿನ ಬೆಂಚ್ ಅನ್ನೋದೇ ಇಲ್ಲ. ಎಲ್ಲಾ ಮಕ್ಕಳನ್ನು ಚಂದ್ರಾಕಾರದಲ್ಲಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 20 ಅಡಿ ವ್ಯಾಸದ ಇಲ್ಲಿನ ಕೊಠಡಿಯಲ್ಲಿ ಕೇವಲ 30 ಮಕ್ಕಳು ಮಾತ್ರ ಕುಳಿತು ಪಾಠ ಕೇಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗಾಗಿ ಮಕ್ಕಳಿಗೆ ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣುವುದಿಲ್ಲ ಎನ್ನುವ ದೂರಿನ ಅವಕಾಶಗಳಲ್ಲೇ ಇಲ್ಲಿಲ್ಲ.
ಶಿಕ್ಷಕರಿಗೆ ಅತ್ಯಂತ ಸಹಕಾರಿಯಾಗಿರುವ ವ್ಯವಸ್ಥೆ
ಶಿಕ್ಷಕಿ ತರಗತಿಯಲ್ಲಿರುವ ಪ್ರತಿಯೊಬ್ಬ ಮಕ್ಕಳ ಮೇಲೆ ಕಂಟ್ರೋಲ್ ಸಾಧಿಸಲು ಹಿಂದೆ,ಮುಂದೆ ಎನ್ನುವ ಯಾವುದೇ ತಾರತಮ್ಯಗಳಿಲ್ಲದೆ ಎಲ್ಲಾ ಮಕ್ಕಳನ್ನು ನೋಡಿ ಪಾಠ ಮಾಡುವಂತಹ ವ್ಯವಸ್ಥೆ ಇಲ್ಲಿದೆ. ಶಿಕ್ಷಕ-ಶಿಕ್ಷಕಿಯರು ಎಲ್ಲಾ ಮಕ್ಕಳ ಬಳಿಗೆ ಹೋಗಿ ಪರಿಶೀಲನೆ ನಡೆಸುವಂತ ವ್ಯವಸ್ಥೆಯೂ ಇದೆ. ಕರ್ನಾಟಕ ಶಾಲಾ ಶಿಲ್ಷಣ ಇಲಾಖೆಯು 1990 ರ ಕೊನೆಗೆ ಚೈತನ್ಯ ಎನ್ನುವ ಹೆಸರಿನಲ್ಲಿ ವೃತ್ತಾಕಾರದ ತರಗತಿಯನ್ನು ಅನುಮೋದಿಸಿತ್ತು. ಇದೇ ವಿಚಾರದಲ್ಲಿ 1990 ರಲ್ಲಿ ಸುಳ್ಯದ ಇದೇ ಸ್ನೇಹ ಶಾಲೆಯಲ್ಲಿ ಈ ಕುರಿತು ಶಿಕ್ಷಕರಿಗಾಗಿ ಒಂದು ವಾರದ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.
ಸ್ನೇಹ ಶಾಲೆಯಲ್ಲಿ ಇಂತಹ ಮೂರು ತರಗತಿ ಕೊಠಡಿಗಳಿದ್ದು, ಒಂದರಿಂದ ಮೂರರವರೆಗಿನ ಎಲ್ಲಾ ತರಗತಿಗಳನ್ಮು ಇಲ್ಲೇ ಮಾಡಲಾಗುತ್ತಿದೆ ಎಂದು ಸ್ನೇಹ ಶಾಲೆಯ ಸಂಚಾಲಕ ಚಂದ್ರಶೇಖರ್ ದಾಮ್ಲೆ ತಿಳಿಸಿದ್ದಾರೆ.
Dakshina Kannada,Karnataka
July 21, 2025 9:46 PM IST