Last Updated:
ದಕ್ಷಿಣ ಕನ್ನಡ: ಮುಂಗಾರು ಮಳೆ ಆರಂಭವಾದಾಗ ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಮೇ ಫ್ಲವರ್ ಮರಗಳು ಕೆಂಪು ಹೂಗಳಿಂದ ಕಂಗೊಳಿಸುತ್ತವೆ, ಇದು ನೋಡುಗರ ಆಕರ್ಷಣೆಯ ಕೇಂದ್ರಬಿಂದು.
ದಕ್ಷಿಣ ಕನ್ನಡ: ಮುಂಗಾರು ಮಳೆ(Monsoon Rains) ಆಗಮಿಸಿದಂತೆ ಪ್ರಕೃತಿಯೂ(Nature) ತನ್ನ ಸೌಂದರ್ಯವನ್ನು(Beauty) ದುಪ್ಪಟ್ಟುಗೊಳಿಸುತ್ತದೆ. ಈ ಹಸಿರಿನ ಪ್ರಕೃತಿಯ ಸೌಂದರ್ಯವನ್ನು ಇನ್ನಷ್ಟು ಮೆರಗುಗೊಳಿಸಲೆಂದೇ ಗಿಡ-ಮರಗಳಲ್ಲಿ(Trees) ಬಣ್ಣ-ಬಣ್ಣದ ಹೂವುಗಳೂ(Colourful Flowers) ಅರಳುತ್ತವೆ. ಕೆಂಪು, ಗುಲಾಬಿ, ಬಿಳಿ, ನೀಲಿ, ನೇರಳೆ, ಹಳದಿ, ಕಿತ್ತಳೆ ಹೀಗೆ ಎಲ್ಲಾ ಬಣ್ಣಗಳ ಸಂಗಮವಾಗಿ ಪ್ರಕೃತಿ ನವ ವಧುವಿನಂತೆ ನಳ ನಳಿಸುತ್ತದೆ.
ಮಳೆಗಾಲ ಆಗಮಿಸುವುದಕ್ಕೆ ಮೊದಲೇ ಎಲ್ಲೆಂದರಲ್ಲಿ ಕಂಡು ಬರುವ ಹೂಗಳಲ್ಲಿ ಮೇ ಫ್ಲವರ್ ಕೂಡಾ ಒಂದು. ಬೃಹತ್ ಗಾತ್ರದ ಮರದ ತುಂಬೆಲ್ಲಾ ಕಿತ್ತಾಳೆ-ಕೆಂಪು ಬಣ್ಣದಿಂದ ಶೃಂಗಾರಗೊಳ್ಳುವ ಈ ಹೂಗಳು ನೋಡುಗರ ಆಕರ್ಷಣೆಯ ಕೇಂದ್ರಬಿಂದು ಕೂಡಾ ಆಗಿದೆ. ಯಾವ ಕಡೆಗಳಲ್ಲಿ ಈ ಮೇ ಫ್ಲವರ್ ಮರವಿದೆಯೋ, ಆ ಮರವಿರುವ ಪ್ರದೇಶವೆಲ್ಲಾ ಕೆಂಪು ಹಾಸಿದ ನೆಲದಂತೆ ಕಂಗೊಳಿಸುತ್ತದೆ. ನೀಲಿ ಆಗಸದ ಎತ್ತರಕ್ಕೆ ಬೆಳೆದು ನಿಲ್ಲುವ ಈ ಹೂವಿನ ಮರ ಎಲ್ಲರ ಮನವನ್ನು ಮುದಗೊಳಿಸುತ್ತದೆ.
ಫ್ಯಾಬೇಸಿಯೇ (Fabeceae) ಮರದ ವಂಶಕ್ಕೆ ಸೇರಿದ ಈ ಮರ ಮೇ ತಿಂಗಳಿನಲ್ಲಿ ತುಂಬಾ ಹೂವುಗಳನ್ನು ಹೊದ್ದುಕೊಂಡು ಜನಾಕರ್ಷಣೆಯಾಗಿ ಬದಲಾಗುತ್ತದೆ. ಮೇ ತಿಂಗಳಿನಲ್ಲೇ ಹೆಚ್ಚು ಕಂಡು ಬರುವ ಈ ಹೂವಿನಿಂದಾಗಿಯೇ ಈ ಹೂವಿಗೆ ಮೇ ಫ್ಲವರ್ ಎಂದೇ ಹೆಸರಿಸಲಾಗಿದ್ದರೂ, ಏಪ್ರಿಲ್ ತಿಂಗಳಿನಿಂದಲೇ ಈ ಮರಗಳು ಹೂ ಬಿಡಲು ಆರಂಭಿಸುತ್ತದೆ.
ಹೆಚ್ಚಾಗಿ ಅರಣ್ಯ ಇಲಾಖೆ ಈ ಮರಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟು ಪೋಷಿಸುತ್ತಿದ್ದು, ಈ ಮರಗಳಿರುವ ಕಡೆ ಮೇ ತಿಂಗಳಿನಲ್ಲಿ ಹೂವುಗಳ ರಾಶಿಯೇ ಕಂಡು ಬರುತ್ತದೆ. ಈ ಮರಗಳು ಯಾವುದೇ ಇತರ ಬಳಕೆಗೆ ಅಗತ್ಯವಿಲ್ಲದಿದ್ದರೂ, ತನ್ನ ಆಕರ್ಷಕ ಹೂವಿನಿಂದಾಗಿ ಅರಣ್ಯ ಇಲಾಖೆ ಈ ಗಿಡಗಳು ಹೆಚ್ಚು ಹೆಚ್ಚಾಗಿ ರಸ್ತೆ ಪಕ್ಕದಲ್ಲಿ ನೆಡುತ್ತಿದ್ದು, ಆಕರ್ಷಣೆಯ ಜೊತೆಗೆ ಈ ಮರಗಳು ಹೆಚ್ಚಿನ ನೆರಳನ್ನೂ ಕೊಡುತ್ತದೆ.
Dakshina Kannada,Karnataka
May 27, 2025 11:55 AM IST