ಐಪಿಎಲ್ 2025 ಆವೃತ್ತಿಯ ಭಾಗವಾಗಿ ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ನ್ನು ತಂಡವನ್ನು ಸೋಲಿಸಿತು. ವಿಶೇಷ ಎಂದರೆ ಬರೋಬ್ಬರಿ 10 ವರ್ಷಗಳ ನಂತರ ಆರ್‌ಸಿಬಿ ಮುಂಬೈನ ವಾಂಖಡೆ ಅಂಗಳದಲ್ಲೇ ಜಯ ಸಾಧಿಸಿತು.
ಪಿಚ್ ಬ್ಯಾಟರ್ ಗಳಿಗೆ ಸಾಥ್ ನೀಡಿತ್ತು
ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ, ಎರಡು ದೊಡ್ಡ ಹೊಡೆತಗಳ ಅಂತರದಲ್ಲಿ ಗೆಲುವು ಕೈ ತಪ್ಪಿದೆ. ಈ ಪಂದ್ಯದಲ್ಲಿ ರನ್‌ಗಳ ಸುರಿಮಳೆಯೇ ಆಯಿತು. ವಿಕೆಟ್ ಬ್ಯಾಟಿಂಗ್‌ಗೆ ಸೂಕ್ತವಾಗಿತ್ತು. ಎರಡು ಶಾಟ್‌ಗಳ ಅಂತರದಲ್ಲಿ ಗೆಲುವು ಕೈ ತಪ್ಪಿತು. ಇದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಈ ವಿಕೆಟ್ ಬ್ಯಾಟರ್‌ಗಳಿಗೆ ಅನುಕೂಲಕರವಾಗಿತ್ತು. ಬೌಲರ್‌ಗಳಿಗೆ ರನ್‌ಗಳನ್ನು ತಡೆಯುವುದು ಕಷ್ಟವಾಯಿತು. ಆದರೆ ನಮ್ಮ ಬೌಲರ್‌ಗಳು ಬ್ಯಾಟರ್‌ಗಳನ್ನು ಸ್ವಲ್ಪ ಮಟ್ಟಿಗೆ ಕಟ್ಟಿಹಾಕಬೇಕಿತ್ತು, ಆದರೆ ಈ ಪಿಚ್ ಬೌಲರ್‌ಗಳಿಗೆ ಕಠಿಣವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರೋಹಿತ್ ಶರ್ಮಾ ಕಮ್ ಬ್ಯಾಕ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಕಳೆದ ಪಂದ್ಯದಲ್ಲಿ ನಂಬರ್ 3ರಲ್ಲಿ ಆಡಿದ್ದ ನಮನ್ ಧೀರ್‌ನನ್ನು ಈ ಪಂದ್ಯದಲ್ಲಿ ಕೆಳಗಿನ ಕ್ರಮಾಂಕದಲ್ಲಿ ಆಡಿಸಲಾಯಿತು. ಏಕೆಂದರೆ ನಮನ್ ಯಾವಾಗಲೂ ಕೆಳ ಕ್ರಮಾಂಕದಲ್ಲಿ ಆಡುತ್ತಾರೆ. ಕಳೆದ ಪಂದ್ಯದಲ್ಲಿ ರೋಹಿತ್ ಇರಲಿಲ್ಲ, ಹೀಗಾಗಿ ನಮನ್ ಗೆ ಮೇಲಿನ ಕ್ರಮಾಂಕಕ್ಕೆ ಪ್ರಮೋಷನ್ ಸಿಕ್ಕಿತ್ತು. ವಿಶೇಷ ಎಂದರೆ, ನಮನ್ ಎರಡು ಕ್ರಮಾಂಕದಲ್ಲೂ ಬ್ಯಾಟ್ ಬೀಸುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: RCB vs MI: W,W,W, ಒಂದೇ ಓವರ್‌ನಲ್ಲಿ ಪಂದ್ಯದ ಗತಿ ಬದಲಿಸಿದ್ದು ಆ ಆಲ್ರೌಂಡರ್!
ತಿಲಕ್ ವರ್ಮ ಬಗ್ಗೆ ಕ್ಯಾಪ್ಟನ್ ಕ್ಲಾರಿಟಿ
ಇನ್ನು, ತಿಲಕ್ ವರ್ಮ ಬ್ಯಾಟಿಂಗ್ ಕುರಿತು ಮೆಚ್ಚುಗೆ ಸೂಚಿಸಿದ ಪಾಂಡ್ಯ, ಕಳೆದ ಮ್ಯಾಚ್ ನಲ್ಲಿ ಕೆಲ ಘಟನೆಗಳು ನಡೆದಿದ್ದವು. ಆದರೆ ಜನರು ಅದನ್ನು ತಪ್ಪು ತಿಳಿದುಕೊಂಡರು. ಆದರೆ ಪಂದ್ಯಕ್ಕೂ ಮುನ್ನ ತಿಲಕ್ ತಲೆಗೆ ಗಾಯವಾಗಿತ್ತು. ಅಲ್ಲದೇ, ತಿಲಕ್ ರನ್ನು ಹೊರಗೆ ಕಳುಹಿಸುವುದು ತಂತ್ರಗಾರಿಕೆಯ ಒಂದು ಭಾಗವೂ ಆಗಿತ್ತು. ಏಕೆಂದರೆ ಆತನ ತಲೆಗೆ ಗಾಯವಾಗಿದ್ದ ಕಾರಣ ನಮ್ಮ ಕೋಚ್ ಹೊಸ ಬ್ಯಾಟರ್‌ನನ್ನು ಕಳುಹಿಸುವುದು ಉತ್ತಮ ಎಂದು ಭಾವಿಸಿದ್ದರು. ಇತ್ತೀಚಿನ ಪಂದ್ಯದಲ್ಲಿ ತಿಲಕ್ ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು.
ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಪವರ್ ಪ್ಲೇನಲ್ಲಿ ಉತ್ತಮವಾಗಿ ಆಡುವುದು ಬಹಳ ಮುಖ್ಯ. ಆದರೆ ಆರಂಭಿಕ ಓವರ್ ಗಳಲ್ಲಿ ನಾವು ಚೆಂಡನ್ನು ಸರಿಯಾಗಿ ಮಿಡಿಲ್ ಮಾಡಲಾಗಲಿಲ್ಲ. ಅದು ನಮ್ಮ ಸೋಲಿಗೆ ಕಾರಣವಾಯಿತು. ಡೆತ್ ಓವರ್‌ಗಳಲ್ಲೂ ಕೆಲವು ಚೆಂಡುಗಳನ್ನು ಬಿಟ್ಟುಕೊಟ್ಟೆವು ಎಂದು ಬ್ಯಾಟಿಂಗ್ ಬಗ್ಗೆ ಬೇಸರ ಹೊರ ಹಾಕಿದರು.
ಇದನ್ನೂ ಓದಿ: RCB vs MI: ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ ಹೊಸ ಮೈಲುಗಲ್ಲು
ನಮಗೆ ಫಲಿತಾಂಶ ಮುಖ್ಯವಾಗಿರುತ್ತದೆ. ಆದರೆ ಬುಮ್ರಾ ಇರುವ ತಂಡ ವಿಶೇಷ ಟೀಂ ಆಗಿರುತ್ತದೆ. ಬುಮ್ರಾ ಕೂಡ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರು ನಮ್ಮ ತಂಡದಲ್ಲಿ ಇರೋದೆ ಸಂತಸ, ಎಲ್ಲಾ ಆಟಗಾರರಿಗೂ ಬೆಂಬಲವಾಗಿ ನಿಲ್ಲಬೇಕಿದೆ. ಮುಂದಿನ ಪಂದ್ಯಗಳಲ್ಲಿ ಫಲಿತಾಂಶ ನಮ್ಮ ಪರವಾಗಿರುತ್ತದೆ ಎಂದು ಆಶಯ ಹೊಂದಿರುತ್ತೇವೆ ಎಂದು ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಸಂಕ್ಷೀಪ್ತ ಮಾಹಿತಿ ಇಲ್ಲಿದೆ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 221 ರನ್‌ಗಳ ಭಾರೀ ಮೊತ್ತ ಗಳಿಸಿತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್‌ಗಳೊಂದಿಗೆ 67 ರನ್ ಗಳಿಸಿದರೆ, ನಾಯಕ ರಜತ್ ಪಾಟೀದಾರ್ 32 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿದರು.
ಬೃಹತ್ ಮೊತ್ತ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ, 20 ಓವರ್‌ಗಳಲ್ಲಿ 9 ವಿಕೆಟ್‌ಗೆ 209 ರನ್ ಗಳಿಸಲಷ್ಟೇ ಶಕ್ತವಾಯ್ತು. ತಿಲಕ್ ವರ್ಮ 29 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್‌ಗಳೊಂದಿಗೆ 56 ಗಳಿಸಿದರೆ, ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 3 ಫೋರ್, 4 ಸಿಕ್ಸರ್‌ಗಳೊಂದಿಗೆ 42 ರನ್ ಗಳಿಸಿ ಸ್ಪೋಟಕ ಪ್ರದರ್ಶನ ನೀಡಿದರು. ಆದರೂ ತಂಡ ಸೋಲಿನ ಕಂಡಿದೆ.
Bangalore [Bangalore],Bangalore,Karnataka
April 08, 2025 8:47 AM IST