ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ತಂಡ, ವಿರಾಟ್ ಕೊಹ್ಲಿ ಹಾಗೂ ಪಾಟಿದಾರ್ ಹಾಗೂ ಜಿತೇಶ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೃಹತ್ ಸ್ಕೋರ್ ಕಲೆ ಹಾಕಿತ್ತು. ಪಂದ್ಯದಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಗಳ ನೆರವಿನಿಂದ 67 ರನ್ ಗಳಿಸಿದರೆ. ರಜತ್ ಪಾಟೀದಾರ್ 32 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಿಡಿಸಿ 64 ರನ್, ಜಿತೇಶ್ ಶರ್ಮಾ ಕೇವಲ 19 ಎಸೆತಗಳಲ್ಲಿ ಎರಡು ಬೌಂಡರಿ, 4 ಸಿಕ್ಸರ್ ಸಿಡಿಸಿ ಅಜೇಯ 40 ರನ್ ಗಳಿಸಿ ಮಿಂಚಿದರು. ಇವರ ಭರ್ಜರಿ ಬ್ಯಾಟಿಂಗ್‌ನಿಂದ ರಾಯಲ್ ಚಾಲೆಂಜರ್ಸ್ ತಂಡ 5 ವಿಕೆಟ್ ಕಳೆದುಕೊಂಡು 221 ರನ್‌ಗಳ ಭಾರೀ ಮೊತ್ತ ಗಳಿಸಿತು.
ಬೃಹತ್ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್‌ಗೆ ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ ಹೋರಾಟದ ಬಳಿಕವೂ ರೋಚಕ ಸೋಲುಂಡು ನಿರಾಸೆ ಅನುಭವಿಸಿತು. ತಿಲಕ್ ವರ್ಮ 4 ಬೌಂಡರಿ, 4 ಸಿಕ್ಸರ್ ಗಳೊಂದಿಗೆ ಕೇವಲ 29 ಎಸೆತಗಳಲ್ಲಿ 56 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಕೇವಲ 15 ಎಸೆತಗಳಲ್ಲಿ 3 ಬೌಂಡರಿ, 4 ಬಾರಿ ಸಿಕ್ಸರ್ ಸಿಡಿಸಿ 42 ರನ್ ಗಳಿಸಿ ಔಟಾದರು. ಇದರೊಂದಿಗೆ ಮುಂಬೈ ಸೋಲು ಖಚಿತವಾಗಿತ್ತು.
ಆರ್‌ಸಿಬಿ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಬೌಲರ್ ಗಳಾದ ಕೃನಾಲ್ ಪಾಂಡ್ಯ (4/45), ಜೋಶ್ ಹ್ಯಾಝಲ್‌ವುಡ್ (2/37) ಮತ್ತು ಯಶ್ ದಯಾಳ್ (2/46) ಉತ್ತಮ ಪ್ರದರ್ಶನ ತೋರಿದರು. ವಿಶೇಷವಾಗಿ ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಮೂರು ವಿಕೆಟ್ ಉರುಳಿಸಿ ಮುಂಬೈನಿಂದ ಗೆಲುವನ್ನು ಕಸಿದುಕೊಂಡರು. ಕೊನೆಯ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿದ್ದಾಗ, ಕೃನಾಲ್ ಕೇವಲ 6 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ: RCB vs MI: W,W,W, ಒಂದೇ ಓವರ್‌ನಲ್ಲಿ ಪಂದ್ಯದ ಗತಿ ಬದಲಿಸಿದ್ದು ಆ ಆಲ್ರೌಂಡರ್!
ಪಂದ್ಯದ ಬಳಿಕ ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ಸ್ವೀಕರಿಸಿ ಮಾತನಾಡಿದ, ಆರ್‌ಸಿಬಿ ನಾಯಕ ರಜತ್ ಪಾಟಿದಾರ್, ಆರ್‌ಸಿಬಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಪಂದ್ಯ ಅದ್ಭುತವಾಗಿತ್ತು. ನಮ್ಮ ಬೌಲರ್‌ಗಳು ತೋರಿದ ಧೈರ್ಯ ನಿಜಕ್ಕೂ ಪ್ರಶಂಸನೀಯ. ನಿಜ ಹೇಳಬೇಕೆಂದರೆ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನಮ್ಮ ಬೌಲಿಂಗ್ ವಿಭಾಗಕ್ಕೆ ನೀಡಬೇಕು ಎಂದು ಪ್ರಶಸ್ತಿಯನ್ನು ಅರ್ಪಿಸಿದರು.
ಇದನ್ನೂ ಓದಿ: MI vs RCB: ಇವರಿಂದಲೇ ನಮಗೆ ಸೋಲಾಯ್ತು; ರೋಚಕ ಸೋಲಿನ ಬಳಿಕ ಪಾಂಡ್ಯ ಶಾಕಿಂಗ್ ಕಾಮೆಂಟ್
ಕೃನಾಲ್ ಪಾಂಡ್ಯ ಅವರ ಬೌಲಿಂಗ್ ಗೆ ವಿಶೇಷ ಪ್ರಶಂಸೆ ನೀಡಿದ ಪಾಟಿದಾರ್, ವಾಂಖೆಡೆಯಲ್ಲಿ ಬ್ಯಾಟಿಂಗ್ ತಂಡವನ್ನು ಕಟ್ಟಿ ಹಾಕುವುದು ಬೌಲರ್ ಗಳಿಗೆ ಅಷ್ಟು ಸುಲಭವಲ್ಲ. ಆದರೆ ನಮ್ಮ ಬೌಲರ್ ಗಳು ನಮ್ಮ ಪ್ಲ್ಯಾನ್ ಅನ್ನು ಅದ್ಭುತವಾಗಿ ಜಾರಿಗೊಳಿಸಿದರು. ಅದರಲ್ಲೂ ಕೃನಾಲ್ ಕೊನೆಯ ಓವರ್ ನಲ್ಲಿ ತೋರಿದ ಧೈರ್ಯ ಹಾಗೂ ಬೌಲಿಂಗ್ ಎರಡು ಅಸಾಧಾರಣ. ಪಂದ್ಯವನ್ನು ಕೊನೆಯ ವರೆಗೂ ನಮ್ಮ ಪರವೇ ಕೊಂಡೊಯ್ಯಬೇಕೆಂಬ ಪ್ಲ್ಯಾನ್ ನೊಂದಿಗೆ ಕೃನಾಲ್ ಅವರಿಗೆ ಕೊನೆಯ ಓವರ್ ನೀಡಿದ್ದಾಗಿ ತಂಡದ ಗೇಮ್ ಪ್ಲ್ಯಾನ್ ಅನ್ನು ರಜತ್ ರಿವೀಲ್ ಮಾಡಿದರು. ಇದೇ ವೇಳೆ ಸ್ಪಿನ್ನರ್ ಸುಯಾಶ್ ಶರ್ಮಾ ಬೌಲಿಂಗ್ ಬಗ್ಗೆ ಕ್ಯಾಪ್ಟನ್ ವಿಶೇಷ ಮೆಚ್ಚುಗೆ ನೀಡಿದರು.
Bangalore [Bangalore],Bangalore,Karnataka
April 08, 2025 9:44 AM IST