Last Updated:
ಮಂಗಳೂರು-ಸುಬ್ರಹ್ಮಣ್ಯ ರಸ್ತೆಯ ಹೊಂಡ-ಗುಂಡಿಗಳ ವಿರುದ್ಧ ಸಾರ್ವಜನಿಕರು ರಸ್ತೆ ಮಧ್ಯೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರು- ಸುಬ್ರಹ್ಮಣ್ಯ (Subramanya) ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲೊಂದು ಕೌತುಕದ ವಿದ್ಯಮಾನ ನಡೆದಿದೆ. ರಾತ್ರಿ ಬೆಳಗಾಗುವುದರೊಳಗೆ ರಸ್ತೆಯ (Road) ಮಧ್ಯೆ ಬಾಳೆಗಿಡವೊಂದು ಬೆಳೆದು ನಿಂತಿರುವುದು ರಸ್ತೆ ಪ್ರಯಾಣಿಕರ ಕುತೂಹಲಕ್ಕೆ ಕಾರಣವಾಗಿದೆ. ಅಂದಹಾಗೆ ಈ ಬಾಳೆಗಿಡ (Banana) ತನ್ನಷ್ಟಕ್ಕೆ ತಾನೇ ಬೆಳೆದಿರುವುದಲ್ಲ. ರಸ್ತೆಯ ತುಂಬಾ ಹೊಂಡ-ಗುಂಡಿಗಳನ್ನು (Pot) ಕಂಡು ಬೇಸತ್ತ ಸಾರ್ವಜನಿಕರು ರಸ್ತೆ ಮಧ್ಯೆ ಈ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಪರಿಯಿದು.
ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿಯಿಂದ ಸಂಪರ್ಕ ಕಲ್ಪಿಸುವ ಈ ರಸ್ತೆ ಬಹುತೇಕ ಕೆಟ್ಟು ಹೋಗಿದೆ. ಅದರಲ್ಲೂ ಪೆರಿಯಡ್ಕ ಮತ್ತು ಆಸುಪಾಸಿನ ಭಾಗದಲ್ಲಿ ರಸ್ತೆ ತುಂಬಾ ಹೊಂಡಗಳೇ ತುಂಬಿ ತುಳುಕುತ್ತಿವೆ. ಈ ಹೊಂಡ-ಗುಂಡಿಗಳು ಎಷ್ಟು ಅಪಾಯಕಾರಿಯಾಗಿತ್ತೆಂದರೆ ದಿನಂಪ್ರತಿ ಲೆಕ್ಕವಿಲ್ಲದಷ್ಟು ದ್ವಿಚಕ್ರ ವಾಹನ ಸವಾರರು ಈ ಗುಂಡಿಗಳಿಂದಾಗಿ ಬಿದ್ದು ಗಾಯಗೊಂಡಿದ್ದಾರೆ.
ಕೈ-ಕಾಲು, ಸೊಂಟ ಮುರಿಸಿಕೊಂಡಿದ್ದಾರೆ. ದೂರಕ್ಕೆ ಈ ಹೊಂಡಗಳಿರುವ ಜಾಗ ಅತ್ಯಂತ ಸಮತಟ್ಟಾಗಿ ಕಾಣುತ್ತಿದ್ದರೂ, ಹೊಂಡಕ್ಕೆ ಬಿದ್ದ ಬಳಿಕವೇ ಇಲ್ಲಿ ಹೊಂಡವಿತ್ತು ಎನ್ನುವುದು ವಾಹನ ಸವಾರರ ಗಮನಕ್ಕೆ ಬಂದಿರುವ ಹಲವು ಘಟನೆಗಳ ಉದಾಹರಣೆಗಳು ಇಲ್ಲಿವೆ. ಹೊಂಡಕ್ಕೆ ಡಾಂಬರು ಹಾಕಿ ಮುಚ್ಚುವ ಬದಲು ಕನಿಷ್ಟ ಪಕ್ಷ ಕಲ್ಲುಗಳನ್ನು ಹಾಕಿಯಾದರೂ ಹೊಂಡಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸ್ಥಳೀಯರು ಈ ರೀತಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇಲ್ಲಿ ತೆಂಗಿನ ಸಸಿಯನ್ನೂ ನೆಡುವಷ್ಟು ಆಳ ಗುಂಡಿಗಳಿವೆ
ಕೆಲವು ಕಡೆಗಳಲ್ಲಿ ಬಾಳೆಗಿಡ ಮಾತ್ರವಲ್ಲ, ತೆಂಗಿನ ಸಸಿಗಳನ್ನೂ ನೆಡುವಷ್ಟು ಆಳದ ಗುಂಡಿಗಳಿವೆ ಎನ್ನುವ ಸಾರ್ವಜನಿಕರು, ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಇನ್ನಾದರೂ ತಮ್ಮ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದೇ ಹೋದಲ್ಲಿ ಉಳಿದ ಹೊಂಡಗಳಲ್ಲಿ ತೆಂಗಿನ ಸಸಿಗಳನ್ನೂ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದೂ ಎಚ್ಚರಿಸಿದ್ದಾರೆ.
Dakshina Kannada,Karnataka
November 01, 2025 10:21 AM IST