MLC 2025: 6,6,6,2,2,6 ಒಂದೇ ಓವರ್​​ನಲ್ಲಿ 28 ರನ್​! MLC ಲೀಗ್​​ನಲ್ಲಿ ಸಿಎಸ್​ಕೆ ಒಡೆತನದ ಟಿಎಸ್​ಕೆ ತಂಡದ ಆಟಗಾರನಿಂದ ವಿಧ್ವಂಸ| Donovan Ferreira’s Blitz Four Consecutive Sixes Power Texas Super Kings

MLC 2025: 6,6,6,2,2,6 ಒಂದೇ ಓವರ್​​ನಲ್ಲಿ 28 ರನ್​! MLC ಲೀಗ್​​ನಲ್ಲಿ ಸಿಎಸ್​ಕೆ ಒಡೆತನದ ಟಿಎಸ್​ಕೆ ತಂಡದ ಆಟಗಾರನಿಂದ ವಿಧ್ವಂಸ| Donovan Ferreira’s Blitz Four Consecutive Sixes Power Texas Super Kings

ಮಳೆಯಿಂದಾಗಿ 5 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟೆಕ್ಸಾಸ್ ಸೂಪರ್ ಕಿಂಗ್ಸ್ 5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 87 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ 5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ ಕೇವಲ 44 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು. ಈ ಪಂದ್ಯದಲ್ಲಿ ಟೆಕ್ಸಾಸ್‌ನ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಶಿಸ್ತಿನ ಬೌಲಿಂಗ್ ಅವರ ಗೆಲುವಿನ ಕೀಲಿಯಾಯಿತು.

ಟೆಕ್ಸಾಸ್ ಸೂಪರ್ ಕಿಂಗ್ಸ್‌ನ ಬ್ಯಾಟಿಂಗ್

ಟೆಕ್ಸಾಸ್ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರರಾದ ಮಾರ್ಕಸ್ ಸ್ಟೊಯಿನಿಸ್ (2 ರನ್) ಮತ್ತು ಡಾರಿಲ್ ಮಿಚೆಲ್ (6 ರನ್, ರಿಟೈರ್ಡ್ ಹರ್ಟ್) ಆರಂಭದಲ್ಲಿ ನಿರಾಸೆ ಮೂಡಿಸಿದರು. ಆದರೆ, ಶುಭಂ ರಂಜನೆ ಮತ್ತು ಡೊನೊವನ್ ಫೆರೇರಾ ಈ ನಿರಾಸೆಯನ್ನು ತಮ್ಮ ವಿಧ್ವಂಸಕ ಬ್ಯಾಟಿಂಗ್‌ ಮೂಲಕ ಪರಿವರ್ತಿಸಿದರು. ಶುಭಂ ರಂಜನೆ 14 ಎಸೆತಗಳಲ್ಲಿ ಅಜೇ 39 ರನ್‌ಗಳನ್ನು ಗಳಿಸಿದರೆ, ದಕ್ಷಿಣ ಆಫ್ರಿಕಾದ ಡೊನೊವನ್ ಫೆರೇರಾ ಕೇವಲ 9 ಎಸೆತಗಳಲ್ಲಿ ಅಜೇಯ 37 ರನ್‌ಗಳನ್ನು ಕಲೆಹಾಕಿದರು. ವಿಶೇಷವಾಗಿ, ಕೊನೆಯ ಓವರ್‌ನಲ್ಲಿ ವಾಷಿಂಗ್ಟನ್ ಫ್ರೀಡಂನ ಮಿಚೆಲ್ ಓವನ್ ಎಸೆತದಲ್ಲಿ ಫೆರೇರಾ 4 ಸಿಕ್ಸರ್‌ಗಳು ಮತ್ತು 2 ಡಬಲ್ಸ್‌ನೊಂದಿಗೆ 28 ರನ್‌ಗಳನ್ನು ಗಳಿಸಿದರು. ಈ ಆಕ್ರಮಣಕಾರಿ ಬ್ಯಾಟಿಂಗ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಫೆರೇರಾ ಅವರ ಫಿನಿಶಿಂಗ್ ಕೌಶಲ್ಯವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.

ವಾಷಿಂಗ್ಟನ್ ಫ್ರೀಡಂನ ಕೆಟ್ಟ ಬೌಲಿಂಗ್

ವಾಷಿಂಗ್ಟನ್ ಫ್ರೀಡಂನ ಬೌಲರ್‌ಗಳಿಗೆ ಈ ಪಂದ್ಯದಲ್ಲಿ ಟೆಕ್ಸಾಸ್‌ನ ಬ್ಯಾಟಿಂಗ್ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಮೊದಲ ಮೂರು ಓವರ್‌ಗಳಲ್ಲಿ 34 ರನ್‌ಗಳನ್ನು ನೀಡಿದ್ದ ವಾಷಿಂಗ್ಟನ್, ಕೊನೆಯ ಎರಡು ಓವರ್‌ಗಳಲ್ಲಿ 54 ರನ್‌ಗಳನ್ನು ಬಿಟ್ಟುಕೊಟ್ಟಿತು, ಇದರಲ್ಲಿ ಫೆರೇರಾ ಅವರ ಕೊನೆಯ ಓವರ್‌ನ 28 ರನ್‌ಗಳು ಸೇರಿವೆ. ವಾಷಿಂಗ್ಟನ್‌ನ ಬೌಲರ್‌ಗಳು 2 ವಿಕೆಟ್‌ಗಳನ್ನು ಕಬಳಿಸಿದರೂ, ರನ್‌ರೇಟ್‌ನ್ನು ನಿಯಂತ್ರಿಸಲು ವಿಫಲವಾದರು.

ವಾಷಿಂಗ್ಟನ್ ಫ್ರೀಡಂನ ಬ್ಯಾಟಿಂಗ್

88 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ತಂಡವು ಟೆಕ್ಸಾಸ್‌ನ ಬಿಗಿಯಾದ ಬೌಲಿಂಗ್ ಮತ್ತು ಶಿಸ್ತಿನ ಕ್ಷೇತ್ರರಕ್ಷಣೆಯಿಂದಾಗಿ 5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಕೇವಲ 44 ರನ್‌ಗಳಿಗೆ ಸೀಮಿತವಾಯಿತು. ಗ್ಲೆನ್ ಫಿಲಿಪ್ಸ್ 18 ರನ್‌ಗಳೊಂದಿಗೆ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು. ಆದರೆ, ತಂಡದ ಇತರ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಓವನ್ (7) ಗ್ಲೆನ್ ಮ್ಯಾಕ್ಸ್‌ವೆಲ್ (0), ರಚಿನ್ ರವೀಂದ್ರ(10), ಮತ್ತು ಆಂಡ್ರೀಸ್ ಗೌಸ್ (6) ದೊಡ್ಡ ರನ್‌ಗಳನ್ನು ಗಳಿಸಲು ವಿಫಲರಾದರು. 5 ಓವರ್‌ಗಳ ಒತ್ತಡದ ಚೇಸ್‌ನಲ್ಲಿ ವಾಷಿಂಗ್ಟನ್‌ಗೆ ಆರಂಭಿಕ ವಿಕೆಟ್ ಪತನ ತಂಡಕ್ಕೆ ದೊಡ್ಡ ಆಘಾತವಾಯಿತು.

ಟೆಕ್ಸಾಸ್ ಸೂಪರ್ ಕಿಂಗ್ಸ್‌ನ ಬೌಲಿಂಗ್

ಟೆಕ್ಸಾಸ್ ಸೂಪರ್ ಕಿಂಗ್ಸ್‌ನ ಬೌಲರ್‌ಗಳು ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾದ ವೇಗಿ ನಾಂಡ್ರೆ ಬರ್ಗರ್ ತಮ್ಮ ಮೊದಲ ಓವರ್​ನಲ್ಲೇ 2 ವಿಕೆಟ್‌ಗಳನ್ನು ಕಬಳಿಸಿದರೆ, ಟ್ರಿನಿಡಾಡ್‌ನ ಸ್ಪಿನ್ನರ್ ಅಕಿಲ್ ಹೊಸೇನ್ ಮತ್ತು ಆಫ್ಘನ್ ಸ್ಪಿನ್ನರ್ ನೂರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು. ಈ ಮೂವರು ಬೌಲರ್‌ಗಳು ವಾಷಿಂಗ್ಟನ್‌ನ ಬ್ಯಾಟಿಂಗ್ ಲೈನ್‌ಅಪ್‌ಗೆ ಒತ್ತಡ ಹೇರಿದರು.

ಪ್ಲೇ-ಆಫ್ ಸ್ಥಾನ ಖಚಿತ

ಈ ಪಂದ್ಯದ ಮೊದಲೇ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ವಾಷಿಂಗ್ಟನ್ ಫ್ರೀಡಂ ಎರಡೂ ತಂಡಗಳು MLC 2025ರ ಪ್ಲೇ-ಆಫ್‌ಗೆ ಅರ್ಹತೆ ಗಳಿಸಿದ್ದವು. ಟೆಕ್ಸಾಸ್ ಸೂಪರ್ ಕಿಂಗ್ಸ್ 7 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ ಲೀಗ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ವಾಷಿಂಗ್ಟನ್ ಫ್ರೀಡಂ 6 ಗೆಲುವುಗಳೊಂದಿಗೆ ಟಾಪ್-2ರಲ್ಲಿ ಸ್ಥಾನ ಪಡೆದಿತ್ತು. ಈ ಗೆಲುವಿನೊಂದಿಗೆ ಟೆಕ್ಸಾಸ್ ತಮ್ಮ ಟಾಪ್-2 ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಆದರೆ ವಾಷಿಂಗ್ಟನ್ ಫ್ರೀಡಂಗೆ ಈ ಸೋಲು ಸತತ ಆರು ಗೆಲುವುಗಳ ಗೆಲುವಿನ ಓಟಕ್ಕೆ ತಡೆಯೊಡ್ಡಿತು. MLC 2025ರ ಲೀಗ್ ಹಂತದಲ್ಲಿ ಒಟ್ಟು 30 ಪಂದ್ಯಗಳನ್ನು ಆಡಲಾಗುತ್ತದೆ, ಇದರಲ್ಲಿ ಟಾಪ್-4 ತಂಡಗಳು ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಮೂಲಕ ಫೈನಲ್‌ಗೆ ಸ್ಥಾನ ಗಳಿಸಲಿವೆ.