Model Man: 300 ಕಿಲೋ ಮೀಟರ್‌ ಪಾದಯಾತ್ರೆ, ದಣಿವರಿಯದ ಜಾಗೃತಿ ಕಾರ್ಯ! ಹಸಿರು ನಡಿಗೆ ಎಂಬ ಹೊಸ ಹೆಜ್ಜೆ | Nagaraj Bajal Karwar Mangaluru hiking raises solid waste awareness | ದಕ್ಷಿಣ ಕನ್ನಡ

Model Man: 300 ಕಿಲೋ ಮೀಟರ್‌ ಪಾದಯಾತ್ರೆ, ದಣಿವರಿಯದ ಜಾಗೃತಿ ಕಾರ್ಯ! ಹಸಿರು ನಡಿಗೆ ಎಂಬ ಹೊಸ ಹೆಜ್ಜೆ | Nagaraj Bajal Karwar Mangaluru hiking raises solid waste awareness | ದಕ್ಷಿಣ ಕನ್ನಡ

Last Updated:

ನಾಗರಾಜ್ ಬಜಾಲ್ ಕಾರವಾರದಿಂದ ಮಂಗಳೂರುವರೆಗೆ 300 ಕಿ.ಮೀ. ಪಾದಯಾತ್ರೆ ನಡೆಸಿ ಘನತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸಿದರು. ಚಾರ್ಲಿ ಎಂಬ ಶ್ವಾನ ಅವರ ಜೊತೆ ಸೇರಿತ್ತು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಉಳ್ಳಾಲ ನೇತ್ರಾವತಿ ಸೇತುವೆ (Bridge) ಹಾಗೂ ಅಡ್ಯಾರ್ ಬಳಿ ಫ್ಲಕ್ಸ್‌ ಕಾರ್ಡ್ ಹಿಡಿದು ಏಕಾಂಗಿಯಾಗಿ ನಿಂತು ಜನ ಜಾಗೃತಿ (Awareness) ಮೂಡಿಸಿದ ಪರಿಸರ ಪ್ರೇಮಿ ಹಸಿರು ದಳದ ನಾಗರಾಜ್ ಬಜಾಲ್ ಇದೀಗ ಘನತ್ಯಾಜ್ಯ (Solid Waste) ನಿರ್ವಹಣೆಗೆ ಕಾರವಾರದಿಂದ ಮಂಗಳೂರುವರೆಗೆ ಏಕಾಂಗಿ ಪಾದಯಾತ್ರೆ ಮಾಡಿದ್ದಾರೆ.

ಹಸಿರು ನಡಿಗೆ ಎಂಬ ವಿಶೇಷ ಅಭಿಯಾನ

‘ಹಸಿರು ನಡಿಗೆ ಪ್ರತಿ ಹೆಜ್ಜೆ ಸ್ವಚ್ಛತೆಯೆಡೆಗೆ’ ಎಂಬ ಧೈಯವಾಕ್ಯದೊಂದಿಗೆ ಪರಿಸರ ಪ್ರೇಮಿ ನಾಗರಾಜ್ ಬಜಾಲ್ ಹಸಿರುದಳ ಈ ಕಾಲ್ನಡಿಗೆ ನಡೆಸಿದ್ದಾರೆ. ಅ.27ರಂದು ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಅಲ್ಲಿಂದ ಆರಂಭವಾದ ಅವರ ನಡಿಗೆ ರವಿವಾರ ಮಧ್ಯಾಹ್ನ ಮಂಗಳೂರಿನಲ್ಲಿ ಕೊನೆಯಾಗಿದೆ.

ದಿನವೂ ಬೆಳಿಗ್ಗೆ ಸಾಯಂಕಾಲದವರೆಗೆ ದಣಿವರಿಯದ ಹೋರಾಟ

ಈ ಏಳು ದಿನಗಳಲ್ಲಿ ದಿನವೂ ಬೆಳ್ಳಂಬೆಳಗ್ಗೆ 4ರಿಂದ 11ರವರೆಗೆ ‘ಕಸ ಎಸೆಯದಿರಿ’ ಫ್ಲಕ್ಸ್‌ ಕಾರ್ಡ್ ಹಿಡಿದು ಪಾದಯಾತ್ರೆ ಮಾಡುವ ಇವರು, 11ರಿಂದ ಸಂಜೆ 4ರವರೆಗೆ ಶಾಲೆ, ಕಾಲೇಜು, ಪಂಚಾಯತ್, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡಿ ಕಸ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ, ಮರುಬಳಕೆ, ಪ್ಲಾಸ್ಟಿಕ್ ನಿಷೇಧ ಮತ್ತು ಜನಸಹಭಾಗಿತ್ವದ ಕುರಿತು ಚರ್ಚೆ ನಡೆಸಿದ್ದಾರೆ. ಸಂಜೆ 4ರಿಂದ ತಮ್ಮ ಆ ದಿನದ ಟಾರ್ಗೆಟ್ ರೀಚ್ ಆಗುವವರೆಗೆ ಅಂದರೆ ರಾತ್ರಿ ಸುಮಾರು 10ರವರೆಗೆ ಪಾದಯಾತ್ರೆ ನಡೆಸುತ್ತಾರೆ. ಈ ಸಂದರ್ಭ ಬಸ್‌ಗಳಲ್ಲಿ, ಸಾರ್ವಜನಿಕರನ್ನು ಭೇಟಿ ಮಾಡಿ ಜನಜಾಗೃತಿ ಮೂಡಿಸಿದ್ದಾರೆ.

ಕಾರವಾರದಿಂದ ಮಂಗಳೂರಿನವರೆಗೆ ಪಾದಯಾತ್ರೆ

ಕಾರವಾರದಿಂದ ಮಂಗಳೂರಿನವರೆಗೆ ಸುಮಾರು 300 ಕಿ.ಮೀ. ದೂರ ನಾಗರಾಜ್ ಬಜಾಲ್ ಈ ಪಾದಯಾತ್ರೆ ನಡೆಸಿದ್ದಾರೆ. ಕಾಲ್ನಡಿಗೆ ಸಂದರ್ಭ ಅಂಕೋಲ, ಕುಮ್ಟಾ, ಇಡಗುಂಜಿ, ಭಟ್ಕಳ, ಕೋಟೇಶ್ವರ, ಪಡುಬಿದ್ರೆಗಳಲ್ಲಿ ರಾತ್ರಿ ವಾಸ್ತವ್ಯವಿದ್ದರು. ಈ ಸಂದರ್ಭ ಕೆಲವೊಮ್ಮೆ ಸಂಘಸಂಸ್ಥೆಗಳು ಇವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಕೆಲವೊಮ್ಮೆ ಇವರೇ ಸ್ವಂತ ಖರ್ಚಿನಲ್ಲಿ ಹೊಟೇಲ್‌ನಲ್ಲಿ ವಾಸ್ತವ್ಯವಿದ್ದರು. ಮಂಗಳೂರಿನಲ್ಲಿ ಕುಟುಂಬ, ಸಹೋದ್ಯೋಗಿಗಳು ಜೊತೆಯಾಗಿದ್ದಾರೆ. ಅಲ್ಲಿಂದ ಅನತಿ ದೂರದವರೆಗೆ ಪತ್ನಿ, ಮಕ್ಕಳು, ಸಹೋದ್ಯೋಗಿಗಳೊಂದಿಗೆ ಹೆಜ್ಜೆ ಹಾಕಿದ ನಾಗರಾಜ್ ತಮ್ಮ ಪಾದಯಾತ್ರೆ ಅಂತ್ಯಗೊಳಿಸಿದ್ದಾರೆ.

ನಡುವೆ ಸಿಕ್ಕ ಚಾರ್ಲಿ ಕಥೆ

ಇದನ್ನೂ ಓದಿ: Inspirational Story: ಇವರು ಮಂಗಳೂರಿನ ಮದರ್‌ ತೆರೇಸಾ; 679 ಮಂದಿಗೆ ಹೊಸ ಜೀವನ ಕಟ್ಟಿಕೊಟ್ಟ ದಯಾಮಯಿಗೆ ರಾಜ್ಯದ ಗೌರವ!

ಕುಮಟದಿಂದ ಹೊರಡುವಾಗ ಒಂದು ಹೆಣ್ಣು ಶ್ವಾನವನ್ನು ಏಳೆಂಟು ನಾಯಿಗಳು ಬೊಗಳುತ್ತಾ ಕಚ್ಚಲು ಯತ್ನಿಸುತ್ತಿತ್ತು. ಆ ನಾಯಿಗಳಿಂದ ಅದನ್ನು ರಕ್ಷಿಸಿದೆ. ಅಲ್ಲಿಂದ ಅದು ನನ್ನ ಹಿಂದೆಯೇ ಬರಲಾರಂಭಿಸಿತು. ಪೊಲೀಸ್ ಠಾಣೆ, ಪಂಚಾಯತ್ ಸೇರಿದಂತೆ ಎಲ್ಲೇ ಹೋದರೂ ಅಲ್ಲಿಗೆ ಬಂದು ಕುಳಿತು ನಾನು ಹೊರಟಾಗ ಅದು ಹಿಂಬಾಲಿಸುತ್ತಿತ್ತು. ಇಡಗುಂಜಿವರೆಗೆ ಸುಮಾರು 45 ಕಿ.ಮೀ. ನಡೆದುಕೊಂಡು ಬಂದಿದೆ. ಅದಕ್ಕೆ ‘ಚಾರ್ಲಿ’ ಎಂಬ ಹೆಸರನ್ನೂ ಇಟ್ಟಿದ್ದೆ. ಇಡಗುಂಜಿಯಲ್ಲಿ ರಾತ್ರಿ ಹೊಟೇಲ್‌ನಲ್ಲಿ ವಾಸ್ತವ್ಯವಿದ್ದೆ. ಹೊಟೇಲ್ ಹೊರಗಿದ್ದ ನಾಯಿ ಮರುದಿನ ಬೆಳಗ್ಗೆ ಎದ್ದು ನೋಡುವಾಗ ಇರಲಿಲ್ಲ. ಹುಡುಕಾಡಿದರೂ ಎಲ್ಲೂ ಸಿಗಲಿಲ್ಲ ಎಂದು ನಾಗರಾಜ್ ಬೇಸರ ವ್ಯಕ್ತಪಡಿಸಿದರು.