ಇನ್‌ಫ್ಯಾಕ್ಟ್ ಕೊರೊನಾ ಮತ್ತು ಉಕ್ರೇನ್-ರಷ್ಯಾ ಯುದ್ಧ ಶುರುವಾದ ಸಂದರ್ಭದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸೆಮಿಕಂಡಕ್ಟರ್‌ಗಳು ಪೂರೈಕೆಯಾಗದೇ, ಭಾರತವೂ ಸೇರಿದಂತೆ ಇಡೀ ವಿಶ್ವದ ಕಾರು ಹಾಗೂ ಇತರೇ ಎಲೆಕ್ಟ್ರಿಕ್ ವಸ್ತುಗಳ ಉತ್ಪಾದನೆ ತೀರ ಕುಂಠಿತವಾಗಿತ್ತು. ಇದರ ಪರಿಣಾಮ ಇಡೀ ವಿಶ್ವದ ಉತ್ಪಾದನಾ ರಂಗವೇ ಬಿಲಿಯನ್‌ಗಟ್ಟಲೇ ಡಾಲರ್ ನಷ್ಟ ಅನುಭವಿಸಬೇಕಾಯ್ತು. ಇಂದಿಗೂ ಭಾರತ ಅನಿವಾರ್ಯವಾಗಿ ಅತಿಹೆಚ್ಚು ಇತರೇ ದೇಶಗಳ ಸೆಮಿಕಂಡಕ್ಟರ್‌ಗಳ ಮೇಲೆಯೇ ಅವಲಂಬಿತವಾಗಬೇಕಾಗಿದೆ.
ಭಾರತ ಆರ್ಥಿಕವಾಗಿ ಸದೃಢವಾಗುತ್ತಿದೆ. ಇದರೊಂದಿಗೆ ಭಾರತೀಯರ ಅವಶ್ಯಕತೆಗಳೂ ದ್ವಿಗುಣವಾಗುತ್ತಿವೆ. ಜೊತೆಗೆ, ಉತ್ಪಾದನಾ ವಲಯ ಗರಿಗೆದರಿರೋದು ಚೆರಿ ಆನ್ ದಿ ಕೇಕ್ ಅನ್ನೋ ಹಾಗಿದೆ. ಆದ್ರೆ, ನಿಮಗೆ ಗೊತ್ತಾ, ಬರೀ ಒಂದೇ ವರ್ಷ ಅಂದ್ರೆ 2022-23ರಲ್ಲಿ ನಾವು ಬರೋಬ್ಬರಿ 1.2 ಲಕ್ಷ ಕೋಟಿ ರೂಪಾಯಿಗೂ ಅಧಿಕ (18 ಬಿಲಿಯನ್ ಡಾಲರ್) ಮೊತ್ತದ ಸೆಮಿ ಕಂಡಕ್ಟರ್‌ಗಳನ್ನು ಆಮದು ಮಾಡಿಕೊಂಡಿದ್ದೇವೆ. ಇದು ನಮ್ಮ ಒಟ್ಟಾರೆ ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಶೇ. 40ರಷ್ಟು ಭಾಗವಾಗಿದೆ. ಮಿನಿಸ್ಟರ್ ಆಫ್ ಸ್ಟೇಟ್ ಫಾರ್ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ಜಿತಿನ್ ಪ್ರಸಾದ್, ಸಂಸತ್ತಿಗೆ ಕಳೆದ ಬಾರಿ ಕೊಟ್ಟ ಮಾಹಿತಿಯನ್ನು ಆಧರಿಸಿ ನೋಡೋದಾದ್ರೆ 2023-24ರ ಸಾಲಿನಲ್ಲಿ ಭಾರತದ ಸೆಮಿಕಂಡಕ್ಟರ್ ಆಮದು ಶೇ.18.5ಕ್ಕೆ ಏರಿಕೆ ಆಗುವುದರ ಮೂಲಕ ಸುಮಾರು 1.71 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು. ಸದ್ಯದ ಶೇ. 25ರ ಬೆಳವಣಿಗೆಯ ಕಂಪೌಂಡ್ ಆ್ಯನುವಲ್ ಗ್ರೌಥ್ ರೇಟ್ (CAGR) ಹೀಗೆ ಮುಂದುವರೆದರೆ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ 2030ರ ವೇಳೆಗೆ 110 ಬಿಲಿಯನ್ ಡಾಲರ್‌ಗೆ ತಲುಪುವ ಸಾಧ್ಯತೆ ಇದೆ ಎಂಬ ಅಂದಾಜಿದೆ.
140 ಕೋಟಿ ಜನ ಸಂಖ್ಯೆ ಇರುವ ಭಾರತಿಯರಿಗೆ ನಾಚಿಕೆಗೇಡಿನ ಸಂಗತಿ ಅಂದ್ರೆ, ಕೇವಲ 2.3 ಕೋಟಿ ಜನಸಂಖ್ಯೆ ಇರೋ ಪುಟ್ಟ ರಾಷ್ಟ್ರ ತೈವಾನ್, ಇಂದು ವಿಶ್ವದಲ್ಲೇ ಅತಿ ಹೆಚ್ಚು ಸೆಮಿಕಂಡಕ್ಟರ್ ಅನ್ನು ಉತ್ಪಾದಿಸುತ್ತಿದೆ. ಅದ್ರಲ್ಲೂ ತೈವಾನೀಸ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ (TSMC) ಒಂದೇ ಜಗತ್ತಿನ ಶೇ. 50ರಷ್ಟು ಸೆಮಿಕಂಡಕ್ಟರ್ ಸಿದ್ಧ ಮಾಡುತ್ತೆ. ತದನಂತರದ ಸ್ಥಾನದಲ್ಲಿ ದಕ್ಷಿಣ ಕೋರಿಯಾ, ಜಪಾನ್ ಇದ್ದರೆ, ನಂತರದ ಸ್ಥಾನದಲ್ಲಿರೋ ಅಮೆರಿಕವಂತೂ 2021ರಲ್ಲಿಯೇ ಬರೋಬ್ಬರಿ 258 ಬಿಲಿಯನ್ ಡಾಲರ್, ಅಂದ್ರೆ ಸುಮಾರು 2 ಲಕ್ಷ 20 ಸಾವಿರ ಕೋಟಿ ರೂಪಾಯಿಗೂ ಅಧಿಕ ಸೆಮಿಕಂಡಕ್ಟರ್ ಮಾರಾಟ ಮಾಡಿ, ಇಡೀ ವಿಶ್ವದಲ್ಲಿಯೇ ಆರ್ಥಿಕ ದೃಷ್ಟಿಯಿಂದ ಅರ್ಧ ಪಾಲನ್ನ ಈ ಕ್ಷೇತ್ರದಲ್ಲಿ ಪಡೆದುಕೊಂಡಿದೆ. ಇನ್ನು ಸ್ವತಂತ್ರ ರಾಷ್ಟ್ರ ತೈವಾನ್ ತನ್ನದೇ ಎಂದು ಹೇಳಿಕೊಳ್ಳುವ ಚೀನಾ ಕೂಡ, ಸ್ವತಂತ್ರವಾಗಿ ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ.
ಅಷ್ಟೇ ಅಲ್ಲ ಇಸ್ರೇಲ್, ನೆದರ್‌ಲ್ಯಾಂಡ್ಸ್, ಮಲೇಷಿಯಾ, ಯುಕೆ ಹಾಗೂ ಜರ್ಮನಿ ಕೂಡ ಸೆಮಿಕಂಡಕ್ಟರ್ಸ್ ಉತ್ಪಾದನೆ ಮತ್ತು ರಫ್ತಿನಲ್ಲಿ ದಾಪುಗಾಲು ಇಡುತ್ತಿವೆ. ವಿಪರ್ಯಾಸವೆಂದ್ರೆ, ಈ ಸಾಲಿಗೆ ಸೇರಲು ಇಂದಿಗೂ ಭಾರತಕ್ಕೆ ಸಾಧ್ಯವಾಗಿಲ್ಲ. ಇಂದಿಗೂ ಭಾರತದ ಅವಶ್ಯಕತೆಯ ಶೇ. 95ಕ್ಕೂ ಹೆಚ್ಚು ಸೆಮಿಕಂಡಕ್ಟರ್‌ಗಳು ಹೊರಗಿನಂದಲೇ ಬರುತ್ತವೆ. ಅದ್ರಲ್ಲೂ ತೈವಾನ್ ಭಾರತದ ಅತಿ ದೊಡ್ಡ ಆಮದು ಪಾರ್ಟ್ನರ್ ಆಗಿದೆ. ಒಂದು ವೇಳೆ ಚೀನಾ ಏನಾದ್ರೂ ತೈವಾನ್ ವಶಪಡಿಸಿಕೊಳ್ಳಲು ಯುದ್ಧವನ್ನ ಸಾರಿದ್ರೆ, ಭಾರತದ ಉತ್ಪಾದನಾ ವಲಯದ ಜಂಘಾಬಲವೇ ಉಡುಗುವುದರಲ್ಲಿ ಸಂಶಯವೇ ಇಲ್ಲ. ಇದ್ರಿಂದಾಗಿ ಕುಂಠಿತ ಉತ್ಪಾದನೆ, ಜಾಬ್ ಲಾಸ್, ಬೆಲೆ ಏರಿಕೆ ಹೀಗೆ ಅತಿ ದೊಡ್ಡ ದೊಡ್ಡ ಸವಾಲುಗಳೇ ಎದುರಾಗುತ್ತವೆ. ಜೊತೆಗೆ, ಭಾರತದ ಆರ್ಥಿಕತೆ ಕುಸಿದರೂ ಅಚ್ಚರಿ ಇಲ್ಲ.
ಇದೇ ಕಾರಣದಿಂದಾಗಿ ಇಂದು ಕೆಂಪು ಕೋಟೆಯಿಂದ ಪ್ರಧಾನಿ ಮೋದಿ ಮಾಡಿದ ಭಾಷಣ, 3 ದಶಕಗಳ ಹಿಂದೆಯೇ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಭಾರತ ಮುಗ್ಗರಿಸಲು ಕಾರಣವಾಗಿದ್ದ ಮಹಾದ್ರೋಹವೊಂದರ ನೆನಪು ಮರುಕಳಿಸಲು ಕಾರಣವಾಗಿದೆ.
ನಮ್ಮ ದೇಶದಲ್ಲಿ50-60 ವರ್ಷಗಳ ಮೊದಲೇ ಫ್ಯಾಕ್ಟರಿ ವಿಚಾರ ಶುರುವಾಯ್ತು. ನವಯುವಕರೆ ಇದನ್ನ ಕೇಳಿ ನೀವು ಸುಸ್ತಾಗ್ತೀರಿ. ಇಂದು ಇಡೀ ವಿಶ್ವದ ಶಕ್ತಿಯಾಗಿರುವ ಸೆಮಿಕಂಡಕ್ಟರ್ ಉತ್ಪಾದನೆ ವಿಚಾರದ ಭ್ರೂಣ ಹತ್ಯೆ 50-60 ವರ್ಷಗಳ ಹಿಂದೆಯೇ ಆಗಿ ಹೋಯ್ತು. ನಮ್ಮ ನಂತರ ಇಂದು ಹಲವು ದೇಶಗಳು ಸೆಮಿಕಂಡಕ್ಟರ್‌ನಲ್ಲಿ ಸಾಧನೆ ಮಾಡಿ ವಿಶ್ವದಲ್ಲಿ ತಮ್ಮ ಶಕ್ತಿಯನ್ನ ಸ್ಥಾಪಿಸಿವೆ. ಸ್ನೇಹಿತರೇ ಇಂದು ನಾವು ಆ ಭಾರದಿಂದ ಮುಕ್ತಿ ಪಡೆದು, ಮಿಷನ್ ಮೋಡ್‌ನಲ್ಲಿ ಸೆಮಿಕಂಡಕ್ಟರ್ ಬಗ್ಗೆ ಕೆಲಸ ಮಾಡುತ್ತಿದ್ದೇವೆ. 6 ಹೊಸ ಯೂನಿಟ್‌ಗಳ ಸ್ಥಾಪನೆಯಾಗಿವೆ. 4 ಹೊಸ ಯೂನಿಟ್ಸ್‌ಗೆ ಹಸಿರು ನಿಶಾನೆ ತೋರಿದ್ದೇವೆ. ದೇಶವಾಸಿಗಳೇ ಅದ್ರಲ್ಲೂ ನವಯುಕರೇ ಮತ್ತು ವಿಶ್ವಾದ್ಯಂತ ಭಾರತದ ತಂತ್ರಜ್ಞಾನ ಶಕ್ತಿ ತಿಳಿದಿರುವ ಎಲ್ಲರಿಗೂ ನಾನು ಹೇಳ ಬಯಸುತ್ತೇನೆ, ಇದೇ ವರ್ಷದ ಅಂತ್ಯದ ವೇಳೆಗೆ ಮೇಡ್ ಇನ್ ಇಂಡಿಯಾ ಚಿಪ್ಸ್ ಮಾರುಕಟ್ಟೆಗೆ ಬರಲಿವೆ. – ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಸೆಮಿಕಂಡಕ್ಟರ್ ವಿಚಾರದಲ್ಲಿ ಜಸ್ಟ್ 3 ದಶಕಗಳ ಹಿಂದಿನ ಸ್ಥಿತಿ ಹೀಗಿರಲಿಲ್ಲ. ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಇಡೀ ವಿಶ್ವದ ಮುಂಚೂಣಿ ರಾಷ್ಟ್ರವಾಗುವ ಭರವಸೆಯನ್ನು ಭಾರತ ಮೂಡಿಸಿತ್ತು. ಆದ್ರೆ 1989ರಲ್ಲಿ ಅದೊಂದು ಭಯಾನಕ ಘಟನೆ ನಡೆಯದೇ ಇದ್ದರೆ, ಸ್ಥಿತಿಯೇ ಬೇರೆ ಇರ್ತಿತ್ತು. ಹಾಗಿದ್ರೆ, ಅಂದು ಏನಾಗಿತ್ತು? ಆ ಘಟನೆ ಯಾಕೆ ಭಾರತದ ಬೆಳವಣಿಗೆಯ ಅತಿ ದೊಡ್ಡ ಹಿನ್ನಡೆಗೆ ಕಾರಣವಾಯ್ತು? ಅಂತ ತಿಳಿಯುವ ಮೊದಲು, ಭಾರತದ ಸೆಮಿಕಂಡಕ್ಟರ್ ಜರ್ನಿ ಅರ್ಥಮಾಡಿಕೊಳ್ಳೋಣ.
ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ಅಡಿಯಲ್ಲಿ ಭಾರತ ಕೈಗಾರಿಕರಣದಿಂದ ವಂಚಿತವಾಗುತ್ತಲೇ ಬಂದಿತ್ತು. 1947ರಲ್ಲಿ ಭಾರತ ಸ್ವತಂತ್ರವಾದರೂ ಅನಕ್ಷರತೆ, ಬಡತನದ ಸವಾಲು ಹೆಚ್ಚೇ ಇತ್ತು. ಹೀಗಿದ್ದೂ 1960ರ ಹೊತ್ತಿಗೆ ದೇಶದ ಕೆಲ ಕೈಗಾರಿಕೆಗಳು ಜರ್ಮೇನಿಯಮ್ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಆರಂಭಿಸಿದ್ದವು. ಈ ಸಂದರ್ಭದಲ್ಲಿ ಇಂಟಗ್ರೇಟೆಡ್ ಸರ್ಕ್ಯೂಟ್ ತಂತ್ರಜ್ಞಾನದ ಪಿತಾಮಹ ಎಂದೆನಿಸಿಕೊಂಡಿದ್ದ ಫೇರ್‌ಚೈಲ್ಡ್ ಸೆಮಿಕಂಡಕ್ಟರ್ಸ್ ಅನ್ನೋ ಕಂಪನಿ, ಏಷ್ಯಾದ ತನ್ನಮೊದಲ ಯೂನಿಟ್ ಅನ್ನು ಭಾರತದಲ್ಲಿಯೇ ಆರಂಭಿಸುವುದು ಸೂಕ್ತ ಎಂದು ಪರಿಗಣಿಸಿತ್ತು ಎನ್ನಲಾಗಿದೆ.

ಇದೇ ಅವಧಿಯಲ್ಲಿ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆ ಹಾಗೂ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜಂಟಿಯಾಗಿ ಸೆಮಿಕಂಡಕ್ಟರ್ ಡಿವೈಸ್ ತಯಾರಿಸಲು ಬೇಕಾಗುವ ಜರ್ಮೇನಿಯಮ್ ಹಾಗೂ ಸಿಲಿಕಾನ್ ತಂತ್ರಜ್ಞಾನವನ್ನು ಪಡೆದುಕೊಂಡಿತ್ತು. ಇದೇ ಕಾರಣದಿಂದ ಇಂದಿಗೂ ಭಾರತದ ರಕ್ಷಣಾ ಕ್ಷೇತ್ರಕ್ಕೆ ಬೇಕಾಗಿರುವ ಸೆಮಿಕಂಡಕ್ಟರ್ ಡಿವೈಸ್ ಅನ್ನು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಹಯೋಗದಲ್ಲಿ ತಯಾರಿಸುತ್ತಿದೆ.

1960ರಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಭಾರತದಲ್ಲಿ ಶುರುವಾಗಿದ್ದರೂ ನಂತರ ಎರಡು ದಶಕಗಳ ಕಾಲ ಅಕ್ಷರಶಃ ಲೈಸೆನ್ಸ್ ರಾಜ್ ಹಾಗೂ ರೆಡ್ ಟೇಪಿಸಂ ಗ್ರಹಣ ಆವರಿಸಿಕೊಂಡಿತ್ತು. ಇದರಿಂದಾಗಿ ಸೆಮಿಕಂಡಕ್ಟರ್ ಮಾತ್ರವಲ್ಲ, ಇಡೀ ದೇಶದ ಕೈಗಾರೀಕರಣ ಆಮೆ ವೇಗಕ್ಕಿಂತ ಕಡಿಮೆ ನಿಧಾನವಾಗಿ ಚಲಿಸುತ್ತಿತ್ತು. ಆದ್ರೆ 1984ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗುವುದರ ಮೂಲಕ ಈ ಗ್ರಹಣ ಸರಿಯುವ ಸೂಚನೆ ಲಭಿಸಿತು. ಇದ್ರಿಂದಾಗಿ 1984ರ ನಂತರದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರ ವೇಗವನ್ನು ಪಡೆದುಕೊಂಡಿತು. ಈ ಅವಧಿಯಲ್ಲಿ ಲೈಸೆನ್ಸ್ ರಾಜ್‌ಗೆ ಕೊಂಚ ಕಡಿವಾಣ ಹಾಕಿದ್ದಲ್ಲದೇ, ಕಂಪ್ಯೂಟರ್ ಹಾಗೂ ಇತರೆ ಇಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ರದ್ದು ಮಾಡಿದ್ರು. ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಷನ್ಸ್ ಹಾಗೂ ಎನರ್ಜಿ ಕ್ಷೇತ್ರಗಳಿಗೆ ಯೂರೋಪ್, ಜಪಾನ್, ಅಮೆರಿಕದಿಂದ ಹೂಡಿಕೆಯನ್ನ ಆಹ್ವಾನಿಸಿದ್ರು.

ಅಷ್ಟೇ ಅಲ್ಲ ರಾಜೀವ್ ಗಾಂಧಿ ಮುಂದಾಳತ್ವದಲ್ಲಿಯೇ 1984ರಲ್ಲಿ ಸೆಮಿಕಂಡಕ್ಟರ್ ಕಾಂಪ್ಲೆಕ್ಸ್ ಲಿಮಿಟೆಡ್ (SCL) ಚಂಡೀಗಢ್‌ನಲ್ಲಿ ಸ್ಥಾಪನೆ ಆಯಿತು. ಇದರ ಜೊತೆಯಲ್ಲಿಯೇ ನ್ಯಾಷನಲ್ ಸಿಲಿಕಾನ್ ಫೆಸಿಲಿಟಿ (NCF) ಸ್ಥಾಪನೆಗೂ ಸಹ ಹರಾಜು ಪ್ರಕ್ರಿಯೆ ಆರಂಭಿಸಿದ್ರು. ಇದರ ಫಲವಾಗಿ ತಮಿಳುನಾಡಿನ ಮೆಟ್ಟೂರಿನಲ್ಲಿ ಪಾಲಿಸಿಲಿಕಾನ್ ಫೆಸಿಲಿಟಿ ಶುರುವಾಯಿತು.
ರಾಜೀವ್ ಗಾಂಧಿಯವರ ಈ ಕ್ರಮಗಳು 5 ವರ್ಷದಲ್ಲಿ ಫಲ ನೀಡಲು ಶುರುವಾಗಿದ್ದವು. 1984ರಲ್ಲಿ 5000 nm ಪ್ರೊಸೆಸ್‌ನಿಂದ ಶುರುವಾದ ಉತ್ಪಾದನೆ, ಕೆಲವೇ ಸಮಯದಲ್ಲಿ 800 ತಂತ್ರಜ್ಞಾನವನ್ನು ವೃದ್ಧಿಸಿತ್ತು. ವಿಶೇಷವೆಂದ್ರೆ ಈ ಸಮಯದಲ್ಲಿ ಚೀನಾ ಆಗಲಿ, ತೈವಾನ್ ಆಗಲಿ ಈ ರೇಸ್‌ನಲ್ಲಿ ಎಂಟ್ರಿ ಕೂಡ ಆಗಿರಲಿಲ್ಲ. ನಮ್ಮ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಸಕ್ಸಸ್ ಆಗಿತ್ತು ಅಂದ್ರೆ, 1989ರಲ್ಲಿ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಸೆಮಿ ಕಂಡಕ್ಟರ್ ತಯಾರಿಕೆಯಲ್ಲಿ ಭಾರತ ತನ್ನದೇ ಆದ ವಿಶ್ವ ಮಟ್ಟದ ಪಾಲು ಸೃಷ್ಟಿಸಿಕೊಂಡಿದೆ ಅಂತ ಬರೆದಿದ್ದವು. ಇಂಥ ಸಮಯದಲ್ಲಿ ನಡೆದೇ ಬಿಟ್ಟಿತು ನೋಡಿ ಮಹಾ ಅನಾಹುತ.
ಒಂದೆಡೆ SCL ಕನಸಿಗೆ ಬೆನ್ನೆಲುಬಾಗಿದ್ದ ರಾಜೀವ್ ಗಾಂಧಿ ಸರ್ಕಾರ, ಮತ್ತೊಂದೆಡೆ ಪರ್ಯಾಯ ಪ್ರಯತ್ನಗಳಿಗೆ ಅಷ್ಟು ಬೆಂಬಲ ನೀಡಲಿಲ್ಲ ಅನ್ನೊ ಆರೋಪಗಳಿವೆ. ಅದ್ರಲ್ಲೂ 1985ರಲ್ಲಿ IISC ಪ್ರೊಫೆಸರ್ ಆಗಿದ್ದ A.R ವಾಸುದೇವ ಮೂರ್ತಿ ಮೆಟ್ಕೆಮ್ ಸಿಲಿಕಾನ್ ಲಿಮಿಟೆಡ್ ಅನ್ನು ಆರಂಭಿಸಲು ಸಹಾಯ ಮಾಡಿದ್ದರು. ಬಿಇಎಲ್ ಜೊತೆ ಜಂಟಿಯಾಗಿ ಈ ಸಂಸ್ಥೆ ಸೋಲಾರ್ ಸೆಲ್ಸ್ ಹಾಗೂ ಎಲೆಕ್ಟ್ರಾನಿಕ್ಸ್‌ಗಾಗಿ ಪಾಲಿಸಿಲಿಕಾನ್ ವೇಫರ್ಸ್‌ಗಳನ್ನು ತಯಾರಿಸುತ್ತಿತ್ತು. ದುರದೃಷ್ಟವೆಂದ್ರೆ ಸರ್ಕಾರದ ಬೆಂಬಲದ ಕೊರತೆ ಹಾಗೂ ಸಬ್ಸಿಡಿಯುತ ವಿದ್ಯುತ್ ಪೂರೈಕೆಯನ್ನ ಕೊಟ್ಟ ಮಾತಿನಂತೆ ನೀಡದಿರೋ ಕಾರಣದಿಂದ ಈ ಸಂಸ್ಥೆ ಹೆಚ್ಚು ಕಾಲ ಬಾಳಲಿಲ್ಲ.
ಮೆಟ್ಕೆಮ್ ಇರದಿದ್ದರೆ ಏನಂತೆ, SCL ಇದೆಯಲ್ಲ ಅನ್ನೋ ಭರವಸೆಗೂ ಇದೇ ಸಮಯದಲ್ಲಿ ಕೊಳ್ಳಿ ಬಿದ್ದು ಬಿಟ್ಟಿತ್ತು. ಯೆಸ್… ಅದು 1989ರ ಫೆಬ್ರವರಿ ತಿಂಗಳು. ಇದ್ದಕ್ಕಿದ್ದಂತೆ ಚಂಡೀಗಢ್‌ನ ಸೆಮಿಕಂಡಕ್ಟರ್ ಕಾಂಪ್ಲೆಕ್ಸ್ ಲಿಮಿಟೆಡ್‌ಗೆ ಬೆಂಕಿ ತಗುಲಿತು. ಇಡೀ ಭಾರತದ ಸೆಮಿಕಂಡಕ್ಟರ್ ಸಾಧನೆ, ಕನಸು, ಮಹತ್ವಾಕಾಂಕ್ಷೆ ಈ ಬೆಂಕಿಯಲ್ಲಿ ಆಹುತಿಯಾಯಿತು. ಎಸ್‌ಸಿಎಲ್ ಧಗಧಗಿಸಿ ಉರಿಯುತ್ತಿದ್ದರೆ, ಭವ್ಯ ಭಾರತದ ಸೆಮಿಕಂಡಕ್ಟರ್ ಸ್ವಾತಂತ್ರ್ಯವೂ ಸುಟ್ಟು ಬೂದಿಯಾಗುತ್ತಿತ್ತು. ಇದು ಅಂತಿಂಥ ಆಘಾತವಾಗಿರಲಿಲ್ಲ. ಒಂದು ಅಂದಾಜಿನ ಪ್ರಕಾರ ಅಂದಿನ ಮಟ್ಟಿಗೆ ಸುಮಾರು 60 ಕೋಟಿ ರೂಪಾಯಿ ನಷ್ಟವಾಗಿತ್ತು. ಬರೀ ನಷ್ಟವಲ್ಲ, 5 ವರ್ಷಗಳಲ್ಲಿ ಸೃಷ್ಟಿಸಿದ್ದ ತಂತ್ರಜ್ಞಾನ, ಮಷಿನರಿ, ಸಾಫ್ಟ್‌ವೇರ್‌ಗಳು, ಕಚ್ಚಾ ವಸ್ತುಗಳು ಎಲ್ಲವೂ ಸುಟ್ಟು ಹೋಗಿದ್ದವು. ಇದರ ಎಫೆಕ್ಟ್ ಹೇಗಿದೆ ಎಂದರೆ, ಮತ್ತೆ ಎಂದಿಗೂ ಈ ಕಾಂಪ್ಲೆಕ್ಸ್ ತನ್ನ ಗತ ವೈಭವ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಇದು ಮಹಾದ್ರೋಹವೇ? ಒಳಗಿನವರೇ ಬೆಂಕಿ ಇಟ್ಟರೆ? ಹೊರಗಿನ ಶತ್ರುಗಳು ಆಟ ಆಡಿದರೆ? ಹೀಗೆ ಹಲವು ಪ್ರಶ್ನೆಗಳು ಇಂದಿಗೂ ಇದ್ದೇ ಇವೆ. ಭಾರತ ಎಂದೆಂದಿಗೆ, ಆಧುನಿಕ ತಂತ್ರಜ್ಞಾದಲ್ಲಿ ಮುಂದಡಿ ಇಡಬೇಕು ಅಂದಾಗಲೆಲ್ಲ ಯಾಕೆ ಹೀಗೆ ಆಗುತ್ತದೆ? ಅನ್ನೋ ಪ್ರಶ್ನೆ ಮೂಡುತ್ತಲೇ ಇದೆ.
ಈ ಬೆಂಕಿ ಅನಾಹುತದ ಬಗ್ಗೆ ಸ್ವತಃ ಇಂಟಲಿಜೆನ್ಸ್ ಬ್ಯೂರೋನೇ ತನಿಖೆಯನ್ನ ಕೂಡ ನಡೆಸಿದೆ. ಹಾಗಿದ್ದೂ ಇದರ ಹಿಂದೆ ಏನಾದ್ರೂ ಕಾನ್ಸ್‌ಪಿರೆಸಿ ಇತ್ತಾ? ಇಲ್ಲವಾ? ಅನ್ನೋದು ಸ್ಪಷ್ಟವಾಗಿಲ್ಲ. ಇದ್ರಲ್ಲಿ ಏನೂ ಹುನ್ನಾರ ಇಲ್ಲ ಎಂದೇ ಭಾವಿಸೋಣ, ಹಾಗಿದ್ದೂ ಅಸಡ್ಡೆಯೋ, ಬೆಂಕಿ ಅನಾಹುತ ನಡೆಯದಂಥ ಸುರಕ್ಷತೆಯಲ್ಲಿ ಆದ ಚ್ಯುತಿಯೋ? ಗೊತ್ತಿಲ್ಲ. ಹಾಗಿದ್ದರೂ ಅದು ನಮಗೆ ನಾವು ಮಾಡಿಕೊಂಡ ಮಹಾ ದ್ರೋಹವಲ್ಲದೇ ಮತ್ತೇನು ಅಲ್ಲ.
ದುರದೃಷ್ಟವೆಂದ್ರೆ 1989ರಲ್ಲಿ ಎಸ್‌ಸಿಎಲ್ ಮಾತ್ರ ಬೆಂಕಿಗೆ ಆಹುತಿಯಾಗಲಿಲ್ಲ. ಅದೇ ಅವಧಿಯಲ್ಲಿ ರಾಜೀವ್ ಗಾಂಧಿ ಅಧಿಕಾರ ಕಳೆದುಕೊಂಡರು. ಅಷ್ಟು ಮಾತ್ರವಲ್ಲ ತಂತ್ರಜ್ಞಾನದ ಕನಸು ಹೊತ್ತಿದ್ದ ಅವರು ಮೇ 21, 1991ರನ್ನು ಎಲ್‌ಟಿಟಿಇಯ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದರು.
18ನೇ ಡಿಸೆಂಬರ್, 1989ರಂದು ವಿ.ಪಿ. ಸಿಂಗ್ ಪ್ರಧಾನಿಯಾದದರು. ಹಾಗಿದ್ದೂ, SCL ತನ್ನ ಗತ ವೈಭವ ಮರಳಿ ಪಡೆದುಕೊಳ್ಳಲಿಲ್ಲ. 1997ರ ಸಮಯದಲ್ಲಿ ಅದು ಕಾರ್ಯ ನಿರ್ವಹಿಸಲು ಆರಂಭಿಸಿದ್ರೂ, ಕೇವಲ ಇಸ್ರೋಗೆ ಬೇಕಾದಂಥ ಕೆಲ ಚಿಪ್ ಅನ್ನ ಮಾತ್ರ ತಯಾರಿ ಮಾಡಿಕೊಂಡುವಂತಾಯಿತು.
ಇನ್ನು 1991ರ ಜೂನ್‌ನಲ್ಲಿ ಪಿ.ವಿ ನರಸಿಂಹ ರಾವ್ ದೇಶದ ಪ್ರಧಾನಿ ಗದ್ದುಗೆ ಏರಿದ್ರು. ಈ ಸಂದರ್ಭದಲ್ಲಿಯೇ ಭಾರತ ಉದಾರಿಕರಣ ನೀತಿಗೆ ತನ್ನನ್ನು ತಾನು ತೆರೆದುಕೊಂಡಿತು. ಈ ಅವಧಿಯಲ್ಲಿ ವಿದೇಶದಿಂದ ಅತ್ಯಾಧುನಿಕ ಸೆಮಿಕಂಡಕ್ಟರ್ ಡಿವೈಸ್ ಆಮದು ಕೂಡ ಶುರುವಾಯಿತು.
ಒಂದೆಡೆ ಅತ್ಯಾಧುನಿಕ ಹಾಗೂ ಕೈಗೆಟಕುವ ದರದ ಎಲೆಕ್ಟ್ರಾನಿಕ್ ವಸ್ತುಗಳು ಸಹ ಭಾರತಕ್ಕೆ ಬರಲು ಆರಂಭಿಸಿದವು. ಈ ಪೈಪೋಟಿಯಲ್ಲಿ ಭಾರತ ತನ್ನ ಗೋಲ್ಡನ್ ಅವಧಿಯನ್ನ ಕಳೆದುಕೊಳ್ಳಬೇಕಾಯಿತು. ಮಧ್ಯದಲ್ಲಿ ವಾಜಪೇಯಿ ಸರ್ಕಾರ, ಯುಪಿಎ 1, ಯುಪಿಎ 2 ಸೆಮಿಕಂಡಕ್ಟರ್ ವಿಚಾರದಲ್ಲಿ ಆಗೊಮ್ಮೆ ಈಗೊಮ್ಮೆ ಮಾತನಾಡಿದ್ರೂ, ಒಂದು ಸ್ಪಷ್ಟ ನೀತಿಯನ್ನ ತರಲು ಸಾಧ್ಯವಾಗಲಿಲ್ಲ.
ಆದ್ರೆ, ಈಗ ಮೋದಿ ಸರ್ಕಾರ ತನ್ನ 3ನೇ ಅವಧಿಯಲ್ಲಿದೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಅದು ರೂಪಿಸಿದ್ದ ನೀತಿ ಈಗ ಫಲಕೊಡುವ ಹಂತಕ್ಕೆ ಬರುತ್ತಿದೆ. ಒಂದು ವೇಳೆ ಪ್ರಧಾನಿ ಮೋದಿ ಹೇಳಿದಂತೆ, ಈ ಡಿಸೆಂಬರ್ ವೇಳೆಗೆ ಮೇಡ್ ಇನ್ ಇಂಡಿಯಾ ಚಿಪ್‌ಗಳು, ಸೆಮಿಕಂಡಕ್ಟರ್ ಡಿವೈಸ್‌ಗಳು ಮಾರುಕಟ್ಟೆಗೆ ಬಂದಿದ್ದೇ ಆದ್ರೆ, ಅದಕ್ಕಿಂತ ಸಮಾಧಾನದ ಮತ್ತು ಖುಷಿಯ ಸಂಗತಿ ಮತ್ತೊಂದಿಲ್ಲ. ಪ್ರತಿಯೊಬ್ಬ ಭಾರತೀಯರು ಇದನ್ನು ತಿಳಿದುಕೊಂಡರೆ, ಮುಂದೆ ಬರುವ ಸವಾಲುಗಳಿಗೂ ಸಿದ್ಧವಾದಂತೆ ಆಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ನಮ್ಮ ಮನವಿ ಎಂದರೆ, ಸಾಧ್ಯವಾದಷ್ಟು ಈ ಆರ್ಟಿಕಲ್ ಅನ್ನ ಶೇರ್ ಮಾಡಿ, ಈ ಬಗ್ಗೆ ಚರ್ಚೆ ಮಾಡಿ.
August 15, 2025 7:02 PM IST