Last Updated:
40 ವರ್ಷ ವಯಸ್ಸಿನ ಮೊಹಮ್ಮದ್ ನಬಿ ತಮ್ಮ 16 ವರ್ಷಗಳ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 135 ಪಂದ್ಯಗಳನ್ನಾಡಿ, 2246 ರನ್‌ಗಳನ್ನು ಗಳಿಸಿದ್ದಾರೆ ಮತ್ತು 101 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಶಾರ್ಜಾ: ಯುಎಇ ತ್ರಿಕೋನ ಟಿ20 ಸರಣಿಯ (UAE Tri Series) 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನವನ್ನು (Afghanistan vs Pakistan) 18 ರನ್‌ಗಳಿಂದ ಸೋಲಿಸಿ, ಏಷ್ಯಾದ ಕ್ರಿಕೆಟ್‌ನಲ್ಲಿ ತನ್ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಅನುಭವಿ ಆಲ್‌ರೌಂಡರ್ ಮೊಹಮ್ಮದ್ ನಬಿ (Mohammad Nadi) ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ರನ್‌ಗಳು ಮತ್ತು 100 ವಿಕೆಟ್‌ಗಳ ದ್ವಿಗುಣ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯನ್ನು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 2, 2025 ರಂದು ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫಖರ್ ಜಮಾನ್‌ರ ವಿಕೆಟ್ ಪಡೆಯುವ ಮೂಲಕ ನಬಿ ತಮ್ಮ 100ನೇ ಟಿ20 ವಿಕೆಟ್ ಪೂರೈಸಿದರು. ಈ ಮೂಲಕ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ (2551 ರನ್, 149 ವಿಕೆಟ್) ನಂತರ ಈ ಅಪರೂಪದ “ಲೆಜೆಂಡರಿ ಕ್ಲಬ್”ಗೆ ಸೇರಿದ ಎರಡನೇ ಆಟಗಾರರಾದರು.
40 ವರ್ಷ ವಯಸ್ಸಿನ ಮೊಹಮ್ಮದ್ ನಬಿ ತಮ್ಮ 16 ವರ್ಷಗಳ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 135 ಪಂದ್ಯಗಳನ್ನಾಡಿ, 2246 ರನ್‌ಗಳನ್ನು ಗಳಿಸಿದ್ದಾರೆ ಮತ್ತು 101 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ ಕೇವಲ 20 ರನ್‌ಗೆ 2 ವಿಕೆಟ್ (ಫಖರ್ ಜಮಾನ್ ಮತ್ತು ಫಹೀಮ್ ಅಶ್ರಫ್) ಪಡೆದರು, ಇದರೊಂದಿಗೆ ಟಿ20ಯಲ್ಲಿ 100 ವಿಕೆಟ್‌ಗಳ ಗಡಿಯನ್ನು ದಾಟಿದರು. ರಶೀದ್ ಖಾನ್ (99 ಪಂದ್ಯಗಳಲ್ಲಿ 167 ವಿಕೆಟ್) ನಂತರ ಅಫ್ಘಾನಿಸ್ತಾನ ಪರ 100 ಟಿ20 ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ನಬಿ ಪಾತ್ರರಾದರು.
ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸೆದಿಕುಲ್ಲಾ ಅಟಲ್ (64 ರನ್, 38 ಎಸೆತಗಳಲ್ಲಿ, 5 ಬೌಂಡರಿಗಳು, 2 ಸಿಕ್ಸರ್‌ಗಳು) ಮತ್ತು ಇಬ್ರಾಹಿಂ ಜದ್ರಾನ್ (65 ರನ್, 40 ಎಸೆತಗಳಲ್ಲಿ, 6 ಬೌಂಡರಿಗಳು, 1 ಸಿಕ್ಸರ್) ಅರ್ಧಶತಕಗಳೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 169 ರನ್ ಗಳಿಸಿದರು. ಕರೀಂ ಜನತ್ (18 ರನ್) ಮತ್ತು ಅಜ್ಮತುಲ್ಲಾ ಒಮರ್ಜಾಯ್ (15 ರನ್) ಕೊನೆಯಲ್ಲಿ ರನ್‌ಗತಿಯನ್ನು ಹೆಚ್ಚಿಸಿದರು. ಪಾಕಿಸ್ತಾನದ ಬೌಲರ್ ಫಹೀಮ್ ಅಶ್ರಫ್ 4 ವಿಕೆಟ್‌ಗಳನ್ನು (4-0-27-4) ಪಡೆದು ಅಫ್ಘಾನ್ ಇನಿಂಗ್ಸ್‌ಗೆ ಸ್ವಲ್ಪ ಕಡಿವಾಣ ಹಾಕಿದರು.
170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್ ಗಳಿಸಿ ಸೋಲನುಭವಿಸಿತು. 10ನೇ ಕ್ರಮಾಂಕದ ಹ್ಯಾರಿಸ್ ರೌಫ್‌ನ 34 ರನ್ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು. ಸಾಹಿಬ್‌ಜಾದಾ ಫರ್ಹಾನ್ (21 ರನ್, 10 ಎಸೆತಗಳಲ್ಲಿ ಸೈಮ್ ಆಯುಬ್ (25 ರನ್), ಫಖರ್ ಜಮಾನ್ (15 ರನ್), ಮತ್ತು ನಾಯಕ ಸಲ್ಮಾನ್ ಅಘಾ (20 ರನ್) ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಅಫ್ಘಾನ್ ಸ್ಪಿನ್ನರ್‌ಗಳಾದ ಮೊಹಮ್ಮದ್ ನಬಿ (2/20), ರಶೀದ್ ಖಾನ್ (2/21), ಮತ್ತು ನೂರ್ ಅಹ್ಮದ್ (2/20) ಪಾಕಿಸ್ತಾನದ ವಿರುದ್ಧ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
2009ರಲ್ಲಿ ಅಫ್ಘಾನಿಸ್ತಾನದ ಮೊದಲ ಏಕದಿನ ಪಂದ್ಯದಿಂದ ಹಿಡಿದು 2018ರಲ್ಲಿ ಮೊದಲ ಟೆಸ್ಟ್ ಪಂದ್ಯದವರೆಗೆ, ನಬಿ ತಂಡದ ಪ್ರತಿಯೊಂದು ಮಹತ್ವದ ಕ್ಷಣದಲ್ಲಿ ಭಾಗಿಯಾಗಿದ್ದಾರೆ. 2016ರ ಟಿ20 ವಿಶ್ವಕಪ್‌ನಲ್ಲಿ ಹಾಂಕಾಂಗ್ ಮತ್ತು ಜಿಂಬಾಬ್ವೆ ವಿರುದ್ಧ ಗೆಲುವಿನಲ್ಲಿ, 2023ರಲ್ಲಿ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವಿನಲ್ಲಿ, ಮತ್ತು 2024ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದಾಗಲೂ ನಬಿಯ ಕೊಡುಗೆ ಮಹತ್ವದ್ದಾಗಿತ್ತು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಡಿದ ಮೊದಲ ಅಫ್ಘಾನ್ ಆಟಗಾರರಾಗಿದ್ದು, 2017ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಸೇರಿದ್ದರು.
September 03, 2025 5:34 PM IST
Mohammad Nabi: ಚುಟುಕು ಕ್ರಿಕೆಟ್‌ನಲ್ಲಿ ಚರಿತ್ರೆ ಸೃಷ್ಟಿಸಿದ ನಬಿ! ಅಂತಾರಾಷ್ಟ್ರೀಯ ಟಿ20ಯಲ್ಲಿ ಈ ಸಾಧನೆ ಮಾಡಿದ ಕೇವಲ 2ನೇ ಕ್ರಿಕೆಟರ್