Last Updated:
ಚಾಂಪಿಯನ್ ಟ್ರೋಫಿ ಗೆಲುವಿನ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಏಕದಿನ ಸರಣಿ (ODI series) ಆರಂಭಕ್ಕೆ ಕೇವಲ ಐದು ದಿನಗಳು ಬಾಕಿ ಇವೆ. ಬುಧವಾರ ಬೆಳಿಗ್ಗೆ, ಭಾರತ ತಂಡ (Team India)ವು ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ವಿಮಾನ ಹತ್ತಲಿದೆ. ಆದರೆ, ಭಾರತ ತಂಡದ ಆಯ್ಕೆ ಸಮಸ್ಯೆ ನಿರಂತರವಾಗಿ ಮುಂದುವರೆದಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದ ಸುತ್ತಲಿನ ಗುಸುಗುಸು ಎಷ್ಟು ಪ್ರಬಲವಾಗಿದೆಯೆಂದರೆ, ವೇಗ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರನ್ನು ಕೈಬಿಟ್ಟಿರುವ ಬಗ್ಗೆ ಚರ್ಚೆಗಳು ಕಡಿಮೆಯಾಗಿವೆ. ಆದರೆ ಈಗ, ಮೊಹಮ್ಮದ್ ಶಮಿ ತಾಳ್ಮೆ ಕಳೆದುಕೊಂಡು ಬಿಸಿಸಿಐ (BCCI) ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮೊಹಮ್ಮದ್ ಶಮಿ ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಅವರು ವರುಣ್ ಚಕ್ರವರ್ತಿ ಜೊತೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರು. ಇದರ ಹೊರತಾಗಿಯೂ ಶಮಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಇದು ಶಮಿ ಅವರು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದೆ.
ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗುಳಿದರೂ, ಮೊಹಮ್ಮದ್ ಶಮಿ ಬಂಗಾಳ ರಣಜಿ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಶಮಿ ಈಗ ತಮ್ಮ ಕಾರಣಗಳನ್ನು ವಿವರಿಸುತ್ತಾ ಬಿಸಿಸಿಐ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರೂ, ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿಲ್ಲ. ಈ ವಿಚಾರ ಕ್ರಿಕೆಟ್ ಗಲ್ಲಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ರಣಜಿ ಟ್ರೋಫಿ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮೊಹಮ್ಮದ್ ಶಮಿ, ನಾನು ಇದನ್ನು ಮೊದಲೇ ಹೇಳಿದ್ದೇನೆ. ಆಯ್ಕೆ ನನ್ನ ಕೈಯಲ್ಲಿಲ್ಲ. ಯಾವುದೇ ಫಿಟ್ನೆಸ್ ಸಮಸ್ಯೆಗಳಿದ್ದರೆ, ನಾನು ಬಂಗಾಳ ಪರ ಆಡಬಾರದು. ಇದನ್ನು ಚರ್ಚಿಸುವ ಮೂಲಕ ವಿವಾದವನ್ನು ಹುಟ್ಟುಹಾಕುವ ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ. ನಾನು ನಾಲ್ಕು ದಿನಗಳ ಕ್ರಿಕೆಟ್ (ರಣಜಿ ಟ್ರೋಫಿ) ಆಡಲು ಸಾಧ್ಯವಾದರೆ, 50 ಓವರ್‌ಗಳ ಕ್ರಿಕೆಟ್ ಅನ್ನು ಸಹ ಆಡಬಲ್ಲೆ ಎನ್ನುವ ಮೂಲಕ ಬಿಸಿಸಿಐ ವಿರುದ್ಧ ತಿರುಗಿ ಬಿದ್ದಿದ್ದಾರೆ.
ನನ್ನ ಕೆಲಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗುವುದು, ಪಂದ್ಯಗಳಿಗೆ ಸಿದ್ಧತೆ ನಡೆಸುವುದು ಮತ್ತು ಆಡುವುದು. ಬಿಸಿಸಿಐ ಅವರಿಗೆ ಯಾರು ಅಪ್‌ಡೇಟ್ ನೀಡುತ್ತಾರೆ ಅದು ಅವರ ಕೆಲಸ. ಅದು ನನ್ನ ಜವಾಬ್ದಾರಿಯಲ್ಲ ಎಂದು ಶಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ದಾಖಲೆಯ ಬೌಲಿಂಗ್ ಪ್ರದರ್ಶನದ ನಂತರ ಶಮಿ ಗಾಯಗೊಂಡರು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಗ್ರಾಫ್ನಲ್ಲಿ ಕುಸಿತವಂತೆ ಮಾಡಿದೆ. ಈಗ, ರಣಜಿ ಟ್ರೋಫಿಯಲ್ಲಿ ಅವರ ಪ್ರದರ್ಶನವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
October 14, 2025 10:57 PM IST