Mohammed Shami: ದಕ್ಷಿಣ ಆಫ್ರಿಕಾ ಸರಣಿಗೆ ಕಮ್​ಬ್ಯಾಕ್ ಮಾಡಲು ಶಮಿ ರೆಡಿ; ಬಿಸಿಸಿಐ ಆಯ್ಕೆ ಸಮಿತಿ ಎಚ್ಚರಗೊಳಿಸಿದ ವೇಗಿ / Team India fast bowler Mohammed Shami urges BCCI selection committee to select him for South Africa series | ಕ್ರೀಡೆ

Mohammed Shami: ದಕ್ಷಿಣ ಆಫ್ರಿಕಾ ಸರಣಿಗೆ ಕಮ್​ಬ್ಯಾಕ್ ಮಾಡಲು ಶಮಿ ರೆಡಿ; ಬಿಸಿಸಿಐ ಆಯ್ಕೆ ಸಮಿತಿ ಎಚ್ಚರಗೊಳಿಸಿದ ವೇಗಿ / Team India fast bowler Mohammed Shami urges BCCI selection committee to select him for South Africa series | ಕ್ರೀಡೆ

Last Updated:

ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡದ ಪರ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಲು ಮೊಹಮ್ಮದ್ ಶಮಿ ಬಿಸಿಸಿಐ ಆಯ್ಕೆ ಸಮಿತಿಯನ್ನು ಒತ್ತಾಯಿಸಿದ್ದಾರೆ.

Mohammed Shami
Mohammed Shami

ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ(Mohammed Shami) ಬಹಳ ಸಮಯದಿಂದ ಭಾರತ(India) ತಂಡದಿಂದ ಹೊರಗಿದ್ದಾರೆ. ಆಸ್ಟ್ರೇಲಿಯಾ(Australia) ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿರಲಿಲ್ಲ. ಶಮಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಶಮಿ ತಮ್ಮ ಪ್ರದರ್ಶನದ ಮೂಲಕ ಬಿಸಿಸಿಐ(BCCI) ಅಯ್ಕೆ ಸಮಿತಿಯನ್ನು ಎಚ್ಚರಿಗೊಳಿಸಿದ್ದಾರೆ. ರಣಜಿ ಟ್ರೋಫಿ(Ranji Trophy)ಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಶಮಿ ಟೀಮ್ ಇಂಡಿಯಾಕ್ಕೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈಗ, ಬಿಸಿಸಿಐ ಮುಖ್ಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್(Ajit Agarkar) ಅವರು ಶಮಿ ಮರಳುವಿಕೆಯ ಬಗ್ಗೆ ಚರ್ಚಿಸಬೇಕಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಶಮಿ ಅವರನ್ನು ಕೈಬಿಟ್ಟಿರುವುದು ಪ್ರಮುಖ ಸಮಸ್ಯೆಯಾಗಿದೆ.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಗುಜರಾತ್ ವಿರುದ್ಧ ಬಂಗಾಳ ಪರ ಮೊಹಮ್ಮದ್ ಶಮಿ ತಮ್ಮ ವೇಗದ ಬೌಲಿಂಗ್ ಮೂಲಕ ಎಂಟು ವಿಕೆಟ್‌ಗಳನ್ನು ಕಬಳಿಸಿದರು. ಅವರ ಪ್ರದರ್ಶನವು ಅವರ ತಂಡಕ್ಕೆ 141 ರನ್‌ಗಳ ಜಯ ತಂದುಕೊಟ್ಟಿತು.

35 ವರ್ಷದ ಶಮಿ ಎರಡನೇ ಇನ್ನಿಂಗ್ಸ್‌ನಲ್ಲಿ 10 ಓವರ್ ಬೌಲಿಂಗ್ ಮಾಡಿದರು. ಇದರಲ್ಲಿ ಒಂದು ಓವರ್ ಮೆಡಿನ್ ಮಾಡಿ 38 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಶಮಿ ಅವರ ಬೆಂಕಿ ಬೌಲಿಂಗ್ ಗುಜರಾತ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಧೂಳಿಪಟ ಮಾಡಿತು. ಬಂಗಾಳ 327 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 185 ರನ್‌ಗಳಿಗೆ ಆಲೌಟ್ ಆಯಿತು. ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಆಡುತ್ತಿರುವ ಮೊಹಮ್ಮದ್ ಶಮಿ ಕೇವಲ ಎರಡು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಶಮಿ ಭಾರತ ತಂಡಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ.

ಕೊನೆಯ ಟೆಸ್ಟ್ ಪಂದ್ಯ ಯಾವಾಗ?

ಮೊಹಮ್ಮದ್ ಶಮಿ ಅವರ ವೃತ್ತಿಜೀವನವು ದೀರ್ಘಕಾಲದವರೆಗೆ ಏರಿಳಿತಗಳನ್ನು ಕಂಡಿದೆ. ಅವರು 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಐದು ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದರೂ, ಫಿಟ್‌ನೆಸ್ ಸಮಸ್ಯೆಗಳನ್ನು ಉಲ್ಲೇಖಿಸಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಆಯ್ಕೆ ಮಾಡಿಲ್ಲ.

ಮೌನ ಮುರಿದ ಶಮಿ

ಮೊಹಮ್ಮದ್ ಶಮಿ ಸುಮಾರು 8 ತಿಂಗಳಿನಿಂದ ಭಾರತ ತಂಡದಿಂದ ಹೊರಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ, ಫಿಟ್‌ನೆಸ್ ಸಮಸ್ಯೆಗಳನ್ನು ಉಲ್ಲೇಖಿಸಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ ಆಯ್ಕೆ ಮಾಡಿರಲಿಲ್ಲ. ಇದಾದ ನಂತರ ಶಮಿ ಮೌನ ಮುರಿದಿದ್ದರು. “ನಾನು ರಣಜಿ ಆಡಲು ಸಾಧ್ಯವಾದರೆ, ನಾನು 50 ಓವರ್‌ಗಳ ಸ್ವರೂಪವನ್ನು ಸಹ ಆಡಬಲ್ಲೆ” ಎಂದು ಅವರು ಹೇಳಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಶಮಿ ಕಣಕ್ಕೆ?

ಈಗ ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿಯನ್ನು ಎಚ್ಚರಿಗೊಳಿಸಿರುವ ಶಮಿ, “ಅವರು ಏನು ಬೇಕಾದರೂ ಹೇಳಲಿ. ನಾನು ಹೇಗೆ ಬೌಲಿಂಗ್ ಮಾಡಿದ್ದೇನೆಂದು ನೀವು ನೋಡಿದ್ದೀರಿ. ಇದೆಲ್ಲವೂ ನಿಮ್ಮ ಕಣ್ಣ ಮುಂದೆಯೇ ಇದೆ ಎಂದು ನುಡಿದಿದ್ದಾರೆ. ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮೂಲಕ ಟೀಮ್ ಇಂಡಿಯಾ ಸೇರಲು ಶಮಿ ಹೋರಾಟ ನಡೆಸುತ್ತಿದ್ದಾರೆ. ಹರಿಣಗಳ ಪಡೆ ವಿರುದ್ಧ ಶಮಿ ಅವರಿಗೆ ಅವಕಾಶ ಸಿಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.