Last Updated:
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಸಾಕಷ್ಟು ಬೆಂಬಲಿಸಿದ್ದರು. ದೀರ್ಘಕಾಲ ಆರ್‌ಸಿಬಿ ಪರ ಆಡಿದ್ದ ಸಿರಾಜ್ ಅವರನ್ನು ಕೊಹ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಬುಮ್ರಾ ಅನುಪಸ್ಥತಿಯಲ್ಲಿ ತಂಡದ ಜವಾಬ್ದಾರಿ ವಹಿಸಿಕೊಂಡು 9 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ 6 ರನ್ಗಳ ರೋಚಕ ಜಯ ತಂದುಕೊಟ್ಟರು. ಸಿರಾಜ್ ಅವರ ಬೌಲಿಂಗ್ ಪ್ರದರ್ಶನವನ್ನ ಭಾರತ ಸೇರಿದಂತೆ ಹಲವು ದೇಶಗಳ ಹಾಲಿ-ಮಾಜಿ ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ಸಿರಾಜ್ ತಮ್ಮ ಅತ್ಯುತ್ತಮ ಹೋರಾಟದ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ಸಿರಾಜ್ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನಕ್ಕಾಗಿ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ,
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಸಾಕಷ್ಟು ಬೆಂಬಲಿಸಿದ್ದರು. ದೀರ್ಘಕಾಲ ಆರ್‌ಸಿಬಿ ಪರ ಆಡಿದ್ದ ಸಿರಾಜ್ ಅವರನ್ನು ಕೊಹ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಪ್ರವೇಶಿಸಿದ ಸಿರಾಜ್, ಅವರ ಬೆಂಬಲದಿಂದ ಹಂತ ಹಂತವಾಗಿ ಬೆಳೆದು ಇಂದು ಮ್ಯಾಚ್ ವಿನ್ನರ್ ಆಗಿದ್ದಾರೆ. ಸಿರಾಜ್ ವಿಫಲವಾದಾಗ, ಕೊಹ್ಲಿ ಅವರ ಬೆಂಬಲಕ್ಕೆ ನಿಂತು ಟೀಕೆಗೆ ತಿರುಗೇಟು ನೀಡಿದ್ದರು. ಕೊಹ್ಲಿ ಬೆಂಬಲ, ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಿರಾಜ್ ಅವರ ಪ್ರದರ್ಶನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ,’ಇದು ಟೀಮ್ ಇಂಡಿಯಾಕ್ಕೆ ಉತ್ತಮ ಗೆಲುವು. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅತ್ಯುತ್ತಮ ಹೋರಾಟ ಮತ್ತು ಪಂದ್ಯವನ್ನು ಗೆಲ್ಲುವ ಅವರ ದೃಢಸಂಕಲ್ಪದಿಂದ ಈ ಗೆಲುವು ಸಾಧಿಸಲಾಗಿದೆ. ತಂಡಕ್ಕಾಗಿ ತಮ್ಮ ಎಲ್ಲವನ್ನೂ ಪಣಕ್ಕಿಟ್ಟ ಸಿರಾಜ್‌ಗೆ ವಿಶೇಷ ಅಭಿನಂದನೆಗಳು. ಅವರ ಪ್ರದರ್ಶನದಿಂದ ತುಂಬಾ ಸಂತೋಷವಾಗಿದೆ’ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸಿರಾಜ್ “ನನ್ನನ್ನು ನಂಬಿದ್ದಕ್ಕಾಗಿ ಧನ್ಯವಾದಗಳು, ಭಯ್ಯಾ” ಎಂದು ಉತ್ತರಿಸಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕೊಹ್ಲಿ ಬೆಂಬಲ ಹಾಗೂ ಸಿರಾಜ್ ಪ್ರದರ್ಶನವನ್ನ ಶ್ಲಾಘಿಸುತ್ತಿದ್ದಾರೆ.
ಕೊನೆಯ ದಿನ 339/6 ಸ್ಕೋರ್‌ನೊಂದಿಗೆ ಆರಂಭಿಸಿದ ಇಂಗ್ಲೆಂಡ್ 367 ರನ್‌ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್ (5/104) ಐದು ವಿಕೆಟ್ ಪಡೆದು ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಸಿರಾಜ್ ಜೊತೆಗೆ ಪ್ರಸಿದ್ಧ್ ಕೃಷ್ಣ (4/126) ನಾಲ್ಕು ವಿಕೆಟ್ ಪಡೆದರೆ, ಆಕಾಶ್ ದೀಪ್ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ, ಟೀಮ್ ಇಂಡಿಯಾ ಐದು ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿತು. ಅಂತಿಮ ಟೆಸ್ಟ್‌ನಲ್ಲಿ ಸಿರಾಜ್ ಎರಡು ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್ ಪಡೆದರು.
ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಿದ ಸಿರಾಜ್ 32.43 ಸರಾಸರಿಯಲ್ಲಿ 23 ವಿಕೆಟ್ ಪಡೆದರು. ಅವರು ಎರಡು ಬಾರಿ ಐದು ವಿಕೆಟ್ ಪಡೆದಿದ್ದಾರೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಿದ ಏಕೈಕ ವೇಗಿ ಸಿರಾಜ್. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಐದು ಪಂದ್ಯಗಳನ್ನು ಆಡಿದ್ದರು, ಆದರೆ ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಗಾಯಗೊಂಡಿದ್ದರು. ಸಿರಾಜ್ ಕೊನೆಯ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕೊನೆಯ ದಿನವೇ 3 ವಿಕೆಟ್ ಪಡೆದು ರೋಚಕ ಗೆಲುವು ತಂದುಕೊಟ್ಟರು.
August 04, 2025 10:45 PM IST