Last Updated:
ಮಂಗಳೂರಿನ ವಾಮಂಜೂರಿನಲ್ಲಿ ಜೈಶಂಕರ್ ಮಿತ್ರ ಮಂಡಲಿ ಹಾಗೂ ಜೈಶಂಕರ್ ಮಾತೃ ಮಂಡಲಿ ಆಯೋಜಿಸಿದ ತುಳುನಾಡ ಕೆಸರ್‌ಡೊಂಜಿ ದಿನದಲ್ಲಿ ಮಕ್ಕಳು, ಯುವಕರು, ಹಿರಿಯರು ಕೆಸರಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಕೆಸರು ಎಂದರೆ ಕಾಲಿಡಲೂ ಹೇಸುವವರು ಕೆಸರುಗದ್ದೆ (Mud) ಯಲ್ಲಿ ಇಳಿದು ಆಟ-ಓಟ-ಕುಣಿದಾಟವೆಂದು ಗಮ್ಮತ್ತು (Enjoy) ಮಾಡಿದರು. ಮಕ್ಕಳು, ಹಿರಿಯರು, ಯುವಕರು, ಯುವತಿಯರೆನ್ನದೆ ದಿನವಿಡೀ ಕೆಸರಾಟದಲ್ಲಿ ಮಿಂದೆದ್ದರು. ಇದು ಜೈಶಂಕರ್ ಮಿತ್ರ ಮಂಡಲಿ ಹಾಗೂ ಜೈಶಂಕರ್ ಮಾತೃ ಮಂಡಲಿ ವತಿಯಿಂದ ಮಂಗಳೂರಿನ (Mangaluru) ಹೊರವಲಯದ ವಾಮಂಜೂರಿನ (Vamanjuru) ತಿರುವೈಲಿನ ಗದ್ದೆಯಲ್ಲಿ ನಡೆದ ತುಳುನಾಡ ಕೆಸರ್‌ಡೊಂಜಿ ದಿನದ ಒಂದು ಝಲಕ್.
ಹೌದು… ಕೆಸರುಗದ್ದೆಯಲ್ಲಿ ಎಲ್ಲರೂ ಸೇರಿ ಮಡಿಕೆ ಒಡೆಯೋದು, ಓಟ, ಹಗ್ಗಜಗ್ಗಾಟವೆಂದು ಗಮ್ಮತ್ತಿನಲ್ಲಿ ಆಡಿದರು. ಕೆಲವರು ಕೆಸರಲ್ಲಿ ಬಿದ್ದರು, ಎದ್ದರು, ಮತ್ತೆ ಓಡಿದರು. ಒಂದು ಕಡೆ ಜಿಟಿಜಿಟಿ ಸುರಿಯುವ ಮಳೆ ಮತ್ತೊಂದೆಡೆ ಆಟ, ಓಟ, ಕುಣಿದಾಟದ ಮಜಾವನ್ನು ಅನುಭವಿಸುತ್ತಾ ಹಿರಿಯರು ಕಿರಿಯರೆನ್ನದೆ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು. ಯುವಜನರು ಕೆಸರುಗದ್ದೆಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದರು. ಒಂದೆಡೆ ಪರಸ್ಪರ ಕೆಸರು ಎರಚಾಡಿಕೊಂಡು ಸಂಭ್ರಮದಲ್ಲಿರುವ ಯುವಕರು ಕಂಡುಬಂದರೆ, ಮತ್ತೊಂದೆಡೆ ಸ್ಥಳೀಯರು, ಗ್ರಾಮಸ್ಥರು ಕೆಸರಾಟದ ಮನೋರಂಜನೆಯನ್ನು ಸವಿಯುತ್ತಿದ್ದರು.
ಯುವ ಜನರಲ್ಲಿ ಕೃಷಿ ಚಟುವಟಿಕೆಗಳು, ಆಚಾರ-ವಿಚಾರಗಳ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶವನ್ನಿರಿಸಿ ಕೆಸರು ಗದ್ದೆಯ ಆಟಗಳ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ತೆಂಗಿನ ಕೊಂಬು ಅರಳಿಸಿ ತುಳು ಸಂಸ್ಕೃತಿಯ ಪ್ರಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೋಳಿ ಅಂಕದ ಅಣಕು ಪ್ರದರ್ಶನದ ಮೂಲಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಆಟಿಯ ಔತಣ ಎಂದಾದರೂ ಸವಿದಿದ್ದೀರಾ?
ಆಟದೊಂದಿಗೆ ಆಟಿ ತಿಂಗಳ ವಿಶೇಷ ಖಾದ್ಯಗಳು ಗಮನಸೆಳೆಯಿತು. ಮಧ್ಯಾಹ್ನದ ವೇಳೆಗೆ ಎಲ್ಲರೂ ತುಳುನಾಡಿನ ಮಳೆಗಾಲದ ತಿನಿಸು ಸವಿಯೂಟವನ್ನು ಸವಿದರು. ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗಿದ್ದ ಗ್ರಾಮೀಣ ಕ್ರೀಡೆ, ತುಳುನಾಡಿನ ಕೃಷಿ ಸಂಸ್ಕೃತಿಯನ್ನು ಯುವ ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಆಟಿ ದಿನದ ಕೆಸರುಗದ್ದೆಯ ಆಟ – ಆಟಿಯ ಊಟ ಎಲ್ಲರ ಗಮನಸೆಳೆಯಿತು.
Mangalore,Dakshina Kannada,Karnataka
July 31, 2025 7:27 AM IST