Last Updated:
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ 7 ವರ್ಷಗಳ ಬಳಿಕ 108 ಕಾಯಿ ಗಣಪತಿ ಹೋಮ, ಮಹಾರಂಗಪೂಜೆ, ಮೂಡಪ್ಪ ಸೇವೆ ವಿಜೃಂಭಣೆಯಿಂದ ನಡೆಯಿತು.
ದಕ್ಷಿಣ ಕನ್ನಡ: ಇತಿಹಾಸ ಪ್ರಸಿದ್ದ ಸೀಮಾಧಿಪತಿ ಮಹತೋಭಾರ ಪುತ್ತೂರು (Putturu) ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಿತ್ಯ ಆರಾಧಿಸಲ್ಪಡುವ ಮಹಾಗಣಪತಿಗೆ ಲೋಕ ಕಲ್ಯಾಣಾರ್ಥವಾಗಿ 108 ಕಾಯಿ ಗಣಪತಿ ಹೋಮ, ಮಹಾರಂಗ ಪೂಜೆ, ಮೂಡಪ್ಪ (Mudappa) ಸೇವೆ ಏಳು ವರ್ಷಗಳ (7 Years) ಬಳಿಕ ನಡೆದಿದೆ. ದೇವಳದ ತಂತ್ರಿ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರ ಉಪಸ್ಥಿತಿಯಲ್ಲಿ ಬೆಳಗ್ಗಿನಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿ, ಸಂಜೆ ಮಹಾರಂಗ ಪೂಜೆಯಾಗಿ ರಾತ್ರಿ ಮೂಡಪ್ಪ ಸೇವೆ ನಡೆಯಿತು. ವಿಶೇಷವಾಗಿ ಅಂಗಾರಕ ಸಂಕಷ್ಟ ಚತುರ್ಥಿ ದಿನ ನಡೆದ ಮೂಡಪ್ಪ ಸೇವೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು (Devotees) ಪಾಲ್ಗೊಂಡರು. ಬೆಳಗ್ಗಿನಿಂದ ರಾತ್ರಿಯ ತನಕ ಗಣಪತಿ ಗುಡಿಗೆ ಪ್ರದಕ್ಷಿಣೆ ಬರುತ್ತಿರುವುದು ವಿಶೇಷವಾಗಿತ್ತು.
ಬೆಳಗ್ಗೆ ವೇ.ಮೂ. ಜಯರಾಮ ಜೋಯಿಷ ಅವರ ವೈದಿಕತ್ವದಲ್ಲಿ 108 ಕಾಯಿ ಗಣಪತಿ ಹೋಮ, ಅರ್ಚಕ ರಾಜೇಶ್ ಭಟ್ ಅವರು ಮಂಡಲದಲ್ಲಿ ಗಣಪತಿಗೆ ಪೂಜೆ ನೆರವೇರಿಸಿದರು. ಶ್ರೀ ಬಾಲಗಣಪತಿಗೆ ಋತ್ವಿಜರಿಂದ ಅಥರ್ವಶೀರ್ಷ ಪಾರಾಯಣ ಪುರಸ್ಪರ ಎಳನೀರು, ಪಂಚಾಮೃತ, ಶುದ್ಧ ಜಲಾಭಿಷೇಕ ಮತ್ತು ಪ್ರರ್ಥಾಕಲಶಾಭಿಷೇಕವನ್ನು ಅರ್ಚಕ ಉದಯ ಭಟ್ ಅವರು ನೆರವೇರಿಸಿದರು. ಮಧ್ಯಾಹ್ನ 108 ಕಾಯಿ ಗಣಪತಿ ಹೋಮದ ಪೂರ್ಣಾಹುತಿಯ ಬಳಿಕ ಶ್ರೀ ಮಹಾಲಿಂಗೇಶ್ವರ ದೇವರಿಗೆ ದೇವಳದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ಅವರಿಂದ ಮಹಾಪೂಜೆ ನಡೆಯಿತು.
ಸಂಜೆ ಸಂಕಲ್ಪ ಪುರಸ್ಪರವಾಗಿ ಬ್ರಹ್ಮಶ್ರೀ ವೇ.ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮಹಾರಂಗಪೂಜೆ ನಡೆಯಿತು. ಗಣಪತಿ ದೇವರಿಗೆ 108 ಅಗೇಲು ಹಾಕಿ ಸೇವೆ ನಡೆಯಿತು. ಬಳಿಕ ಗಣಪತಿ ಗರ್ಭಗುಡಿಯಲ್ಲಿ ದೇವರ ಸುತ್ತ ಕಬ್ಬಿನ ಜಲ್ಲೆಯಿಂದ ಬೇಲಿ ನಿರ್ಮಿಸಿ ಮೂಡಪ್ಪವನ್ನು ಗಣಪತಿ ದೇವರ ನಾಸಿಕದವರೆಗೆ ಸಮರ್ಪಣೆ ಮಾಡಿ, ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿ ಕವಾಟಬಂಧನ ಮಾಡಲಾಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಭಕ್ತರಿಗೆ ಸಂಕಲ್ಪ ಕಾರ್ಯ ನೆರವೇರಿಸಿದರು.
ಮಹಾಗಣಪತಿಗೆ ಮೂಡಪ್ಪ ಸಮರ್ಪಣೆ ಮಾಡಲು ಗಣಪತಿ ದೇವರ ವಿಗ್ರಹದ ಸುತ್ತ ಬೇಲಿ ರೂಪದಲ್ಲಿ ಕಬ್ಬನ್ನು ಇಟ್ಟು ಅದರ ಮಧ್ಯೆ ಅಪ್ಪ ಸಮರ್ಪಣೆ ಮಾಡಲಾಯಿತು. ಬಳಿಕ ಬೆಳ್ಳಿಯ ಕವಚದಿಂದ ಎದುರು ಶೃಂಗರಿಸಲಾಯಿತು. ಅಪ್ಪವನ್ನು ದೇವಳದ ನೈವೇದ್ಯ ಕೋಣೆಯ ಬಳಿಯೇ ತಯಾರಿಸಲಾಯಿತು.
ಮಹಾರಂಗಪೂಜೆ, ಮೂಡಪ್ಪ ಸೇವೆ ಮಾಡಿಸಿದ ಭಕ್ತರಿಗೆ ಸಂಕಲ್ಪದ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಮಾಡಲಾಗಿತ್ತು. ಮೂವರು ಅರ್ಚಕರು ಸಂಕಲ್ಪ ಸೇವೆಯನ್ನು ನೆರವೇರಿಸಿದರು. ಮಹಾರಂಗಪೂಜೆಗೆ ಗಣಪತಿ ದೇವರ ಗುಡಿಯ ಎದುರು ಇಡಲಾಗಿದ್ದ ಅಗೇಲು ವ್ಯವಸ್ಥೆಯ ಕೊನೆಯಲ್ಲಿ ಸಂಕಲ್ಪವನ್ನು ದೇವಳದ ಪ್ರಧಾನ ಅರ್ಚಕ ಎ.ವಸಂತ ಕುಮಾರ ಕೆದಿಲಾಯ ಅವರು ನೆರವೇರಿಸಿದರು.ಮಹಾರಂಗಪೂಜೆ ಸೇವಾರ್ಥಿಗಳಿಗೆ ತುಪ್ಪದ ದೀಪ ಹಚ್ಚುವ ಅವಕಾಶ ಕಲ್ಪಿಸಿ ಬಳಿಕ ಸಂಕಲ್ಪ ಮಾಡಲಾಯಿತು.ದೇವಳದ ಗೋಪುರದಲ್ಲಿ ಮೂಡಪ್ಪ ಸೇವೆ ಸಂಕಲ್ಪ ಮತ್ತು ಸಂಜೆ ಬೆಳಗ್ಗಿನ ಮಹಾಗಣಪತಿ ಹೋಮ ಪ್ರಸಾದ ವಿತರಣೆ ನಡೆಯಿತು.ರಾತ್ರಿ ಮಹಾರಂಗಪೂಜೆಯ ಪ್ರಸಾದ ವಿತರಣೆ ನಡೆಯಿತು.ದೇವಳದ ಅರ್ಚಕರು, ಪರಿಚಾರಕರು, ನಿತ್ಯ ಕರಸೇವಕರು ಜೊತೆಯಾಗಿ ವೈದಿಕರಿಗೆ ಮತ್ತು ವ್ಯವಸ್ಥೆಯ ದೃಷ್ಟಿಯಲ್ಲಿ ತಕ್ಷಣ ಸ್ಪಂದಿಸಿ ಸಹಕಾರ ನೀಡುತ್ತಿದ್ದರು.ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರವೀಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka