ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಗೆ ತುಂಬಾ ಪ್ರಾಮುಖ್ಯತೆ ಇದ್ದು, ಇಲ್ಲಿರುವ ಅನೇಕ ದೇವಾಲಯಗಳು, ಮಂದಿರಗಳು ಸಾಕ್ಷಿ. ಹಾಗೆಯೇ ಈ ಸೀಮೆಯ ನಾಲ್ಕು ದೇವಾಲಯಗಳ ಪಟ್ಟಿಯಲ್ಲಿ ಅಡೂರು, ಮಧೂರು, ಮುಜುಂಗಾವು, ಕುಂಬಳೆಗೂ ತುಂಬಾ ಪ್ರಾಮುಖ್ಯತೆಗಳಿವೆ. ಮುಜುಂಗಾವು ಪಾರ್ಥಸಾರಥಿ ದೇವಾಲಯ, ಕಾವು, ಮುಜುಂಗರೆ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ.
ಪುರಾಣಗಳಲ್ಲಿ ಹೇಳುವಂತೆ, ಸೂರ್ಯವಂಶದ ಮಾಂಧಾತ ರಾಜನ ಮಗನಾದ ಮುಚುಕುಂದ ಅರಸು ಪ್ರಬಲನಾದುದರಿಂದ ದೇವತೆಗಳು ಮುಚುಕುಂದ ರಾಜನ ಸಹಾಯ ಯಾಚಿಸುತ್ತಿದ್ದರು. ಆತನ ಪರಾಕ್ರಮಕ್ಕೆ ಮನಸೋತ ದೇವತೆಗಳು ಮುಚುಕುಂದನನ್ನು ಅದೆಷ್ಟೋ ಯುದ್ಧಗಳಲ್ಲಿ ದೇವತೆಗಳ ಸೇನಾನಿಯನ್ನಾಗಿ ಮಾಡಿದ್ದರು. ಹೀಗೆ ಹಲವಾರು ಸಮಯ ಕಳೆಯಲು ಮುಚುಕುಂದ ಅರಸನು ದೇವ ಸೇನಾನಿಯ ಪಟ್ಟವನ್ನು ಸುಬ್ರಹ್ಮಣ್ಯನಿಗೆ ಬಿಟ್ಟುಕೊಟ್ಟು ಇಲ್ಲಿನ ಕಾವೇರಿ ತೀರ್ಥದ ಪ್ರಶಾಂತ ಸ್ಥಳದಲ್ಲಿ ವಿಶ್ರಾಂತಿಗೆ ಹೊಂದಿಕೊಂಡು ಕಠಿಣ ತಪಸ್ಸನ್ನಾಚರಿಸಿದ.
ಹೀಗಿರುವಾಗ ಶ್ರೀಕೃಷ್ಣನು ವಿಹಾರಾರ್ಥವಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿರುವಾಗ ಹಿಂಬಾಲಿಸಿ ಬಂದ ಕಾಲಯವನನು ಗುಹೆಯೊಳಗೆ ತಪಸ್ಸುಮಾಡುತ್ತಿದ್ದ ಮುಚುಕುಂದ ಮುನಿಯನ್ನು ಶ್ರೀಕೃಷ್ಣನೆಂದು ಭಾವಿಸಿ ಕಾಲಿನಿಂದ ಒದ್ದನಂತೆ. ಮುಚುಕುಂದ ಕಣ್ಣು ತೆರೆದಾಗ ಕಾಲಯವನ ಭಸ್ಮನಾದನು. ಆಗ ಪ್ರತ್ಯಕ್ಷನಾದ ಶ್ರೀಕೃಷ್ಣನಿಗೆ ಮುಚುಕುಂದನು ಮುಳ್ಳುಸೌತೆಯನ್ನು ಅರ್ಪಿಸಿದ ಎಂದು ಪ್ರತೀತಿಯಿದೆ.
ಈ ಕ್ಷೇತ್ರದಲ್ಲಿ ಈಗಲೂ ಮುಳ್ಳುಸೌತೆ ಸಮರ್ಪಣೆ ವಿಶೇಷ. ಮುಚುಕುಂದ ಕೇಳಿಕೊಂಡಂತೆ ಶ್ರೀಕೃಷ್ಣ ಇಲ್ಲಿ ನೆಲೆ ನಿಂತಿರುವುದಾಗಿ ಹೇಳಲಾಗಿದೆ. ಕಾವು ಎಂಬ ಪದಕ್ಕೆ ಕೋಪ, ಸಿಟ್ಟು ಎಂಬ ಅರ್ಥಗಳಿವೆ. ಮುಚುಕುಂದನಿಗೆ ಕಾವು ಏರಿ ಕೋಪದಿಂದ ಕಾಲಯಮನನ್ನು ಭಸ್ಮಮಾಡಿದ ಸ್ಥಳ ಎಂಬ ಅರ್ಥದಲ್ಲಿ “ಮುಚುಕುಂದ ಕಾವು” ಅನಂತರ ಮುಜುಂಗಾವು ಎಂದು ಕರೆಯಲ್ಪಟ್ಟಿತು. ಶ್ರೀಕೃಷ್ಣನನ್ನು ಕರೆದು ಪ್ರಾರ್ಥಿಸಿದ ಕಾರಣ “ಮುಚುಕುಂದ ಕೆರೆ” ಎಂಬ ಹೆಸರು ಬಂದು ಅದುವೇ ಕ್ರಮೇಣ ಮುಜುಂಗರೆ ಆಯಿತು ಎಂದೂ ಕಥೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕ್ಷೇತ್ರದಲ್ಲಿರುವ ದಕ್ಷಿಣ ಗಂಗೆ ಎಂಬ ಹೆಸರಿನ ಕಾವೇರಿ ಸಾನಿಧ್ಯ ತೀರ್ಥಸ್ನಾನ ಇಲ್ಲಿಯ ವಿಶೇಷ. ಇದನ್ನು ಮುಚುಕುಂದ ತೀರ್ಥ ಎಂದೂ ಕರೆಯುತ್ತಾರೆ. ಧ್ಯಾನ ಮಗ್ನರಾಗಿ 3 ಬಾರಿ ಈ ತೀರ್ಥದಲ್ಲಿ ಮುಳುಗಿ ಏಳುವುದರಿಂದ ಶಾರೀರಿಕ ತೊಂದರೆಗಳಾದ ಬೆನ್ನುಮುಳ್ಳು, ಕೆಡು, ಕಾಲಿನ ಆಣಿ, ಸಿಬ್ಬಿ ಇತ್ಯಾದಿಗಳು ಗುಣ ಹೊಂದುತ್ತದೆ. ತೀರ್ಥಸ್ನಾನ ಮಾಡುವ ಭಕ್ತಾದಿಗಳು ಮೊದಲು ಮನೆಯಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ ಬಂದು ಮುಷ್ಠಿ ಅಕ್ಕಿ ಮತ್ತು ಹುರುಳಿಯನ್ನು ಹಿಡಿದುಕೊಂಡು ಕೆರೆಗೆ ಅರ್ಪಿಸಬೇಕು. ಅನಂತರ ಪೂರ್ವಾಭಿಮುಖವಾಗಿ 3 ಬಾರಿ ಮುಳುಗಿ ಏಳಬೇಕು. ಮತ್ತೆ 1 ಮುಷ್ಠಿ ಅಕ್ಕಿ, ಹುರುಳಿಯನ್ನು ಸ್ವಲ್ಪ ಸ್ವಲ್ಪವೇ ಕೆರೆಗೆ ಅರ್ಪಿಸುತ್ತಾ 3 ಪ್ರದಕ್ಷಿಣೆ ಬರಬೇಕು. ಬಳಿಕ ಉಳಿದ ಅಕ್ಕಿ, ಹುರುಳಿ ಮಿಶ್ರಣವನ್ನು ದೇಗುಲದ ಮುಂಭಾಗದ ಕೊಪ್ಪರಿಗೆಯಲ್ಲಿ ಹಾಕಬೇಕು.
ಹುರುಳಿ-ಅಕ್ಕಿಯ ಸಮರ್ಪಣೆಯ ಹಿಂದಿದೆ ಆರೋಗ್ಯ ಸಂಕಲ್ಪದ ತತ್ವ
ಪ್ರತೀ ವರ್ಷ ತುಲಾಸಂಕ್ರಮಣದಂದು ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮಿಂದು ಪುನೀತರಾಗುತ್ತಾರೆ. ಈ ಹುರುಳಿ ಮತ್ತು ಬೆಳ್ತಿಗೆ ಅಕ್ಕಿಯ ಮಿಶ್ರಣವನ್ನು ಉಪಯೋಗಿಸುವುದಕ್ಕೂ ವಿಶೇಷ ಅರ್ಥವಿದೆ. ನವಗ್ರಹದಲ್ಲಿ ಕೇತುವೂ ಒಬ್ಬನಾಗಿದ್ದು. ಕೇತುವು ರೋಗದ ಅಧಿ ದೇವತೆಯೆಂಬ ನಂಬಿಕೆಯಿದೆ. ಕೇತುವಿಗೆ ಪ್ರಿಯವಾದ ಧಾನ್ಯ ಹುರುಳಿ. ಆತನ ಅನುಗ್ರಹ ದೊರಕಿ ರೋಗ ಮುಕ್ತರಾಗಲು ಹುರುಳಿಯ ಸಮರ್ಪಣೆಗೆ ಔಚಿತ್ಯಪೂರ್ಣವಾಗಿದೆ. ಅಂತೆಯೇ ಶ್ರೀದೇವಿಗೆ ಅಂದರೆ ಕಾವೇರಮ್ಮನಿಗೆ ಬೆಳ್ಳಿಗೆ ಅಕ್ಕಿಯೆಂದರೆ ಪ್ರೀತಿ. ಆ ಅಮ್ಮನ ಅನುಗ್ರಹಕ್ಕಾಗಿ ಬೆಳ್ತಿಗೆ ಅಕ್ಕಿಯನ್ನು ತೀರ್ಥಸ್ನಾನದಲ್ಲಿ ಉಪಯೋಗಿಸಲಾಗುತ್ತದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
October 19, 2025 9:39 AM IST