Last Updated:
ದಕ್ಷಿಣಕನ್ನಡದ ನರಹರಿ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ದಿನ ಪುಣ್ಯಸ್ನಾನ, ವಿಶೇಷ ಪೂಜೆ, ಮತ್ತು ಹಗ್ಗ ಹರಕೆ ಸಂಪ್ರದಾಯವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. 1000 ಅಡಿ ಏರಿ, ಕೆರೆಯಲ್ಲಿ ಮುಳಗಿ, ಪಾಪ ಪರಿಹಾರ ನಂಬಿಕೆ.
ದಕ್ಷಿಣಕನ್ನಡ: ಹಿಂದೂ ಸಂಪ್ರದಾಯದಲ್ಲಿ( Hindu Tradition) ಆಯಾ ಕಾಲಕ್ಕೆ ಆಯಾ ಆಚರಣೆಗಳನ್ನು ರೂಢಿಸಿ ಜನಜೀವನಕ್ಕೆ ಅಧ್ಯಾತ್ಮ- ಆರೋಗ್ಯದ ಸಂಯೋಗ (Combine) ಮಾಡಿಸಿದ್ದಾರೆ ಹಿರಿಯರು. ಕರಾವಳಿಯಲ್ಲಿ ಅದು ತುಸು ಹೆಚ್ಚೇ ಎನ್ನಬಹುದು. ಕರಾವಳಿ ಭಾಗದಲ್ಲಿ ಇಂದು ಎಲ್ಲೆಡೆ ಆಟಿ ಅಮಾವಾಸ್ಯೆ (ಆಷಾಢ ಅಮಾವಾಸ್ಯೆ ) ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಆಷಾಢ ಅಮಾವಾಸ್ಯೆಯ ಈ ದಿನ ಶಿವಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿದಲ್ಲಿ ಎಲ್ಲಾ ಪಾಪಗಳು (Sins) ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಹಿನ್ನಲೆಯಲ್ಲಿ ಈ ಭಾಗದ ಜನ ಶಿವಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ (Special Worship) ನೆರವೇರಿಸುತ್ತಾರೆ. ಜಿಲ್ಲೆಯ ಇಂತಹ ವಿಶೇಷ ಪೂಜೆ ನೆರವೇರಿಸಲ್ಪಡುವ ಶಿವಕ್ಷೇತ್ರಗಳಲ್ಲಿ ನರಹರಿ ಸದಾಶಿವ ದೇವಸ್ಥಾನವೂ ಒಂದಾಗಿದ್ದು, ಇಲ್ಲಿ ಶಿವನಿಗೆ ಹಗ್ಗವನ್ನು ಹರಕೆಯಾಗಿ ನೀಡುವುದು ಇಲ್ಲಿನ ವಿಶೇಷತೆಯಾಗಿದೆ.
ಸಮುದ್ರಮಟ್ಟದಿಂದ ಸುಮಾರು 1000 ಅಡಿ ಎತ್ತರದಲ್ಲಿರುವ ನರಹರಿ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆಯ ಸಡಗರ ಮನೆ ಮಾಡಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಈ ಎತ್ತರದ ಬೆಟ್ಟದ ಮೇಲೆ ಇರುವ ಕೆರೆಗಳಲ್ಲಿ ಪುಣ್ಯಸ್ನಾನ ನೆರವೇರಿಸಿದರೆ ಪಾಪಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಹಿನ್ನಲೆಯ ಈ ದಿನದಲ್ಲಿ ಸಾವಿರಾರು ಸಂಖ್ಯೆಯ ಜನ ಇಲ್ಲಿ ಬಂದು ಪುಣ್ಯಸ್ನಾನ ನೆರವೇರಿಸುತ್ತಾರೆ.
ಪ್ರಕೃತಿಯ ಮಡಿಲಲ್ಲಿರುವ ಈ ಕ್ಷೇತ್ರದಲ್ಲಿ ಈ ದೇವಸ್ಥಾನವು ಪಾಂಡವರ ಮೂಲಕ ಪ್ರತಿಷ್ಠಾಪಿಸಲ್ಪಟ್ಟಿತ್ತು ಎನ್ನುವ ಪ್ರತೀತಿಯಿದೆ. ಕೌರವರೊಂದಿಗೆ ಯುದ್ಧ ಜಯಿಸಿದ ಬಳಿಕ ಶ್ರೀಕೃಷ್ಣನ ಆಜ್ಞೆಯಂತೆ ಉತ್ತರ ಭಾರತದ ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ನೆರವೇರಿಸಿದ ಬಳಿಕ ದಕ್ಷಿಣಕ್ಕೆ ಬಂದ ಸಂದರ್ಭದಲ್ಲಿ ಪಾಂಡವರು ಒಂದು ದಿನ ಈ ಬೆಟ್ಟದಲ್ಲಿ ತಂಗಿದ್ದರು. ಶ್ರೀಕೃಷ್ಣ ಪಾಂಡವರಿಗಾಗಿ ಶಂಖ,ಚಕ್ರ,ಗಧಾ,ಪದ್ಮ ಎನ್ನುವ ನಾಲ್ಕು ನೀರಿನ ಕುಂಡಗಳನ್ನೂ ಇಲ್ಲಿ ನಿರ್ಮಿಸಿದ್ದು, ಇದೇ ಕುಂಡಗಳಲ್ಲಿ ಭಕ್ತರು ಆಟಿ ಅಮಾವಾಸ್ಯೆಯಂದು ಪುಣ್ಯಸ್ನಾನ ನೆರವೇರಿಸುತ್ತಾರೆ. ವರ್ಷ ಪೂರ್ತಿ ಬತ್ತದೇ ಇರುವ ನೀರಿನ ಕುಂಡಗಳಿಗೆ ಇಲ್ಲಿ ಅತ್ಯಂತ ಮಹತ್ವದ ಸ್ಥಾನವಿದ್ದು, ಅಮಾವಾಸ್ಯೆ ದಿನ ಇಲ್ಲಿ ಪುಣ್ಯಸ್ನಾನ ಮಾಡಿದಲ್ಲಿ ಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ.
ಅಸ್ತಮಾ ಮೊದಲಾದ ಗುಣಪಡಿಸಲಾಗದ ಖಾಯಿಲೆಗಳಿಗೆ ಈ ಕ್ಷೇತ್ರಕ್ಕೆ ಹಗ್ಗವನ್ನು ಹರಕೆಯಾಗಿ ನೀಡುವ ವಿಶೇಷ ಸೇವೆ ಇಲ್ಲಿದೆ. ಎಲ್ಲಾ ಕಡೆಗಳಲ್ಲಿ ಅಸ್ತಮಾ ಖಾಯಿಲೆಗೆ ಚಿಕಿತ್ಸೆ ಮಾಡಿದರೂ ಗುಣಮುಖವಾಗದ್ದು, ಇಲ್ಲಿಗೆ ಬಂದು ಹರಕೆ ನೀಡಿದವರಿಗೆ ರೋಗ ಗುಣಮುಖವಾಗಿದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. ಇದೇ ಕಾರಣಕ್ಕಾಗಿ ಇಲ್ಲಿ ಆಷಾಢ ಅಮಾವಾಸ್ಯೆಯ ದಿನ ಪುಣ್ಯಸ್ನಾನಕ್ಕೆ ಬರುವ ಭಕ್ತರು ಹಗ್ಗವನ್ನು ನೀಡಿ ಹರಕೆ ಸಂದಾಯ ಮಾಡುವ ವಿಧಿ-ವಿಧಾನಗಳೂ ನಡೆಯುತ್ತದೆ. ತುಳುನಾಡಿನ ಧಾರ್ಮಿಕ ಆಚರಣೆಯಲ್ಲಿ ಈ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಸ್ಥಾನವೂ ಇದೆ.
ತ್ರಿಕಾಲ ಪೂಜೆಯ ವಿಶೇಷ, ಜೀರ್ಣೋದ್ಧಾರದ ಸಂಕಲ್ಪ
ಪಾಂಡವರಿಂದ ಸ್ಥಾಪನೆಗೊಂಡಿದೆ ಎಂದು ಪ್ರತೀತಿಯಿರುವ ಈ ಕ್ಷೇತ್ರದಲ್ಲಿ ಈ ಹಿಂದೆ ಒಂದು ಹೊತ್ತಿನ ಪೂಜೆ ನೆರವೇರುತ್ತಿತ್ತು. ಆ ಬಳಿಕ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಬಳಿಕ ಇಲ್ಲಿ ಮೂರು ಹೊತ್ತು ದೇವರಿಗೆ ಪೂಜೆ ನೆರವೇರಲು ಆರಂಭವಾಗಿದೆ. ಇದೀಗ ಕ್ಷೇತ್ರಕ್ಕೆ ಜೀರ್ಣೋದ್ಧಾರ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಜೀರ್ಣೋದ್ಧಾರ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
July 25, 2025 7:45 AM IST