New Aadhaar App: ಇನ್ಮುಂದೆ ಆಧಾರ್‌ ಕಾರ್ಡ್‌ ಪರ್ಸ್‌ನಲ್ಲಿ ಇರಲೇಬೇಕಂತಿಲ್ಲ: ಈ ಹೊಸ ಆ್ಯಪ್ ನಿಮ್ಮ ಮೊಬೈಲ್‌ನಲ್ಲಿದ್ರೆ ಸಾಕು | New Aadhaar App Puts Selective Sharing and Consent Control at Your Fingertips |

New Aadhaar App: ಇನ್ಮುಂದೆ ಆಧಾರ್‌ ಕಾರ್ಡ್‌ ಪರ್ಸ್‌ನಲ್ಲಿ ಇರಲೇಬೇಕಂತಿಲ್ಲ: ಈ ಹೊಸ ಆ್ಯಪ್ ನಿಮ್ಮ ಮೊಬೈಲ್‌ನಲ್ಲಿದ್ರೆ ಸಾಕು | New Aadhaar App Puts Selective Sharing and Consent Control at Your Fingertips |

ಭಾರತದಲ್ಲಿ ಡಿಜಿಟಲ್ ಗುರುತಿನ ಬಳಕೆಯನ್ನು ಇನ್ನಷ್ಟು ಸುಲಭ ಮತ್ತು ಸುರಕ್ಷಿತಗೊಳಿಸುವ ಉದ್ದೇಶದಿಂದ ಪರಿಚಯಿಸಲಾದ ಹೊಸ ಆಧಾರ್ ಅಪ್ಲಿಕೇಶನ್, ಗುರುತಿನ ಪರಿಶೀಲನೆಯನ್ನು ಪರಿಣಾಮಕಾರಿ ವಿಧಾನದಲ್ಲಿ ಪರಿಚಯಿಸುತ್ತಿದೆ.

ಇನ್ಮುಂದೆ ಆಧಾರ್ ಕಾರ್ಡ್‌ ಅನ್ನು ಜೊತೆಗೆ ಇಟ್ಟುಕೊಳ್ಳೋ ಅಗತ್ಯವಿಲ್ಲ

ಈ ಅಪ್ಲಿಕೇಶನ್ ಮೂಲಕ ಇನ್ನು ಮುಂದೆ ಆಧಾರ್ ಕಾರ್ಡ್‌ನ ಭೌತಿಕ ಪ್ರತಿಯನ್ನು ಕೊಂಡೊಯ್ಯುವ ಅಗತ್ಯವಿಲ್ಲ. ಅಗತ್ಯವಿರುವಷ್ಟು ಮಾಹಿತಿಯನ್ನು ಮಾತ್ರ ಹಂಚಿಕೊಂಡು, ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲೂ ತಮ್ಮ ಗುರುತನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ದೃಢೀಕರಿಸಬಹುದಾಗಿದೆ.

ಇದರಿಂದ ಸಮಯದ ಉಳಿತಾಯವಾಗುವುದರ ಜೊತೆಗೆ, ದಾಖಲೆ ಕಳೆದುಕೊಳ್ಳುವ ಅಥವಾ ದುರುಪಯೋಗವಾಗುವ ಭಯವೂ ಬಳಕೆದಾರರಿಗೆ ಕಡಿಮೆಯಾಗಲಿದೆ.

ಬೆರಳ ತುದಿಯಲ್ಲಿ ಇರುತ್ತದೆ ʻಓಕೆʼ ಮತ್ತು ʻಕಂಟ್ರೋಲ್‌ʼ  

ಈ ಅಪ್ಲಿಕೇಶನ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಆಯ್ದ ಡೇಟಾ ಹಂಚಿಕೆ ವ್ಯವಸ್ಥೆ. ಪರಿಸ್ಥಿತಿಗೆ ಅನುಗುಣವಾಗಿ ಬಳಕೆದಾರರು ತಮ್ಮ ಹೆಸರು, ಫೋಟೋ ಅಥವಾ ವಿಳಾಸದಂತಹ ಯಾವ ಆಧಾರ್ ವಿವರಗಳನ್ನು ಹಂಚಿಕೊಳ್ಳಬೇಕೆಂದು ತಾವೇ ನಿರ್ಧರಿಸಬಹುದು.

ಇದರಿಂದ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತಷ್ಟು ಬಲವಾಗುವುದರ ಜೊತೆಗೆ, ಬಳಕೆದಾರರಿಗೆ ತಮ್ಮ ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣ ದೊರೆಯುತ್ತದೆ.

ಇದೇ ವೇಳೆ, ಅಪ್ಲಿಕೇಶನ್ ಆಫ್‌ಲೈನ್ ಹಾಗೂ QR-ಆಧಾರಿತ ಪರಿಶೀಲನೆಯನ್ನು ಸಹ ಬೆಂಬಲಿಸುವುದರಿಂದ ಹೋಟೆಲ್‌ಗಳು, ಬ್ಯಾಂಕ್‌ಗಳು, ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿಗಳಂತಹ ಸ್ಥಳಗಳಲ್ಲಿ ಆಧಾರ್ ದೃಢೀಕರಣ ಪ್ರಕ್ರಿಯೆ ತ್ವರಿತ, ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿಯಾಗಲಿದೆ.

ಜೀವನ ಸುಲಭಗೊಳಿಸಲು ವಿನ್ಯಾಸಗೊಳಿಸಿದ ಆ್ಯಪ್

ಕುಟುಂಬ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಅಪ್ಲಿಕೇಶನ್ ಒಂದೇ ಮೊಬೈಲ್ ಸಾಧನದಲ್ಲಿ ಬಹು ಆಧಾರ್ ಪ್ರೊಫೈಲ್‌ಗಳನ್ನು ನಿರ್ವಹಿಸಲು ಅವಕಾಶ ಒದಗಿಸುತ್ತದೆ. ಇದರ ಮೂಲಕ ಕುಟುಂಬ ಸದಸ್ಯರ ಆಧಾರ್ ಸಂಬಂಧಿತ ಸೇವೆಗಳನ್ನು ಒಂದೇ ಆ್ಯಪ್‌ನಿಂದ ನಿರ್ವಹಿಸಬಹುದು.

ಇದರಿಂದ ಅನೇಕ ಆಧಾರ್ ಸೇವೆಗಳು ಆನ್‌ಲೈನ್ ಮೂಲಕವೇ ಲಭ್ಯವಾಗುವುದರಿಂದ ಭೌತಿಕ ದಾಖಲೆಗಳ ಅವಶ್ಯಕತೆ ಕಡಿಮೆಯಾಗುತ್ತದೆ ಹಾಗೂ ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವೂ ಇರೋದಿಲ್ಲ.

ಇದರ ಜೊತೆಗೆ, ಬಯೋಮೆಟ್ರಿಕ್ ರಕ್ಷಣೆ, ದೃಢೀಕರಣ ಇತಿಹಾಸದ ಮಾಹಿತಿ ಹಾಗೂ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳು ಬಳಕೆದಾರರ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಆಧಾರ್ ಬಳಕೆಯನ್ನು ಇನ್ನಷ್ಟು ವಿಸ್ತರಿಸಬಹುದು.

ಹೊಸ ಆಧಾರ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದ್ದು, ಬಹು ಭಾರತೀಯ ಭಾಷೆಗಳಿಗೆ ಬೆಂಬಲ ಒದಗಿಸುವ ಮೂಲಕ ದೇಶಾದ್ಯಂತ ಬಳಕೆದಾರರಿಗೆ ಸುಲಭ ಪ್ರವೇಶವನ್ನು ಖಚಿತಪಡಿಸಿದೆ.

ಡಿಜಿಟಲ್ ಇಂಡಿಯಾಕ್ಕೆ ಮತ್ತೊಂದು ಬಲ  

ಹೊಸ ಆಧಾರ್ ಅಪ್ಲಿಕೇಶನ್ ಯುಪಿಐ, ಡಿಜಿಲಾಕರ್ ಮತ್ತು ಇತರ ಡಿಜಿಟಲ್ ಸೇವೆಗಳೊಂದಿಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ದೊಡ್ಡ ದೃಷ್ಟಿಕೋನಕ್ಕೆ ಹೊಂದಿಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌಪ್ಯತೆಯನ್ನು ಕಾಪಾಡುತ್ತಲೇ ಗುರುತಿನ ಪರಿಶೀಲನೆಯನ್ನು ಸರಳಗೊಳಿಸುವ ಮೂಲಕ ಸೇವಾ ವಿತರಣೆಯನ್ನು ಸುಧಾರಿಸುವುದು, ಪಾರದರ್ಶಕತೆಯನ್ನು ಹೆಚ್ಚಿಸುವುದು ಹಾಗೂ ನಾಗರಿಕರ ಜೀವನಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸಬಹುದಾಗಿದೆ ಎಂದಿದ್ದಾರೆ.

ಡಿಜಿಟಲ್ ಯುಗದಲ್ಲಿ ಸುರಕ್ಷಿತ ಮತ್ತು ಸರಳ ಗುರುತಿನ ವ್ಯವಸ್ಥೆಯತ್ತ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.