Last Updated:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯವು ಗೇರು ಹಣ್ಣು ಮತ್ತು ಬೀಜದಿಂದ ಪೌಷ್ಟಿಕ ಕುಕ್ಕೀಸ್ ಮತ್ತು ಫ್ರೂಟ್ ಬಾರ್ ಬಿಡುಗಡೆ ಮಾಡಿದೆ.
ದಕ್ಷಿಣ ಕನ್ನಡ: ಬೇಕರಿ ಪದಾರ್ಥಗಳು ಆರೋಗ್ಯಕ್ಕೆ (Health) ಹಾನಿಕಾರಕ ಎಂದು ತಿಳಿದರೂ, ಅದರ ಬಗ್ಗೆನೇ ಹೆಚ್ಚಿನವರಿಗೆ ಒಲವು. ಈ ಬೇಕರಿ ಪದಾರ್ಥಗಳನ್ನು ಸೇವಿಸಿದಲ್ಲಿ ದೇಹಕ್ಕೆ ಉತ್ತಮ ಪೌಷ್ಟಿಕಾಂಶ (Nutrition) ದೊರಕುವ ಬದಲು ಹೆಚ್ಚು ಹೆಚ್ಚು ಹಾನಿಕಾರಕ ಪದಾರ್ಥಗಳೇ ನಮ್ಮ ದೇಹ ಸೇರಿಕೊಳ್ಳುತ್ತವೆ. ಇಂತಹ ಸ್ಥಿತಿಯಿಂದ ಜನ ದೂರ ಬರಬೇಕಾದಲ್ಲಿ ಬೇಕರಿ ಪದಾರ್ಥಗಳಿಗೆ ಪರ್ಯಾಯವಾದ ಬೇಕರಿ ಉತ್ಪನ್ನಗಳು ಮಾರುಕಟ್ಟೆಗೆ (Market) ಇಳಿಯುವ ಅನಿವಾರ್ಯತೆಯೂ ಇದೆ. ಈನಿಟ್ಟಿನಲ್ಲಿ ನಿರಂತರ ಸಂಶೋಧನೆಗಳನ್ನ ಮಾಡಿಕೊಂಡು ಬಂದಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನಲ್ಲಿ (Puttur) ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಈಗ ಗೇರು ಆಧಾರಿತ ಹೊಸ ಉತ್ಪನ್ನವೊಂದನ್ನು ಸಂಶೋಧಿಸಿ ,ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಏನದು ನೋಡಿ.
ಗೇರು ಹಣ್ಣಿನ ಹಿಂಡಿ ಬಳಸಿ ತಯಾರಿಸಿದ ಕುಕ್ಕೀಸ್ ಮತ್ತು ಗೇರು ಬೀಜದ ಮೊಳಕೆ ಬಳಸಿ ತಯಾರಿಸಿದ ಕುಕ್ಕೀಸ್, ಬಿಸ್ಕತ್ತು ಸಿದ್ಧಪಡಿಸಲಾಗಿದ್ದು, ಈ ತಂತ್ರಜ್ಞಾನವನ್ನು ಬಳಸಿಕೊಂಡು ಇಂದು ಕೆಲವು ಸ್ವ ಉದ್ಯೋಗ ಸಂಸ್ಥೆಗಳು ಈ ಕುಕ್ಕೀಸ್ ಗಳನ್ನ ಮಾರುಕಟ್ಟೆಗೂ ಬಿಡುಗಡೆಗೊಳಿಸಿದೆ.ಎಲ್ಲಾ ವಯೋಮಾನದವರೂ ಇಷ್ಟ ಪಡೋ ಒಂದು ವಸ್ತುವಾಗಿ ಬೇಕರಿ ಉತ್ಪನ್ನಗಳು ಗುರುತಿಸಿಕೊಂಡಿವೆ.
ಹೆಚ್ಚು ಪೌಷ್ಟಿಕಾಂಶದ, ಆರೋಗ್ಯಕಾರಕವಾದ ಬಿಸ್ಕತ್ತು ಮತ್ತು ಕುಕ್ಕೀಸ್ ಗಳನ್ನು ಹಲವು ಸಂಶೋಧನೆಗಳ ಮೂಲಕ ಗೇರು ಸಂಶೋಧನಾ ನಿರ್ದೇಶನಾಲಯ ಸಿದ್ಧಪಡಿಸಿದೆ. ಗೇರು ಹಣ್ಣಿನ ರಸವನ್ನು ಬೇರ್ಪಡಿಸಿದ ಬಳಿಕ ಸಿಗುವ ಗೇರು ಹಣ್ಣಿನ ಹಿಂಡಿಯನ್ನು ಹುಡಿ ಮಾಡಿ, ಅದರ ಕುಕ್ಕೀಸ್ ತಯಾರಿಸಲಾಗಿದೆ. ಅದಲ್ಲದೇ ಮಳೆಗಾಲದ ಸಮಯದಲ್ಲಿ ಗೇರು ಮರದ ಕೆಳಗೆ ಬಿದ್ದ ಬೀಜಗಳು ಮೊಳಕೆಯೊಡೆಯುತ್ತವೆ. ಈ ಮೊಳಕೆಯನ್ನು ಹೆಚ್ಚಾಗಿ ಜನ ಪದಾರ್ಥಕ್ಕೆ ಬಳಸುತ್ತಾರೆ. ಆದರೆ ಇದೇ ಮೊಳಕೆಗಳನ್ನು ಹುಡಿ ಮಾಡಿ, ಅವುಗಳ ಜೊತೆಗೆ ಹುರುಳಿ ಮೊಳಕೆ, ರಾಗಿ ಮೊಳಕೆ, ಹೆಸರು ಮೊಳಕೆಗಳನ್ನು ಸೇರಿಸಿ ಹುಡಿ ಮಾಡಿ ಕುಕ್ಕೀಸ್ ತಯಾರಿಸಲಾಗಿದೆ.
ಈ ಕುಕ್ಕೀಸ್ ಗಳಲ್ಲಿ ಶೇಕಡಾ 12 ರಷ್ಟು ಪ್ರೋಟೀನ್ ಅಂಶದ ಜೊತೆಗೆ ಶೇಕಡಾ 3 ರಷ್ಟು ನಾರಿನ ಅಂಶವೂ ಇದೆ. ಅಲ್ಲದೆ ಈ ಕುಕ್ಕೀಸ್ ಅನ್ನ ಮೈದಾ ಬಳಸದೆ ಗೋಧಿ ಹುಡಿಯನ್ನು ಬಳಸಿ ಸಿದ್ಧಪಡಿಸಲಾಗಿದೆ. ಅತ್ಯಂತ ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಈ ಕುಕ್ಕೀಸ್ ಗಳನ್ನು ಎಲ್ಲಾ ವಯೋಮಾನದವರೂ, ಯಾವುದೇ ಅಂಜಿಕೆಯಿಲ್ಲದೆ ತಿನ್ನಬಹುದಾಗಿದೆ. ಕುಕ್ಕೀಸ್ ತಯಾರಿಯ ತಂತ್ರಜ್ಞಾನ ವನ್ನು ಈಗಾಗಲೇ ಗೇರು ಸಂಶೋಧನಾಲಯ ಕೆಲವು ಸ್ವ ಉದ್ಯೋಗಿಗಳಿಗೆ ನೀಡಿದ್ದು, ತಂತ್ರಜ್ಞಾನಕ್ಕಾಗಿ ಸಣ್ಣ ಪ್ರಮಾಣದ ದರವನ್ನೂ ಪಡೆಯಲಾಗುತ್ತಿದೆ. ಕುಕ್ಕೀಸ್ ತಯಾರಿಕೆಗೆ ಬೇಕಾದ ಎಲ್ಲಾ ರೀತಿಯ ತರಭೇತಿಯನ್ನೂ ಸಂಸ್ಥೆಯಲ್ಲೇ ನೀಡಲಾಗುತ್ತಿದೆ.ಕುಕ್ಕೀಸ್ ಜೊತೆಗೆ ಗೇರು ಹಣ್ಣನ್ನು ಬಳಸಿ ಫ್ರೂಟ್ ಬಾರ್ ಅನ್ನೂ ಸಿದ್ಧಪಡಿಸಲಾಗಿದ್ದು, ಗೇರು ಹಣ್ಣಿನ ಈ ಉತ್ಪನ್ನಗಳಿಗೆ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಯೂ ಇದೆ.
Dakshina Kannada,Karnataka
September 20, 2025 5:59 PM IST