New Year 2026: ಹೊಸ ವರ್ಷದ ವಿಶಸ್ ಬಂದ್ರೆ ಹುಷಾರ್! ವಾಟ್ಸಾಪ್‌ನಲ್ಲಿ ಹೀಗೆ ಮಾಡೋ ಮುನ್ನ ಎಚ್ಚರಿಕೆಯಿಂದಿರಿ | ನ್ಯೂ ಇಯರ್ ವಾಟ್ಸಾಪ್ ಶುಭಾಶಯವೇ ಬ್ಯಾಂಕ್ ಖಾತೆ ಖಾಲಿ ಮಾಡುತ್ತಾ? APK ವಂಚನೆಯ ಸಂಪೂರ್ಣ ಸತ್ಯ | New Year WhatsApp Greeting Scam: How Malicious APK Files Can Drain Your Bank Account | ದೇಶ-ವಿದೇಶ

New Year 2026: ಹೊಸ ವರ್ಷದ ವಿಶಸ್ ಬಂದ್ರೆ ಹುಷಾರ್! ವಾಟ್ಸಾಪ್‌ನಲ್ಲಿ ಹೀಗೆ ಮಾಡೋ ಮುನ್ನ ಎಚ್ಚರಿಕೆಯಿಂದಿರಿ | ನ್ಯೂ ಇಯರ್ ವಾಟ್ಸಾಪ್ ಶುಭಾಶಯವೇ ಬ್ಯಾಂಕ್ ಖಾತೆ ಖಾಲಿ ಮಾಡುತ್ತಾ? APK ವಂಚನೆಯ ಸಂಪೂರ್ಣ ಸತ್ಯ | New Year WhatsApp Greeting Scam: How Malicious APK Files Can Drain Your Bank Account | ದೇಶ-ವಿದೇಶ

ಒಂದು ಕ್ಷಣದ ಅಜಾಗರೂಕತೆ, ಒಂದು ಕ್ಲಿಕ್, ಮತ್ತು ನಿಮ್ಮ ಮೊಬೈಲ್ ಸಂಪೂರ್ಣವಾಗಿ ಹ್ಯಾಕರ್‌ಗಳ ನಿಯಂತ್ರಣಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ, ಇಲ್ಲಿ ಹೊಸ ವರ್ಷದ ಹೆಸರಿನಲ್ಲಿ ಹರಡುತ್ತಿರುವ ವಂಚನೆ ಏನು? ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ? ಮತ್ತು ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ:

ಹೊಸ ವರ್ಷದ ಶುಭಾಶಯದ ಹೆಸರಲ್ಲಿ ವಂಚನೆ:

ಈ ವಂಚನೆ ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಬರುವ ಒಂದು ಸ್ನೇಹಪೂರ್ಣ ಸಂದೇಶದಿಂದ ಆರಂಭವಾಗುತ್ತದೆ. ‘ನಿಮಗಾಗಿ ವಿಶೇಷ ನ್ಯೂ ಇಯರ್ ಗ್ರೀಟಿಂಗ್ ನೋಡಿ’ ಅಥವಾ ‘ನಿಮ್ಮ ಫೋಟೋ ಇರುವ ಹೊಸ ವರ್ಷದ ಶುಭಾಶಯ’ ಎಂಬ ಸಂದೇಶದೊಂದಿಗೆ ಒಂದು ಫೈಲ್ ಅಥವಾ ಲಿಂಕ್ ಬರುತ್ತದೆ. ಈ ಸಂದೇಶಗಳು ಅನೇಕ ಬಾರಿ ಪರಿಚಿತ ವ್ಯಕ್ತಿಗಳ ಖಾತೆಯಿಂದಲೇ ಬರುತ್ತವೆ. ಇದರಿಂದ ಜನರಿಗೆ ಅನುಮಾನ ಬರದೇ, ಫೈಲ್ ಅನ್ನು ಡೌನ್‌ಲೋಡ್ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ.

APK ಫೈಲ್ ಅಂದ್ರೇನು?

APK ಎಂದರೆ ಆಂಡ್ರಾಯ್ಡ್ ಪ್ಯಾಕೇಜ್ ಕಿಟ್. ಇದು ಆಂಡ್ರಾಯ್ಡ್ ಫೋನ್‌ಗಳಲ್ಲಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಬಳಸುವ ಫೈಲ್. ಸಾಮಾನ್ಯವಾಗಿ ನಾವು ಆ್ಯಪ್‌ಗಳನ್ನು ಗೂಗಲ್​ ಪ್ಲೇ ಸ್ಟೋರ್​ ಮೂಲಕ ಸುರಕ್ಷಿತವಾಗಿ ಡೌನ್‌ಲೋಡ್ ಮಾಡುತ್ತೇವೆ. ಆದರೆ ವಾಟ್ಸಾಪ್, SMS ಅಥವಾ ಇಮೇಲ್ ಮೂಲಕ ಬರುವ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡುವುದನ್ನು ಸೈಡ್‌ಲೋಡಿಂಗ್ ಎಂದು ಕರೆಯಲಾಗುತ್ತದೆ. ಇದು ಬಹಳ ಅಪಾಯಕಾರಿಯಾಗಿದೆ.

APK ಇನ್‌ಸ್ಟಾಲ್ ಮಾಡಿದ ನಂತರ ಏನಾಗುತ್ತದೆ?

ದಿ ಇಂಡಿಯನ್ ಎಕ್ಸ್ಪ್ರೆಸ್​ ವರದಿ ಮಾಡಿರುವಂತೆ, ಇಂತಹ APK ಆ್ಯಪ್ ಇನ್‌ಸ್ಟಾಲ್ ಮಾಡಿದ ತಕ್ಷಣವೇ ಅಸಾಮಾನ್ಯ ಅನುಮತಿಗಳನ್ನು ಕೇಳುತ್ತದೆ. ಸಂದೇಶಗಳನ್ನು ಓದಲು ಅನುಮತಿ, ನೋಟಿಫಿಕೇಶನ್‌ಗಳನ್ನು ನೋಡುವ ಅನುಮತಿ, ಸಂಪರ್ಕ ಪಟ್ಟಿಗೆ ಪ್ರವೇಶ ಇತ್ಯಾದಿ. ಒಂದು ಶುಭಾಶಯ ಆ್ಯಪ್‌ಗೆ ಇವೆಲ್ಲಾ ಅನುಮತಿಗಳು ಏಕೆ ಬೇಕು ಎಂಬುದನ್ನು ನಾವು ಯೋಚಿಸದೇ ಒಪ್ಪಿಕೊಂಡರೆ, ಅಷ್ಟರಲ್ಲಿ ಅಪಾಯ ಆರಂಭವಾಗುತ್ತದೆ.

ಮಾಲ್‌ವೇರ್ ಹೇಗೆ ಹಾನಿ ಮಾಡುತ್ತದೆ?

ಈ ಮಾಲ್‌ವೇರ್ ಬ್ಯಾಂಕ್ ಮತ್ತು ಯುಪಿಐ ಆ್ಯಪ್‌ಗಳಿಂದ ಬರುವ OTPಗಳನ್ನು ಓದಬಹುದು. ನಿಮ್ಮ ಟ್ರಾನ್ಸಾಕ್ಷನ್ ಅಲರ್ಟ್‌ಗಳನ್ನು ಗಮನಿಸಬಹುದು. ಕೆಲವೊಮ್ಮೆ ನಿಧಾನವಾಗಿ ಸಣ್ಣ ಮೊತ್ತಗಳನ್ನು ಕಟ್ ಮಾಡಿ ಖಾತೆಯನ್ನು ಖಾಲಿ ಮಾಡುತ್ತದೆ, ನಿಮಗೆ ಅನುಮಾನ ಬರದಂತೆ. ಇನ್ನೂ ಅಪಾಯಕಾರಿ ಅಂದ್ರೆ, ನಿಮ್ಮ WhatsApp ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಎಲ್ಲರಿಗೂ ಅದೇ ವಂಚನಾ ಲಿಂಕ್ ಕಳುಹಿಸುತ್ತದೆ.

ತಪ್ಪಾಗಿ ಕ್ಲಿಕ್ ಮಾಡಿದರೆ ಏನು ಮಾಡಬೇಕು?

ಮೊದಲು ಆ ಅನುಮಾನಾಸ್ಪದ ಆ್ಯಪ್ ಅನ್ನು ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿ. ಫೋನ್‌ನ ಇಂಟರ್‌ನೆಟ್ ಸಂಪರ್ಕ ಕಡಿತಗೊಳಿಸಿ. ವಿಶ್ವಾಸಾರ್ಹ ಮೊಬೈಲ್ ಸೆಕ್ಯೂರಿಟಿ ಸ್ಕ್ಯಾನ್ ನಡೆಸಿ. ಮತ್ತೊಂದು ಸಾಧನದಿಂದ ನಿಮ್ಮ ವಾಟ್ಸಾಪ್, ಇಮೇಲ್ ಮತ್ತು ಬ್ಯಾಂಕ್ ಆ್ಯಪ್ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ಬ್ಯಾಂಕ್‌ಗೆ ಮಾಹಿತಿ ನೀಡಿ ಮತ್ತು ಟ್ರಾನ್ಸಾಕ್ಷನ್‌ಗಳನ್ನು ಗಮನಿಸಿ. ನಿಮ್ಮ ಸಂಪರ್ಕಗಳಿಗೆ ಎಚ್ಚರಿಕೆ ನೀಡಿ. cybercrime.gov.in ನಲ್ಲಿ ದೂರು ದಾಖಲಿಸಿ ಅಥವಾ 1930 ಗೆ ಕರೆ ಮಾಡಿ.

ಒಟ್ಟಾರೆಯಾಗಿ ನೀವು ಒಂದು ವಿಷಯವನ್ನಂತು ನಿಯಮ ನೆನಪಿನಲ್ಲಿಡ ಬೇಕು: ಅದುವೇ,  ಯಾವುದೇ ಶುಭಾಶಯಕ್ಕೂ ಆ್ಯಪ್ ಬೇಕಾಗುವುದಿಲ್ಲ. ಶುಭಾಶಯದ ಹೆಸರಿನಲ್ಲಿ ಡೌನ್‌ಲೋಡ್, ಅನುಮತಿ ಅಥವಾ ಸೆಟ್ಟಿಂಗ್ ಬದಲಾವಣೆ ಕೇಳಿದರೆ, ಅದು ಸಂಭ್ರಮವಲ್ಲ, ವಂಚನೆ. ಹೊಸ ವರ್ಷವನ್ನು ಸ್ವಾಗತಿಸುವಾಗ ಜಾಗರೂಕತೆಯೂ ಸಂಭ್ರಮದ ಭಾಗವಾಗಿರಲಿ.