Last Updated:
ಬೆಳ್ತಂಗಡಿ ಎಳನೀರು ಪ್ರದೇಶದ 600ಕ್ಕೂ ಹೆಚ್ಚು ಜನರು 8 ಕಿಮೀ ಅರಣ್ಯ ರಸ್ತೆಯ ಕೊರತೆಯಿಂದ 120 ಕಿಮೀ ಸುತ್ತು ಹೋಗಿ ಅಗತ್ಯ ಸೇವೆಗಳಿಗೆ ಹೋಗಬೇಕಾಗಿದೆ.
ದಕ್ಷಿಣ ಕನ್ನಡ: ಈ ಗ್ರಾಮದ ಜನರದ್ದು ಬದುಕಿಗೆ ಬದುಕು ಅಲ್ಲ, ಸಾವಿಗೂ ಸಾವೂ ಅಲ್ಲ..ಅತ್ತ ಗುಡ್ಡ ಹತ್ತೋಕೂ ಆಗದೇ, ಇತ್ತ ಗುಡ್ಡ ಇಳಿಯೋಕೂ ಆಗದೇ ಸ್ವತಂತ್ರ ಭಾರತದಲ್ಲೂ ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಬೆಳ್ತಂಗಡಿ (Belthangady) ತಾಲೂಕಿನ ಎಳನೀರು (Elaneeru) ಪ್ರದೇಶದ ಜನರ (People) ದುಸ್ಥಿತಿ. ಸ್ವಾತಂತ್ರ್ಯ ಬಂದು 78 ವರ್ಷ ಆದರೂ ಎಳನೀರು ಜನರ ಬದುಕು ಇನ್ನೂ ಕತ್ತಲೆಯಲ್ಲಿದೆ. ಹೆಸರು ಎಳನೀರು ಆದರೂ ಇವರ ಬದುಕಲ್ಲಿ ಸಿಹಿಯಿಲ್ಲ.ಕಾರಣ ಒಂದು ಪಂಚಾಯತ್ ಗೆ (Panchayath) ಹೋಗಬೇಕಾದರೂ ಈ ಜನ 120 ಕೀಲೋ ಮೀಟರ್ ಹೋಗಲೇ ಬೇಕು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯ ಗ್ರಾಮ ಪಂಚಾಯತ್ ನ ಎಳನೀರು ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗ. ಮಲವಂತಿಗೆ ಪಂಚಾಯತ್ ನ ದಿಡುಪೆಯಿಂದ ಎಳನೀರು ಪ್ರದೇಶಕ್ಕೆ ಇರೋದು ಸದ್ಯ ಅರಣ್ಯ ಮಾರ್ಗ..ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ 8 ಕೀಮೀ ರಸ್ತೆಯೇ ಮಲವಂತಿಗೆ ಮತ್ತು ಎಳನೀರು ಪ್ರದೇಶಕ್ಕೆ ಸಂಪರ್ಕಕೊಂಡಿ. ಆದರೆ ರಸ್ತೆ ಅಭಿವೃದ್ಧಿ ಯಾಗದೇ ಜನರ ಸಂಚಾರಕ್ಕೆ ಕಷ್ಟವಾಗಿದೆ.
ಅರಣ್ಯ ವ್ಯಾಪ್ತಿಯಲ್ಲಿ ಬರುವ ಎಂಟು ಕೀಮಿ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕಾನೂನು ತೊಡಕು ಇದೆ. ಎಳನೀರು ಪ್ರದೇಶದಲ್ಲಿ 135 ಮನೆಗಳು, 600 ಕ್ಕೂ ಅಧಿಕ ಜನರಿದ್ದು,ಈ ಜನರು ಪಂಚಾಯತ್ ಗೆ ಬರಬೇಕಾದರೆ 120 ಕಿ ಮೀ ಸುತ್ತು ಬರಬೇಕಿದೆ.ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಗೆ ಬರಬೇಕಾದರೂ 120 ಕಿ. ಮೀ ಸುತ್ತುಬಳಸಿ ಬರಬೇಕು. ಬ್ಯಾಂಕ್,ಪಂಚಾಯತ್ ಕೆಲಸಕ್ಕೂ ಇಡೀ ದಿನ ಮೀಸಲಿಡಬೇಕಿದೆ.ಕುದುರೆ ಮುಖ-ಬಜಗೋಳಿ ಅಥವಾ ಕೊಟ್ಟಿಗಾರ-ಉಜಿರೆ ಮೂಲಕ ಸುತ್ತು ಬಳಸಿ ಬರಬೇಕು..ಹೋಗಿ ಬರೋಕೆ 240 ಕೀಮೀ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.
ಎಂಟು ಕೀಮೀ ಅಭಿವೃದ್ಧಿ ಯಾದೇ ಜನರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.ಸದ್ಯ ಇರುವ ಕಚ್ಛಾ ರಸ್ತೆಯಲ್ಲಿ ಬೈಕ್ ಅಥವಾ ಫೋರ್ ವ್ಹೀಲ್ ಡ್ರೈವ್ ಜೀಪ್ ಮಾತ್ರ ಹೋಗಬಹುದು. ಆದರೆ ಮಳೆಗಾಲದಲ್ಲಿ ಸಂಪೂರ್ಣವಾಗಿ ರಸ್ತೆ ಹದಗೆಡುತ್ತದೆ. ಈ ರಸ್ತೆ ಅಭಿವೃದ್ಧಿ ಯಾದರೆ ಚಿಕ್ಕಮಗಳೂರು ಜಿಲ್ಲೆಯ ಸಂಸೆಗೆ ಕೇವಲ ಎಂಟು ಕೀಮೀ ಮಾತ್ರ ದೂರವಾಗಲಿದೆ. ಪ್ರವಾಸಿ ಕೇಂದ್ರ, ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರಿಗೆ ಭಾರೀ ಉಪಯೋಗವಾಗಲಿದೆ. ಆದರೆ ಅರಣ್ಯ ಭಾಗದಲ್ಲಿ ರಸ್ತೆ ಇರುವ ಕಾರಣ ಅಭಿವೃದ್ಧಿಗೆ ಅಡ್ಡಿಯಾಗಿದೆ. ರಸ್ತೆ ಅಭಿವೃದ್ಧಿ ಮಾಡಲು ಅರಣ್ಯ ಇಲಾಖೆಯ ಕಾನೂನು ತೊಡಕಿದ್ದು, ಅರಣ್ಯ ಸಚಿವರು, ಅರಣ್ಯ ಅಧಿಕಾರಿಗಳ ನಿರುತ್ಸಾಹದಿಂದ ಇನ್ನೂ ರಸ್ತೆ ಅಭಿವೃದ್ಧಿಯಾಗಿಲ್ಲ.
Dakshina Kannada,Karnataka