PAK vs BAN: ಬಾಂಗ್ಲಾ ವಿರುದ್ಧ 134 ರನ್​ ಚೇಸ್ ಮಾಡಲಾಗದೇ ಸೋತ ಪಾಕ್! ತಂಡದ ಸೋಲಿಗೆ ಕಾರಣನಾದ ಹೊಸ ನಾಯಕ | Bangladesh Beat PAK By 8 Runs Take 2-0 Lead In 3-Match t20 Series

PAK vs BAN: ಬಾಂಗ್ಲಾ ವಿರುದ್ಧ 134 ರನ್​ ಚೇಸ್ ಮಾಡಲಾಗದೇ ಸೋತ ಪಾಕ್! ತಂಡದ ಸೋಲಿಗೆ ಕಾರಣನಾದ ಹೊಸ ನಾಯಕ | Bangladesh Beat PAK By 8 Runs Take 2-0 Lead In 3-Match t20 Series
134 ರನ್​ಗಳನ್ನ ಬೆನ್ನಟ್ಟಲಾಗದೇ ಸೋಲು

ತಮಗಿಂತ ಹಲವು ಪಟ್ಟು ದುರ್ಬಲವಾಗಿದ್ದ ಬಾಂಗ್ಲಾದೇಶ ತಂಡದ ವಿರುದ್ದ ಕೇವಲ 134 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಲಾಗದೇ ಹೀನಾಯ ಸೋಲು ಕಂಡಿದೆ. ಭಾನುವಾರ (ಜುಲೈ 20) ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ನೀಡಿತ್ತು. ಅತಿಥೇಯ ತಂಡ 20 ಓವರ್​ಗಳಲ್ಲಿ 133 ರನ್​ಗಳಿಗೆ ಆಲೌಟ್ ಆಗಿತ್ತು. ತಂಡದ ಪರ ಜಾಕರ್ ಅಲಿ 48 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 55 ರನ್​ಗಳಿಸಿ ತಂಡ 100ರ ಗಡಿ ದಾಟಲು ನೆರವಾಗಿದ್ದರು. ಮೆಹೆದಿ ಹಸನ್ 25 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 33 ರನ್​ಗಳಿಸಿದ್ದರು.

ಪಾಕಿಸ್ತಾನದ ಪರ ಸಲ್ಮಾನ್ ಮಿರ್ಜಾ 17ಕ್ಕೆ2, ಪದಾರ್ಪಣೆ ಆಟಗಾರ ಅಹ್ಮದ್ ದನಿಯಾಲ್ 23ಕ್ಕೆ2, ಅಬ್ಬಾಸ್ ಅಫ್ರಿದಿ 37ಕ್ಕೆ 2, ಮೊಹಮ್ಮದ್ ನವಾಜ್ ಹಾಗೂ ಫಹೀಮ್ ಅಶ್ರಫ್ ತಲಾ 1 ವಿಕೆಟ್ ಪಡೆದರು.

15ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಪಾಕ್

ಇನ್ನು ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 15 ರನ್​ಗಳಾಗುವಷ್ಟರಲ್ಲಿ ಆರಂಭಿಕ 5 ವಿಕೆಟ್ ಕಳೆದುಕೊಂಡಿತು. ಸೈಮ್ ಆಯುಬ್ 1, ಮೊಹಮ್ಮದ್ ಹ್ಯಾರಿಸ್ 0, ಫಖರ್ ಜಮಾನ್ 8, ಹಸನ್​ ನವಾಜ್ 0, ಮೊಹಮ್ಮದ್ ನವಾಜ್ 0 ವಿಕೆಟ್ ಕಳೆದುಕೊಂಡಿತು. ನಾಯಕ ಸಲ್ಮಾನ್ ಆಘಾ 23 ಎಸೆತಗಳಲ್ಲಿ ವಿಕೆಟ್ ಕಾಯ್ದುಕೊಂಡರೇ ಹೊರೆತು ರನ್​ಗಳಿಸಲು ಪರದಾಡಿ 9 ರನ್​ಗಳಿಸಿ ಔಟ್ ಆದರು. ಕುಶ್​ದಿಲ್ ಶಾ 18 ಎಸೆತಗಳಲ್ಲಿ 13 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಫಹೀಮ್ ಹೋರಾಟ ವ್ಯರ್ಥ

ತಂಡದ ಮೊತ್ತ 47 ರನ್​ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ಹೀನಾಯ ಸೋಲು ಕಾಣಬಹುದು ಎಂದು ಭಾವಿಸಲಾಗುಗಿತ್ತು. ಆದರೆ ಫಹೀಮ್ ಅಶ್ರಫ್ ಎಲ್ಲರ ಅಭಿಪ್ರಾಯ ತಲೆಕೆಳಗಾಗಿಸಿದರು. ಅಬ್ಬಾಸ್ ಜೊತೆ ಸೇರಿ 8ನೇ ವಿಕೆಟ್​ಗೆ 41 ರನ್ ಸೇರಿಸಿದರು. ಅಬ್ಬಾಸ್ 13 ಎಸೆತಗಳಲ್ಲಿ 19 ರನ್ಗಳಿಸಿ ಔಟ್ ಆದರು. 9ನೇ ವಿಕೆಟ್​​ಗೆ ದನಿಯಾಲ್ ಜೊತೆ ಸೇರಿದ ಅಶ್ರಫ್ 33 ರನ್ ಸೇರಿಸಿ ತಂಡವನ್ನ ಗೆಲುವಿನ ಸನಿಹ ತಂಡದರು. ಆದರೆ 19ನೇ ಓವರ್​ನ ಕೊನೆಯ ಎಸೆತದಲ್ಲಿ ರಿಷಾದ್ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಅಶ್ರಫ್ 32 ಎಸೆತಗಳಲ್ಲಿ ತಲಾ 4 ಬೌಂಡರಿ, 4 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿದರು.

ಕೊನೆಯ ಓವರ್​​ನಲ್ಲಿ ಬಾಂಗ್ಲಾದೇಶಕ್ಕೆ ಗೆಲ್ಲಲು 13 ರನ್​ಗಳ ಅಗತ್ಯವಿತ್ತು. ಆದರೆ ದನಿಯಾಲ್ (17) ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ 2ನೇ ಎಸೆತದಲ್ಲಿ ಕ್ಯಾಚ್ ಔಟ್ ಆದರು. ಇದರಿಂದ ಬಾಂಗ್ಲಾದೇಶ 8 ರನ್​ಗಳ ರೋಚಕ ಗೆಲುವಿನೊಂದಿಗೆ ಇನ್ನು ಒಂದು ಪಂದ್ಯ ಇರುವಂತೆ ಗೆಲುವು ತನ್ನ ವಶಪಡಿಸಿಕೊಂಡಿತು. ಬಾಂಗ್ಲಾದೇಶದ ಪರ ಮುಸ್ತಾಫಿಜುರ್ 25ಕ್ಕೆ2, ಶೋರಿಫುಲ್ ಇಸ್ಲಾಮ್ 17ಕ್ಕೆ3, ಮೆಹೆದಿ ಹಸನ್ 25ಕ್ಕೆ2, ತಂಜಿಮ್ ಹಸನ್ ಸಕಿಬ್ 23ಕ್ಕೆ2, ರಿಷಾದ್ 42ಕ್ಕೆ1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಕ ಪಾತ್ರವಹಿಸಿದರು.

ಒಂದು ವರ್ಷದಲ್ಲಿ ಗರಿಷ್ಠ ಸೋಲು

2024ರಿಂದ ಪಾಕಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಮೂರು ಸ್ವರೂಪಗಳಲ್ಲಿ) 63 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 38 ಪಂದ್ಯಗಳಲ್ಲಿ ಸೋತಿದೆ. ಪಾಕಿಸ್ತಾನದ ನಂತರ ಬಾಂಗ್ಲಾದೇಶ ಅತಿ ಹೆಚ್ಚು ಸೋಲುಗಳನ್ನು ಅನುಭವಿಸಿದೆ, ಬಾಂಗ್ಲಾ 62 ಪಂದ್ಯಗಳಲ್ಲಿ 37 ಸೋಲುಗ ಕಂಡಿದೆ. 2024 ರಿಂದ ವೆಸ್ಟ್ ಇಂಡೀಸ್ (65 ಪಂದ್ಯಗಳಲ್ಲಿ 35 ಸೋಲು) ಮತ್ತು ಜಿಂಬಾಬ್ವೆ (61 ಪಂದ್ಯಗಳಲ್ಲಿ 31 ಸೋಲು) ನಂತಹ ದೇಶಗಳು ಪಾಕಿಸ್ತಾನಕ್ಕಿಂತ ಕಡಿಮೆ ಪಂದ್ಯಗಳನ್ನು ಸೋತಿವೆ. ಈ ಅಂಕಿಅಂಶಗಳನ್ನು ನೋಡಿದರೆ, ಪಾಕಿಸ್ತಾನ ಕ್ರಿಕೆಟ್ ತಂಡದ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಮೊದಲ ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಆಘಾತ ನೀಡಿದ್ದ ಬಾಂಗ್ಲಾದೇಶ

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಬಾಂಗ್ಲಾದೇಶದ ಬೌಲಿಂಗ್ ದಾಳಿಗೆ ಸಿಲುಕಿ 19.3 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶದ ಬೌಲರ್‌ಗಳಲ್ಲಿ ಮುಸ್ತಾಫಿಜುರ್ (4-0-6-2) ಮತ್ತು ತಸ್ಕಿನ್ ಅಹ್ಮದ್ (3.3-0-22-3) ಅದ್ಭುತವಾಗಿ ಬೌಲಿಂಗ್ ಮಾಡಿದರು. ತಂಜಿಮ್ ಹಸನ್ ಸಾಕಿಬ್ (4-0-20-1) ಮತ್ತು ಮೆಹಿದಿ ಹಸನ್ (4-0-37-1) ಕೂಡ ಪ್ರಭಾವಿತರಾಗಲಿಲ್ಲ.

ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಲ್ಲಿ ಫಖರ್ ಜಮಾನ್ (44) ಉತ್ತಮ ಪ್ರದರ್ಶನ ತೋರುತ್ತಿದ್ದರು. ಕೊನೆಯಲ್ಲಿ, ಅಬ್ಬಾಸ್ ಅಫ್ರಿದಿ (22) ಮತ್ತು ಖುಷ್ದಿಲ್ ಶಾ (17) ಎರಡಂಕಿಯ ರನ್ ಗಳಿಸಿದ್ದರು. ನಂತರ ಸಣ್ಣ ಗುರಿಯನ್ನು ಬೆನ್ನಟ್ಟಲು ಬಂದ ಬಾಂಗ್ಲಾದೇಶ 15.3 ಓವರ್‌ಗಳಲ್ಲಿ (3 ವಿಕೆಟ್‌ಗಳ ನಷ್ಟಕ್ಕೆ) ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಪರ್ವೇಜ್ ಹೊಸೇನ್ ಎಮನ್ (ಔಟಾಗದೆ 56) ಅವರ ಅಬ್ಬರದ ಅರ್ಧಶತಕದ ಮೂಲಕ ಬಾಂಗ್ಲಾದೇಶವನ್ನು ಗೆಲುವಿನತ್ತ ಕೊಂಡೊಯ್ದರು. ಅವರಿಗೆ ತೌಹಿದ್ ಹೃದಯೋಯ್ (36) ಮತ್ತು ಜಾಕಿರ್ ಅಲಿ (ಔಟಾಗದೆ 15) ಸಾಥ್ ನೀಡಿದ್ದರು.

ಪಾಕಿಸ್ತಾನದ ಬೌಲರ್‌ಗಳಲ್ಲಿ ಸಲ್ಮಾನ್ ಮಿರ್ಜಾ 2 ವಿಕೆಟ್ ಮತ್ತು ಅಬ್ಬಾಸ್ ಆಫ್ರಿದಿ ಒಂದು ವಿಕೆಟ್ ಪಡೆದರು. ಈ ಸರಣಿಯ 3ನೇ ಟಿ20 ಪಂದ್ಯ ಜುಲೈ 24ರಂದು ನಡೆಯಲಿದೆ.