PAKW vs AUSW: ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟ ಬೆತ್​ ಮೂನಿ-ಕಿಂಗ್ ಐತಿಹಾಸಿಕ ಜೊತೆಯಾಟ! ವಿಶ್ವಕಪ್​ನಲ್ಲಿ ಪಾಕ್​ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ | Mooney’s Masterclass: Australia Thrash Pakistan by 107 Runs in Women’s World Cup | ಕ್ರೀಡೆ

PAKW vs AUSW: ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟ ಬೆತ್​ ಮೂನಿ-ಕಿಂಗ್ ಐತಿಹಾಸಿಕ ಜೊತೆಯಾಟ! ವಿಶ್ವಕಪ್​ನಲ್ಲಿ ಪಾಕ್​ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ | Mooney’s Masterclass: Australia Thrash Pakistan by 107 Runs in Women’s World Cup | ಕ್ರೀಡೆ

Last Updated:

ಆಸ್ಟ್ರೇಲಿಯಾ ಬೆತ್ ಮೂನಿ ಶತಕ ಹಾಗೂ ಅಲಾನ ಕಿಂಗ್ ಅವರ ಅಜೇಯ ಅರ್ಧಶತಕದ ನೆರವಿನಿಂದ 50 ಓವರ್​ಗಳಲ್ಲಿ 221 ರನ್​ಗಳಿಸಿತ್ತು. 222ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 36.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲೌಟ್ ಆಗುವ ಮೂಲಕ 107 ರನ್​ಗಳ ಸೋಲು ಕಂಡಿತು.

ಆಸ್ಟ್ರೇಲಿಯಾ ತಂಡಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ

ಮಹಿಳಾ ಏಕದಿನ ವಿಶ್ವಕಪ್​​ನಲ್ಲಿ (Women’s ODI World Cup) ಬಲಿಷ್ಠ ಆಸ್ಟ್ರೇಲಿಯಾ (Australia vs Pakistan) ತಂಡ ಪಾಕಿಸ್ತಾನ ಮಹಿಳಾ ತಂಡವನ್ನ 107 ರನ್​ಗಳ ಅಂತರದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕೊಲೊಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಬೆತ್ ಮೂನಿ ಶತಕ ಹಾಗೂ ಅಲಾನ ಕಿಂಗ್ ಅವರ ಅಜೇಯ ಅರ್ಧಶತಕದ ನೆರವಿನಿಂದ 50 ಓವರ್​ಗಳಲ್ಲಿ 221 ರನ್​ಗಳಿಸಿತ್ತು. 222ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 36.3 ಓವರ್​ಗಳಲ್ಲಿ 114 ರನ್​ಗಳಿಗೆ ಆಲೌಟ್ ಆಗುವ ಮೂಲಕ 107 ರನ್​ಗಳ ಸೋಲು ಕಂಡಿತು. ಇದು ಪಾಕಿಸ್ತಾನ ತಂಡದ ಮೂರನೇ ಸೋಲಾಗಿದೆ.

ಸವಾಲಾಗದ ಪಾಕಿಸ್ತಾನ

222ರನ್​ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಯಾವುದೆ ಹಂತದಲ್ಲೂ ಆಸೀಸ್​ಗೆ ಸವಾಲೊಡ್ಡಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡ ಪವರ್​ ಪ್ಲೇ ಮುಗಿಯುವ ವೇಳೆಗೆ 31ಕ್ಕೆ5 ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಸದಾಫ್ ಶಮಾಸ್ 5, ಮುನೀಬಾ ಅಲಿ 3, ಸಿದ್ರಾ ನವಾಜ್ 5, ನಟಾಲಿಯಾ ಪರ್ವೇಜ್ 1, ಇಮಾನ್ ಫಾತಿಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆ ನಂತರವೂ ಪಾಕಿಸ್ತಾನ ಚೇತರಿಸಿಕೊಳ್ಳಲಿಲ್ಲ. ನಾಯಕಿ ಫಾತಿಮಾ ಸನಾ 11 ರನ್​ಗೆ ವಿಕೆಟ್ ಒಪ್ಪಿಸಿದರು.

100ರ ಗಡಿ ದಾಟಿಸಿದ ಸಿದ್ರಾ ಅಮೀನ್

46ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಸಿದ್ರಾ ಅಮೀನ್ ಹಾಗೂ ರಮೀಮಾ ಶಮೀಮ್ ತಂಡದ ಮೊತ್ತವನ್ನ 78ಕ್ಕೆ ತೆಗೆದುಕೊಂಡು ಹೋಯ್ದರು. ಈ ಹಂತದಲ್ಲಿ 52 ಎಸೆತಗಳಲ್ಲಿ 35 ರನ್​ಗಳಿಸಿದ ಅಮೀನ್ ಕೂಡ ಪೆವಿಲಿಯನ್ ಸೇರಿಕೊಂಡರು. ಬಾಲಂಗೋಚಿಗಳಾದ ಶಮೀಮ್ 15, ಡೈಯಾನ ಬೇಗ್ 7, ನಶ್ರಾ ಸಂಧು 11 ರನ್​ಗಳಿಸಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆಸೀಸ್ ಬೌಲರ್​ಗಳ ಪೈಕಿ, ಕಿಮ್ ಗರ್ಥ್ 14ಕ್ಕೆ3, ಅನಾಬೆಲ್ ಸದರ್ಲೆಂಡ್ 15ಕ್ಕೆ2, ಅಲಾನ ಕಿಂಗ್ 19ಕ್ಕೆ1, ಮೇಗನ್ ಶಟ್ 25ಕ್ಕೆ2, ಆಶ್ ಗಾಆರ್ಡ್ನರ್ 17ಕ್ಕೆ1, ಜಾರ್ಜಿಯಾ ವಾರೆಮ್ 15ಕ್ಕೆ1 ವಿಕೆಟ್ ಪಡೆದು ಮಿಂಚಿದರು.

ಆಸ್ಟ್ರೇಲಿಯಾಕ್ಕೆ ಆಘಾತ ಕೊಟ್ಟಿದ್ದ ಪಾಕ್ ಬೌಲರ್ಸ್

ಇದಕ್ಕೂ ಮುನ್ನ ಟಾಸ್ ಸೊತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 30ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. ಆದರೆ ದಿಢೀರ್ ಕುಸಿತ ಕಂಡ ಆಸ್ಟ್ರೇಲಿಯಾ ತಂಡ 76 ರನ್​ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಕನಸಲ್ಲೂ ಊಹಿಸದ ಆಘಾತಕ್ಕೆ ಒಳಗಾಯಿತು. ನಾಯಕ ಅಲಿಸಾ ಹೀಲಿ 23ಕ್ಕೆ 20 ರನ್​ಗಳಿಸಿದರೆ, ಉಳಿದವರೆಲ್ಲಾ ಮೊಬೈಲ್ ನಂಬರ್​ ನಂತೆ ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ಪೊಯ್ಬೆ ಲಿಚ್​ಫೀಲ್ಡ್​ 10, ಎಲಿಸ್ ಪೆರ್ರಿ 5, ಅನಾಬೆಲ್ ಸದರ್ಲೆಂಡ್ 1, ಆಶ್ ಗಾರ್ಡ್ನರ್ 1, ತಹಿಲಾ ಮೆಕ್​ಗ್ರಾತ್ 5, ಜಾರ್ಜಿಯಾ ವಾರೆಮ್ 0ಗೆ ವಿಕೆಟ್ ಒಪ್ಪಿಸಿದರು.

ಐತಿಹಾಸಿಕ ಜೊತೆಯಾಟವಾಡಿದ ಮೂನಿ-ಕಿಂಗ್

ತಂಡದ ಮೊತ್ತ 76ಕ್ಕೆ7 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬೆತ್ ಮೂನಿ ಜೊತೆಗೂಡಿದ ಕಿಮ್ ಗರ್ಥ್​ 38 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಗರ್ಥ್​ ಕೊಡುಗೆ ಕೇವಲ 11 ರನ್. ಆದರೂ ಕಠಿಣ ವಿಕೆಟ್​​ನಲ್ಲಿ 47 ಎಸೆತಗಳನ್ನಾಡಿ 12.3 ಓವರ್​ಗಳ ಕಾಲ ವಿಕೆಟ್ ಉಳಿಸಿಕೊಟ್ಟರು. ಆದರೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಲಾನ ಕಿಂಗ್ ಪಂದ್ಯದ ಗತಿಯನ್ನೇ ಬದಲಿಸಿದರು. ಮೂನಿಗೆ ಸ್ಟ್ರೈಕ್ ರೊಟ್ಯಾಟ್ ಮಾಡುತ್ತಾ, ತಾವೂ ಕೂಡ ಸುಲಭವಾಗಿ ರನ್​ಗಳಿಸಿದರು.

ಈ ಜೊಡಿ 9ನೇ ವಿಕೆಟ್ ಜೊತೆಯಾಟದಲ್ಲಿ 97 ಎಸೆತಗಳಲ್ಲಿ 106 ರನ್​ಗಳ ಮ್ಯಾಚ್​ ವಿನ್ನಿಂಗ್ ಜೊತೆಯಾಟ ನೀಡಿದರು. ಮೂನಿ 114 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ 109 ರನ್​ಗಳಿಸಿ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಅಲಾನ ಕಿಂಗ್ 49 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳೊಂದಿಗೆ ಅಜೇಯ 51 ರನ್​ಗಳಿಸಿ ಆಸ್ಟ್ರೇಲಿಯಾ ತಂಡ 200ರ ಗಡಿ ದಾಟಲು ನೆರವಾದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

PAKW vs AUSW: ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟ ಬೆತ್​ ಮೂನಿ-ಕಿಂಗ್ ಐತಿಹಾಸಿಕ ಜೊತೆಯಾಟ! ವಿಶ್ವಕಪ್​ನಲ್ಲಿ ಪಾಕ್​ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ