Last Updated:
ಕಾಂತಾರ ಸಿನಿಮಾದ ಜೀವಾಳ ಪಂಜುರ್ಲಿ ದೈವದ ಮುಖವಾಡವನ್ನು ಪುಣಚದ ಸಚ್ಚಿದಾನಂದ ಪ್ರಭು ಗೆರಟೆಯಲ್ಲಿ ತಯಾರಿಸಿ ಜನರ ಗಮನಸೆಳೆದಿದ್ದಾರೆ.
ದಕ್ಷಿಣ ಕನ್ನಡ: ಗಣಮಣಿ, ದೈವಗಳ ಮುಖ್ಯಸ್ಥ, ಶಿವ-ಪಾರ್ವತಿಯರ ಮುದ್ದಿನ ಮಗ, ಪ್ರಾಣಿ ಮೂಲದ ದೈವಗಳಲ್ಲೇ (Demi God) ಶ್ರೇಷ್ಠ, ಗಡಿ ಕಾಯುವ, ಊರು ಕಾಯುವ, ಮನೆಗೆ ಕಾವಲಿರುವ ಕ್ಷೇತ್ರಪಾಲ, ಕಾಡು ಕೇಪುಲ ಹೂವಿಗೆ ಒಲಿದು ಕೈಯಲ್ಲಿ ಧರ್ಮದ ಜ್ಯೋತಿ (Light) ಉರಿಸುವ ಸೂಟೆ ಹಿಡಿದು ಕಡ್ತಲೆ ಹಿಡಿದು ನಂಬಿದವರಿಗೆ ಇಂಬು ಕೊಡುವ, ಅನ್ಯಾಯ ಅಕ್ರಮ ಮಾಡಿದವರಿಗೆ ಬುದ್ಧಿ (Teaching) ಕಲಿಸುವ, 12 ವರ್ಷ ಆಯಸ್ಸು ಕೊಡುವ, ಕಳೆವ ಧರ್ಮ ದೈವ ಸ್ವಾಮಿ ಪಂಜುರ್ಲಿಯ (Lord Panjurli) ಬಗ್ಗೆ ಹೇಳಿದಷ್ಟೂ ಮುಗಿಯದ ಕಾರ್ಣಿಕ.
ಇಂದು ಎಲ್ಲೆಡೆ ಕಾಂತಾರ ಸಿನಿಮಾದ ಹವಾನೇ ಜೋರಾಗಿದೆ. ಕಾಂತಾರ ಸಿನಿಮಾದಲ್ಲಿ ಪ್ರಮುಖ ಹೈಲೈಟ್ ತುಳುನಾಡಿನ ದೈವಾರಾಧನೆ. ತುಳುನಾಡಿನ ಪ್ರಮುಖ ದೈವಗಳಲ್ಲಿ ಒಂದಾದ ಪಂಜುರ್ಲಿಯ ಕಥೆಯನ್ನೇ ಮುಖ್ಯವಾಗಿರಿಸಿ ಕಾಂತಾರಾ ಚಿತ್ರಕಥೆ ಹೆಣೆಯಲಾಗಿದೆ. ಪಂಜುರ್ಲಿ ದೈವದ ಪ್ರಮುಖ ಆಕರ್ಷಣೆ ಅದರ ಮುಖವಾಡವಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯ ಪುಣಚದ ಯಕ್ಷಗಾನ ಕಲಾವಿದರೊಬ್ಬರು ಗೆರಟೆಯಲ್ಲಿ ಪಂಜುರ್ಲಿ ಮುಖವಾಡವನ್ನು ತಯಾರಿಸುವ ಮೂಲಕ ತಮ್ಮ ಕಲಾಪ್ರೌಢಿಮೆ ಮೆರೆದು ಸುದ್ದಿಯಲ್ಲಿದ್ದಾರೆ.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅಜೇರು ನಿವಾಸಿ ಸಚ್ಚಿದಾನಂದ ಪ್ರಭು ಗೆರಟೆಯಲ್ಲಿ ಪಂಜುರ್ಲಿ ಮುಖವಾಡ ತಯಾರಿಸಿದ ಕಲಾವಿದರಾಗಿದ್ದಾರೆ. ಯಕ್ಷಗಾನದಲ್ಲಿ ವಿದೂಷಕನ ಪಾತ್ರ ನಿರ್ವಹಿಸುತ್ತಿರುವ ಸಚ್ಚಿದಾನಂದ ಪ್ರಭು ತಮ್ಮ ಬಿಡುವಿನ ಸಮಯದಲ್ಲಿ ಗೆರಟೆಯಲ್ಲಿ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುವ ವೃತ್ತಿಯಲ್ಲೂ ತೊಡಗಿಕೊಂಡಿದ್ದಾರೆ. ಗೆರಟೆಯನ್ನು ಬಳಸಿಕೊಂಡು ಇಂದು ಹಲವರು ವಿವಿಧ ರೀತಿಯ ಕಲಾಕೃತಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಇದರಿಂದ ಕೊಂಚ ಭಿನ್ನವಾಗಿರಬೇಕೆಂದು ಸಚ್ಚಿದಾನಂದ ಪ್ರಭು ಗೆರಟೆಯನ್ನು ಬಳಸಿಕೊಂಡು ಶಂಖ, ದೀಪ, ದೊಡ್ಡ ದೀಪ ಮೊದಲಾದ ವಸ್ತುಗಳನ್ನು ತಯಾರಿಸಿ ಗಮನಸೆಳೆದಿದ್ದಾರೆ.
ಕಲಾಕೃತಿಗೆ ಕೈ ಮುಗಿಯುತ್ತಿರುವ ಜನ
ಆದರೆ ಈ ಎಲ್ಲಾ ಕಲಾಕೃತಿಗಳಲ್ಲಿ ಅವರು ಇತ್ತೀಚೆಗೆ ತಯಾರಿಸಿದ ಪಂಜುರ್ಲಿ ದೈವದ ಮುಖವಾಡ ಎಲ್ಲರ ಗಮನಸೆಳೆದಿದೆ. ಹಂದಿಯ ತಲೆಯ ಮಾದರಿಯಲ್ಲಿರುವ ಪಂಜುರ್ಲಿ ದೈವದ ಮುಖವಾಡ ಕಲಾವಿದನಿಗೆ ಆಕರ್ಷಣೆಯಾಗಿ ಕಂಡುಬಂದ ಹಿನ್ನಲೆಯಲ್ಲಿ ಗೆರಟೆಯನ್ನು ಉಪಯೋಗಿಸಿ ಯಾಕೆ ಈ ಮುಖವಾಡವನ್ನು ಮಾಡಬಾರದು ಎನ್ನುವ ಯೋಚನೆ ಮೂಡಿತ್ತು. ಅದರಂತೆ ಕಾರ್ಯಪ್ರವೃತ್ತರಾಗಿದ್ದ ಸಚ್ಚಿದಾನಂದ ಪ್ರಭು ನಿರಂತರ ಎರಡು ತಿಂಗಳ ಕಾಲ ಶ್ರಮವಹಿಸಿ ಅದ್ಭುತವಾಗಿ ಪಂಜುರ್ಲಿ ದೈವದ ಮುಖವಾಡ ತಯಾರಿಸಿದ್ದಾರೆ. ಈ ಪಂಜುರ್ಲಿಯ ಮುಖವಾಡವನ್ನು ಪ್ರದರ್ಶನಕ್ಕಾಗಿಯೂ ಕೊಂಡೊಯ್ಯುತ್ತಾರೆ. ಆ ಸಂದರ್ಭದಲ್ಲಿ ಇದನ್ನು ವೀಕ್ಷಣೆ ಮಾಡಲು ಬಂದ ಜನ ಕಾಲಲ್ಲಿದ್ದ ಚಪ್ಪಲಿ ತೆಗೆದು ನಮಸ್ಕರಿಸಿದ ಹಲವು ಘಟನೆಗಳು ಇದೆ ಎನ್ನುತ್ತಾರೆ ಕಲಾವಿದರಾದ ಸಚ್ಚಿದಾನಂದ ಪ್ರಭು.
Dakshina Kannada,Karnataka
October 11, 2025 6:24 PM IST