Last Updated:
ಸುಳ್ಳಮಲೆ ದಕ್ಷಿಣ ಕನ್ನಡದ ಐತಿಹಾಸಿಕ ಗುಹಾತೀರ್ಥ ಸ್ನಾನ ಆಗಸ್ಟ್ 23-27ರಂದು ನಡೆಯಲಿದೆ, ಪಂಜುರ್ಲಿ ಮತ್ತು ಶ್ರೀ ಗುಡ್ಡೆ ಚಾಮುಂಡಿ ದೈವಗಳ ಸೇವೆ, ಸಾಂಪ್ರದಾಯಿಕ ಉಡುಪಿಗೆ ಮಾತ್ರ ಪ್ರವೇಶ.
ದಕ್ಷಿಣ ಕನ್ನಡ: ಇದು ಪ್ರಕೃತಿಯ (Nature) ರಮ್ಯತೆಯನ್ನೆಲ್ಲಾ ಮೈವೆತ್ತಿಕೊಂಡ ತಾಣ, ಆದರೆ ಆರ್ಭಟಿಸುವುದು ಕರಾಳ ರೌದ್ರತೆಯನ್ನು! ಯಾಕೆಂದರೆ ಇಲ್ಲಿ ಹೋಗುವುದು ಸುಲಭವಲ್ಲ, ಆದರೆ ಪ್ರತೀ ಹೆಜ್ಜೆಯಲ್ಲೂ ಪಂಜುರ್ಲಿ ನಿಮ್ಮನ್ನು ರಕ್ಷಿಸುತ್ತಾನೆ. ಅಂತಹ ದಿವ್ಯತೆ-ರಮ್ಯತೆ-ರೌದ್ರತೆಗಳ ಸಂಗಮ ಸ್ಥಾನ ಸುಳ್ಳಮಲೆ! ದಕ್ಷಿಣ ಕನ್ನಡದ ಸರ್ವಸೊಬಗನ್ನೂ (Beauty) ಪ್ರತಿನಿಧಿಸುವ ಈ ಜಾಗದಲ್ಲಿ (Place) ಈಗ ತೀರ್ಥಸ್ನಾನದ ಸಂಭ್ರಮ!
ಹೌದು, ವರ್ಷದಲ್ಲಿ ಒಮ್ಮೆ ನಡೆಯುವ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥ ಸ್ನಾನ ಮತ್ತೆ ಬಂದಿದೆ. ಸೋಣ ಎಂದರೆ ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯ ತನಕ ವರ್ಷದ ಐದು ದಿನಗಳಲ್ಲಿ ಇಲ್ಲಿ ಗುಹಾ ತೀರ್ಥಸ್ನಾನ ವಾಡಿಕೆಯಂತೆ ನಡೆದುಕೊಂಡು ಬರುತ್ತಿದೆ. ಈ ಬಾರಿ ಆಗಸ್ಟ್ 23 ರಿಂದ ಆಗಸ್ಟ್ 27 ರ ಭಾದ್ರಪದ ಶುಕ್ಲ ಚೌತಿಯವರೆಗೆ ಜರುಗಲಿದೆ.
ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು (ಎಣಿ) ಇಡುವ ಸಂಪ್ರದಾಯ ನಡೆಯುತ್ತದೆ. ಬಳಿಕ ಅರಸು ಶ್ರೀ ಗುಡ್ಡೆ ಚಾಮುಂಡಿ ಮತ್ತು ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆದ ಆನಂತರ ಭಕ್ತಾದಿಗಳಿಗೆ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಶಂಭುಗದ ಶ್ರೀ ಗುಡ್ಡೆ ಚಾಮುಂಡಿ ಸೇವಾ ಸಮಿತಿ ಮತ್ತು ಶಂಭುಗ ಫ್ರೆಂಡ್ಸ್ ದಾರಿಯ ಸ್ವಚ್ಛತೆ, ಹೊಸದಾಗಿ ಬರುವ ಭಕ್ತರಿಗೆ ಮಾರ್ಗದರ್ಶನ ಮಾಹಿತಿ ಸೇರಿದಂತೆ ಗುಹಾತೀರ್ಥ ಸ್ನಾನದ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಕದ ಅನಂತಾಡಿ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡು ಸುಳ್ಳಮಲೆ- ಬಳ್ಳಮಲೆ ಇದೆ.
ಸುಳ್ಳಮಲೆಗೆ ತಾಗಿಕೊಂಡಿರುವ ಬಳ್ಳಮಲೆಯಲ್ಲಿ ಸೊಗಸಾದ ಜಲಪಾತವಿದೆ. ಸುಳ್ಳಮಲೆಯ ತೀರ್ಥಸ್ನಾನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಹೊಂದಿದೆ. ಮಾಣಿ ಕಲ್ಲಡ್ಕ ರಸ್ತೆಯ ನಡುವಿನ ದಾಸಕೋಡಿಯಿಂದ ನೆಲ್ಲಿ ಮೂಲಕ ಶಂಭುಗ ಗುಡ್ಡೆ ಚಾಮುಂಡಿ ಮಲೆಕೊರತಿ ಪಂಜುರ್ಲಿ ದೈವಸ್ಥಾನಕ್ಕೆ ಬಂದರೆ, ಅಲ್ಲಿಂದ ರೈಲ್ವೆ ಹಳಿ ದಾಟಿದ ನಂತರ ಸುಳ್ಳಮಲೆ ಸಿಗುತ್ತದೆ. ಮಾಣಿ ಮತ್ತು ಕೊಡಾಜೆಯಿಂದ ಮಂಗಿಲಪದವಿನಿಂದ ಅನಂತಾಡಿ ಗೋಳಿಕಟ್ಟಿ ಮೂಲಕವೂ ಸುಳ್ಳಮಲೆಗೆ ಬರಬಹುದಾಗಿದೆ.
ಕೆಲವು ವರ್ಷಗಳ ಹಿಂದೆ ಸುಳ್ಳಮಲೆ ಗುಹಾ ತೀರ್ಥಸ್ನಾನ ಪರಿಸರದ ಪಕ್ಕ ಸುಮಾರು ಮೂರು ಎಕರೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆದಾಗ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿ, ತೀರ್ಥ ಸ್ನಾನ ಪ್ರದೇಶಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿದ್ದರು.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
August 27, 2025 9:46 AM IST