Last Updated:
ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕವಾಗಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಗೆ ಸಂತಸದ ವಿದಾಯ ಹೇಳಿತು. ಪಂಜಾಬ್ ನೀಡಿದ್ದ ಬೃಹತ್ ಟಾರ್ಗೆಟ್ ಚೇಸ್ ಮಾಡುವಾಗ ಕನ್ನಡಿಗ ಕರುಣ್ ನಾಯರ್ ಅಮೋಘ ಬ್ಯಾಟಿಂಗ್ ಡೆಲ್ಲಿ ತಂಡದ ಗೆಲುವಿಗೆ ಸಹಕಾರಿಯಾಯಿತು.
ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ 2025ನೇ ( IPL) ಸಾಲಿನ 66ನೇ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕವಾಗಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಗೆ ಸಂತಸದ ವಿದಾಯ ಹೇಳಿತು. ಪಂಜಾಬ್ ನೀಡಿದ್ದ ಬೃಹತ್ ಟಾರ್ಗೆಟ್ ಚೇಸ್ ಮಾಡುವಾಗ ಕನ್ನಡಿಗ ಕರುಣ್ ನಾಯರ್ (Karun Nair) ಹಾಗೂ ಸಮೀರ್ ರಿಜ್ವಿ (Sameer Rizwi) ಅಮೋಘ ಬ್ಯಾಟಿಂಗ್ ಡೆಲ್ಲಿ ತಂಡದ ಗೆಲುವಿಗೆ ಸಹಕಾರಿಯಾದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿರಾದ ಪ್ರಿಯಾಂಶ್ ಆರ್ಯ ಕೇವಲ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆದ್ರೆ, ಮೂರನೇ ವಿಕೆಟ್‌ಗೆ ಜೊತೆಯಾದ ಪ್ರಭ್ ಸಿಮ್ರಾನ್ ಹಾಗೂ ಜೋಸ್ ಇಂಗ್ಲಿಸ್ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಇಂಗ್ಲಿಸ್ ಸ್ಫೋಟಕ 32 ರನ್ ಸಿಡಿಸಿ ಔಟ್ ಆದರು. ಪ್ರಭ್‌ಸಿಮ್ರಾನ್ ಸಿಂಗ್ 28 ರನ್ ಗಳಿಸಿ ಔಟ್ ಆದರು.
ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ 34 ಎಸೆತಗಳಲ್ಲಿ 53 ರನ್ ಸಿಡಿಸಿದರು. ಅವರು 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ನಂತರ ಬಂದ ಮಾರ್ಕಸ್ ಸ್ಟೋಯಿನಸ್ 16 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ ಸ್ಫೋಟಕ 44 ರನ್ ಸಿಡಿಸಿದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಮುಸ್ತಫಿಜುರ್ ರೆಹಮಾನ್ 3, ವಿಪ್ರಜ್ ನಿಗಮ್ 2, ಕುಲ್ದೀಪ್ ಯಾದವ್ 2 ಹಾಗೂ ಮುಖೇಶ್ ಕುಮಾರ್ 1 ವಿಕೆಟ್ ಪಡೆದು ಮಿಂಚಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭವನ್ನೇ ಪಡೆದುಕೊಂಡಿತು. ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ 55 ರನ್‌ಗಳ ಜೊತೆಯಾಟ ಆಡಿದರು. ಈ ಹಂತದಲ್ಲಿ ಕೆಎಲ್ ರಾಹುಲ್ 35 ಹಾಗು ಫಾಫ್ ಡುಪ್ಲೆಸಿಸ್ 23 ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ಹೊರನಡೆದರು.
ನಂತರ ಕ್ರೀಸ್‌ಗೆ ಬಂದ ಕನ್ನಡಿಗ ಕರುಣ್ ನಾಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅವರು 27 ಎಸೆತಗಳಲ್ಲಿ 2 ಸಿಕ್ಸರ್ 4 ಫೋರ್ ಸಹಿತ 44 ರನ್ ಚಚ್ಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಮೀರ್ ರಿಜ್ವಿ ಕೂಡ ಸ್ಪೋಟಕ ಇನ್ನಿಂಗ್ಸ್ ಆಡಿದರು. ಅವರು 25 ಬಾಲ್‌ಗಳಲ್ಲಿ 58 ರನ್ ಸಿಡಿಸಿದರು. ಇದರಲ್ಲಿ ಅವರು 5 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿದ್ದರು. ಇದು ಐಪಿಎಲ್‌ನಲ್ಲಿ ಅವರ ಚೊಚ್ಚಲ ಅರ್ಧಶತಕ ಆಯಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್‌ಗಳಲ್ಲಿ ಗೆದ್ದು ತನ್ನ ಅಭಿಯಾನ ಮುಗಿಸಿತು. ಪಂಜಾಬ್ ಪರ ಹರ್ಪ್ರಿತ್ ಬ್ರಾರ್ 2, ಮಾರ್ಕೋ ಯಾನ್ಸನ್ ಹಾಗೂ ಪ್ರವೀನ್ ದುಬೇ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
May 24, 2025 11:26 PM IST