Last Updated:
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಪಿತೃಪಕ್ಷ ಹದಿನೈದು ದಿನಗಳ ಕಾಲ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿಂಡದಾನ, ಶ್ರಾದ್ಧ, ಕಾಗೆಗಳಿಗೆ ಆಹಾರ ನೀಡುವ ವಿಶಿಷ್ಟ ಆಚರಣೆಗಳು ನಡೆಯುತ್ತವೆ.
ದಕ್ಷಿಣ ಕನ್ನಡ: ಪಿತೃಪಕ್ಷವು (Pitru Paksha) ಹಿಂದೂ ಧರ್ಮದಲ್ಲಿ ಪೂರ್ವಜರನ್ನು ಸ್ಮರಿಸುವ ಪವಿತ್ರ ಹದಿನೈದು ದಿನಗಳ (15 Days)ಅವಧಿಯಾಗಿದೆ. ಕರಾವಳಿ ಭಾಗದಲ್ಲಿ, ವಿಶೇಷವಾಗಿ ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi) ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂಗಮ ಕ್ಷೇತ್ರಗಳಲ್ಲಿ ಪಿಂಡದಾನ ಮತ್ತು ಶ್ರಾದ್ಧ ಕರ್ಮಗಳನ್ನು ಮಾಡುತ್ತಾರೆ. ಪಿತೃಪಕ್ಷದ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದಲ್ಲದೇ, ಕೇವಲ ಸಂಗಮ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ, ಕುಟುಂಬದ ಮನೆಗಳಲ್ಲೂ ಪಿತೃಗಳಿಗೆ ಪ್ರಿಯವಾದ ತಿಂಡಿಗಳನ್ನು ಬಡಿಸಿ, ಅವುಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಾಗೆಗಳನ್ನು ಕರೆದು ಅವುಗಳಿಗೆ ನೀಡುವ ಸಂಪ್ರದಾಯವೂ ಹಲವು ಕಡೆಗಳಲ್ಲಿವೆ.
ಪಿತೃಪಕ್ಷದ ಮುಖ್ಯ ಆಚರಣೆಗಳಲ್ಲಿ ಪಿತೃಗಳಿಗೆ ಪಿಂಡದಾನ ಮತ್ತು ಶ್ರಾದ್ಧ ಮಾಡುವುದು ಸೇರಿದೆ. ಕರಾವಳಿ ಭಾಗದ ಗೋಕರ್ಣ, ಉಪ್ಪಿನಂಗಡಿ ಸೇರಿದಂತೆ ಪವಿತ್ರ ನದಿ ಅಥವಾ ಸಮುದ್ರ ತೀರಗಳಲ್ಲಿ ಪಿಂಡದಾನವನ್ನು ಮಾಡಲಾಗುತ್ತದೆ. ಸಸ್ಯಾಹಾರಿಗಳು ಪಿತೃಗಳಿಗೆ ಅವರ ಆಹಾರ ಪದ್ಧತಿಗೆ ಅನುಗುಣವಾಗಿ ಸಸ್ಯಾಹಾರವನ್ನೇ ನೀಡಿದರೆ, ಮಾಂಸಾಹಾರಿಗಳು ಮಾಂಸಾಹಾರವನ್ನು ಪಿತೃಗಳಿಗೆ ನೀಡುತ್ತಾರೆ.
ಕರಾವಳಿ ಭಾಗದಲ್ಲಿ ಕಾಗೆಗಳನ್ನು ಕರೆದು ಆಹಾರವನ್ನು ಅರ್ಪಿಸುವ ಮೂಲಕವೂ ಪಿತೃಗಳನ್ನು ಸ್ಮರಿಸಲಾಗುತ್ತದೆ. ಈ ಭಾಗದಲ್ಲಿ ಸತ್ತ ವ್ಯಕ್ತಿಗಳು ಕಾಗೆಗಳಾಗುತ್ತಾರೆ ಎನ್ನುವ ನಂಬಿಕೆಯಿರುವ ಕಾರಣಕ್ಕಾಗಿಯೇ ಪಿತೃಗಳಿಗೆ ಬಡಿಸಿದ್ದನ್ನೆಲ್ಲಾ ಕಾಗೆಗಳಿಗೆ ನೀಡಲಾಗುತ್ತದೆ. ಕಾಗೆಗಳು ಬಂದು ತಿಂದ ಬಳಿಕವೇ ಮನೆ ಮಂದಿ ಅಂದು ತಮ್ಮ ಕುಟುಂಬದವರನ್ನೆಲ್ಲಾ ಸೇರಿಸಿಕೊಂಡು ಒಟ್ಡಿಗೆ ಊಟ ಮಾಡುವ ಕ್ರಮವೂ ಕರಾವಳಿ ಭಾಗದಲ್ಲಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ. ಪೂರ್ವಜರಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಅವರ ಆತ್ಮಕ್ಕೆ ಶಾಂತಿ ಕೋರಲು ಈ ಆಚರಣೆಗಳನ್ನು ಮಾಡಲಾಗುತ್ತದೆ. ಪೂರ್ವಜರ ಋಣ ತೀರಿಸುವುದು.ಪಿತೃಗಳ ಆಶೀರ್ವಾದವನ್ನು ಪಡೆದು, ಅವರಿಗೆ ಸದ್ಗತಿ ಕಲ್ಪಿಸುವುದು ಈ ಪಿತೃಪಕ್ಷ ಆಚರಣೆಯ ಪ್ರಮುಖ ಉದ್ದೇಶವಾಗಿದೆ.ಪಂಚ ಮಹಾಯಜ್ಞಗಳಲ್ಲಿ ಒಂದಾದ ಪಿತೃ ಯಜ್ಞವನ್ನು ಪಿತೃ ಪಕ್ಷ ದಲ್ಲಿ ಆಚರಿಸಲಾಗುತ್ತದೆ. ಹದಿನೈದು ದಿನಗಳ ಕಾಲ ಪಿತೃಪಕ್ಷವನ್ನು ಆಚರಿಸುವ ಕಾರಣಕ್ಕಾಗಿ ಈ ಭಾಗದ ಜನ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ದಿನ ನಿಗದಿ ಮಾಡಿಕೊಂಡು ಈ ಸಂಪ್ರದಾಯವನ್ನು ಆಚರಿಸುವ ಅವಕಾಶವನ್ನೂ ನೀಡಲಾಗಿದೆ.
Dakshina Kannada,Karnataka
September 16, 2025 11:15 AM IST