Last Updated:
ಚಂಡೀಗಢ ವಿರುದ್ಧದ ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಪೃಥ್ವಿ ಶಾ ಅತಿವೇಗದ ದ್ವಿಶತಕ ಬಾರಿಸಿ ದಾಖಲೆ ಮಾಡಿದ್ದಾರೆ. ಈ ಮೂಲಕ ಅವರು ಟೀಮ್ ಇಂಡಿಯಾ ಸೇರುವ ಕನಸು ಕಾಣುತ್ತಿದ್ದಾರೆ.
ರಣಜಿ ಟ್ರೋಫಿ(Ranji Trophy)ಯ ಎರಡನೇ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರ ಮತ್ತು ಚಂಡೀಗಢ (Maharashtra vs Chandigarh) ತಂಡಗಳು ಮುಖಾಮುಖಿಯಾಗಿವೆ. ಚಂಡೀಗಢ ವಿರುದ್ಧದ ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಮಹಾರಾಷ್ಟ್ರ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಚಂಡೀಗಢಕ್ಕೆ 464 ರನ್‌ಗಳ ಗುರಿಯನ್ನು ನೀಡಿತು. ಮಹಾರಾಷ್ಟ್ರ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡದಿಂದ ಹೊರಗುಳಿದಿರುವ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಮಾಡಿದರು. ಚಂಡೀಗಢ ತಂಡದ ಬೌಲರ್ಸ್ ಬೆವರಿಳಿಸಿದ ಪೃಥ್ವಿ ಶಾ (Prithvi Shaw) ದ್ವಿಶತಕ ಗಳಿಸುವ ಮೂಲಕ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಾಗಿಲು ತಟ್ಟಿದ್ದಾರೆ. ಅಲ್ಲದೆ, ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ದಾಖಲೆ ಸೃಷ್ಟಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಹಾರಾಷ್ಟ್ರ ಪರ ಆಡುತ್ತಿರುವ ಪೃಥ್ವಿ ಶಾ ತಮ್ಮನ್ನು ಕಡೆಗಣಿಸಿದವರು ಹಿಂತಿರುಗಿ ನೋಡುವಂತೆ ಜಬರ್ದಸ್ತ್ ಬ್ಯಾಟಿಂಗ್ ಮಾಡಿದ್ದಾರೆ. ಚಂಡೀಗಢ ವಿರುದ್ಧ ಪೃಥ್ವಿ ಶಾ ದ್ವಿಶತಕ ಬಾರಿಸಿ ಸಂಭ್ರಮಿಸಿದ್ದಾರೆ.
ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಪೃಥ್ವಿ ಶಾ 156 ಎಸೆತಗಳಲ್ಲಿ 29 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 222 ರನ್ ಗಳಿಸಿದರು. ಪೃಥ್ವಿ ಶಾ ಕೇವಲ 141 ಎಸೆತಗಳಲ್ಲಿ ದ್ವಿಶತಕ ಪೂರೈಸಿ ದಾಖಲೆ ಮಾಡಿದರು. ಇದು ರಣಜಿ ಟ್ರೋಫಿಯ ಎಲೈಟ್ ಗ್ರೂಪ್ ಇತಿಹಾಸದಲ್ಲಿ ಎರಡನೇ ವೇಗದ ದ್ವಿಶತಕವಾಗಿದೆ. ಪೃಥ್ವಿ 2023-24ರಲ್ಲಿ ರಾಹುಲ್ ಸಿಂಗ್ ಮಾಡಿದ ದಾಖಲೆಯನ್ನು ಮುರಿದಿದ್ದಾರೆ. ರಾಹುಲ್ ರಣಜಿ ಟ್ರೋಫಿಯಲ್ಲಿ 143 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು.
ಪೃಥ್ವಿ ಶಾ ಹೊರತುಪಡಿಸಿ, ಸಿದ್ಧೇಶ್ ವೀರ್ 62 ರನ್ ಗಳಿಸಿದರೆ, ರುತುರಾಜ್ ಗಾಯಕ್ವಾಡ್ 36 ರನ್ ಮತ್ತು ಅರ್ಶೀನ್ ಕುಲಕರ್ಣಿ 31 ರನ್ ಕಲೆ ಹಾಕಿದರು. ಇದರಿಂದಾಗಿ ಮಹಾರಾಷ್ಟ್ರ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳಿಗೆ 359 ರನ್ ಗಳಿಸಿ 463 ರನ್‌ಗಳ ಮುನ್ನಡೆ ಸಾಧಿಸಿತು. ಮಹಾರಾಷ್ಟ್ರ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ನಿರ್ಧರಿಸಿತು. ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 313 ರನ್ ಗಳಿಸಿ, ಚಂಡೀಗಢವನ್ನು 209 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಮಹಾರಾಷ್ಟ್ರ 104 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮಹಾರಾಷ್ಟ್ರ ಅದ್ಭುತ ಪ್ರದರ್ಶನ ನೀಡಿ ತಮ್ಮ ಮುನ್ನಡೆಯನ್ನು ಬಲಪಡಿಸುವಲ್ಲಿ ಯಶಸ್ವಿಯಾಯಿತು.
ರಣಜಿ ಟ್ರೋಫಿ 2025-26 ಆವೃತ್ತಿಗೂ ಮುನ್ನ ಪೃಥ್ವಿ ಶಾ ಮುಂಬೈನಿಂದ ಮಹಾರಾಷ್ಟ್ರಕ್ಕೆ ತೆರಳಿದ್ದರು. ಇದು ಮಹಾರಾಷ್ಟ್ರ ಪರ ಅವರ ಎರಡನೇ ಪಂದ್ಯವಾಗಿದೆ. ಇದಕ್ಕೂ ಮೊದಲು ಪೃಥ್ವಿ 72 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದು ರಣಜಿ ಟ್ರೋಫಿಯಲ್ಲಿ ಆರನೇ ವೇಗದ ಶತಕವಾಗಿದೆ. ಪೃಥ್ವಿ ದೀರ್ಘಕಾಲದಿಂದ ಭಾರತ ತಂಡದಿಂದ ಹೊರಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಈ ಅದ್ಭುತ ಇನ್ನಿಂಗ್ಸ್ಗಳು ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ಅಲ್ಲದೆ, ಈ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾ ಪರ ಆಡುವ ಕನಸು ಕಾಣುತ್ತಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂವರು ಭಾರತೀಯರು ವೇಗದ ದ್ವಿಶತಕ ಬಾರಿಸಿದ್ದಾರೆ. ರವಿ ಶಾಸ್ತ್ರಿ ಮತ್ತು ತನ್ಮಯ್ ಅವರಿಗಿಂತ ಪೃಥ್ವಿ ಶಾ ಹಿಂದಿದ್ದಾರೆ. ತನ್ಮಯ್ 2024 ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ 119 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ರವಿ ಶಾಸ್ತ್ರಿ 1985 ರಲ್ಲಿ ಬರೋಡಾ ವಿರುದ್ಧ 123 ಎಸೆತಗಳಲ್ಲಿ ದ್ವಿಶತಕದ ಸಾಧನೆ ಮಾಡಿದರು. ಈಗ ಪೃಥ್ವಿ ಶಾ ಚಂಡೀಗಢ ವಿರುದ್ಧ ಕೇವಲ 141 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದಾರೆ.
October 27, 2025 4:19 PM IST